ಮುಧೋಳದಿಂದ ಬೆಳಗಾವಿ: ಹಸುಳೆ ಜೀವ ರಕ್ಷಣೆಗೆ ಝೀರೋ ಟ್ರಾಫಿಕ್

ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗೆ ಬರುತ್ತಿದ್ದ ಮಗುವಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ| ಮುಧೋಳದಿಂದ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ನೆರವು| ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 13 ದಿನ ಮಗು| ಬೆಳಗಾವಿ ನಗರ ಪೊಲೀಸರ ಸಹಕಾರಕ್ಕೆ ಮಗುವಿನ ತಾಯಿ ಕೃತಜ್ಞತೆ| ಪೊಲೀಸರ ಕಾರ್ಯಕ್ಕೆ ವಾಹನ ಸವಾರರ ಶ್ಲಾಘನೆ|

Zero Traffic for Child  Care in Belagavi

ಬೆಳಗಾವಿ(ಡಿ.16): ಸದಾಕಾಲ ಸಂಚಾರ ದಟ್ಟಣೆಯಲ್ಲಿರುವ ಬೆಳಗಾವಿ, ಬಾಲಗಕೋಟೆ ರಸ್ತೆಯಲ್ಲಿ ಭಾನುವಾರ ತೀವ್ರ ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗೆ ಬರುತ್ತಿದ್ದ ಮಗುವಿಗೆ ಝೀರೋ ಟ್ರಾಫಿಕ್ ಕಲ್ಪಿಸಿ ಮೂಲಕ ಮಗುವಿನ ಜೀವ ರಕ್ಷಕರಾಗಿರುವ ಬೆಳಗಾವಿ ನಗರ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. 

ಬಾಗಲಕೋಟೆ ಜಿಲ್ಲೆಯ ಮುಧೋಳದ ಮುಬಿನಾ ಯಲಿಗಾರ ಎಂಬುವರು ತಮ್ಮ 13 ದಿನದ ಮಗುವಿನ ತೀವ್ರ ಹೃದಯ ಸಂಬಂಧಿ ಕಾಯಿಲೆಗೆ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಆಂಬ್ಯುಲೆನ್ಸ್ ಮೂಲಕ ಮುಧೋಳದಿಂದ ನಗರಕ್ಕೆ ಕರೆತರುತ್ತಿದ್ದ ಸಂದರ್ಭದಲ್ಲಿ ಈ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮಗೆ ಮಾಹಿತಿ ಲಭ್ಯವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಕ್ಷಣ ನಗರ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶಕುಮಾರ ಅವರು, ಮಾರಿಹಾಳ, ಮಾಳಮಾರುತಿ ಹಾಗೂ ಬೆಳಗಾವಿ ಉತ್ತರ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಯುಕ್ತರ ಸೂಚನೆಯಂತೆ ಮಾರಿಹಾಳ ಠಾಣೆಯ ಪೊಲೀಸರು ಝೀರೋ ಟ್ರಾಫಿಕ್‌ಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಂಡು ಆಬ್ಯುಲೆನ್ಸ್‌ಗೆ ಬೆಂಗಾವಲು ನೀಡಿದ್ದಾರೆ. 

ನಂತರ ಸಿಂದೊಳ್ಳಿ ಕ್ರಾಸ್‌ನಿಂದ ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿ ಬೆಂಗಾವಲು ನೀಡಿದ್ದಾರೆ. ಬಳಿಕ ಬೆಳಗಾವಿ ಉತ್ತರ ಸಂಚಾರ ಠಾಣೆಯ ಪೊಲೀಸರ ಬೆಂಗಾವಲಿನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಸಾಯಂಕಾಲ 4.20 ಗಂಟೆ ಸುಮಾರಿಗೆ ಕರಡಿಗುದ್ದಿ ಗ್ರಾಮದಿಂದ 4.45 ಗಂಟೆ ವರೆಗೆ ಝೀರೋ  ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಬೆಳಗಾವಿ ನಗರ ಪೊಲೀಸರ ಸಹಕಾರಕ್ಕೆ ಮಗುವಿನ ತಾಯಿ ಮುಬಿನಾ ಯಲಿಗಾರ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ನಗರಕ್ಕೆ ಕರೆತರುತ್ತಿದ್ದ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮುಂಜಾಗೃತವಾಗಿ ಝೀರೋ ಟ್ರಾಫಿಕ್ ಮಾಡಿದ್ದರಿಂದ ಎಲ್ಲೆಂದರಲ್ಲಿ ವಾಹನಗಳು ನಡು ರಸ್ತೆಯಲ್ಲಿ ನಿಂತವು. 

ಈ ವೇಳೆ ವಾಹನ ಸವಾರರು ಮೊದಲಿಗೆ ಯಾವುದೋ ಮಂತ್ರಿಗಳ ಆಗಮನಕ್ಕೆ ನಮಗೆಲ್ಲ ಈ ಶಿಕ್ಷೆ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ನಂತರ ಪೊಲೀಸ್ ಬೆಂಗಾವಲಿನೊಂದಿಗೆ ವೇಗವಾಗಿ ಆಂಬ್ಯುಲೆನ್ಸ್ ಬರುವುದನ್ನು ನೋಡಿದ ಜನರು, ಮರುಕಪಟ್ಟರು. ನಂತರ ಸ್ಥಳದಲ್ಲಿದ್ದ ಪೊಲೀಸ್‌ ಸಿಬ್ಬಂದಿಯನ್ನು ವಿಚಾರಿಸಿದ ವಾಹನ ಸಾವರರು, ಬೆಳಗಾವಿ ನಗರದಲ್ಲಿ ರಾಜಕಾರಣಿಗಳು ಅಥವಾ ಹಿರಿಯ ಅಧಿಕಾರಿಗಳ ಸಂದರ್ಭದಲ್ಲಿ ಇಂತಹ ವ್ಯವಸ್ಥೆ ಮಾಡಲಾಗುತ್ತಿರುವುದು ಸಾಮಾನ್ಯ. ಆದರೆ ಆಂಬ್ಯುಲೆನ್ಸ್‌ಗಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿರುವುದು ಇದೇ ಮೊದಲ ಬಾರಿಗೆಯಾಗಿದ್ದರಿಂದ ಕಾರಣ ಏನು ಎಂದು ಪ್ರಶ್ನಿಸಿದ್ದಾರೆ. 

ವಾಹನ ಸವಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಬ್ಬಂದಿ ಈ ಆಂಬ್ಯುಲೆನ್ಸ್‌ನಲ್ಲಿ ಮುಧೋಳದಿಂದ ಕೇವಲ 13 ದಿನ ಹಸೂಳೆಗೆ ತೀವ್ರ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಝೀರೋ ಟ್ರಾಫಿಕ್ ವ್ಯವಸ್ಥೆ ಜತೆಗೆ ಬೆಂಗಾವಲಿನೊಂದಿಗೆ ಕರೆತರಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಈ ಮಾಹಿತಿ ಪಡೆದ ನಗರ ಜನತೆ ಹಾಗೂ ವಾಹನ ಸವಾರರು ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 
 

Latest Videos
Follow Us:
Download App:
  • android
  • ios