ಚಿತ್ರದುರ್ಗ[ಜೂ.25]: ಐಎಂಎ ಹಗರಣದ ರೂವಾರಿ ಮನ್ಸೂರ್‌ ಪರ ನಿಲ್ಲುತ್ತೇನೆ ಎಂದು ಆಹಾರ ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದಾರೆ. ಇದು ಹಗರಣದಲ್ಲಿ ಅವರೂ ಶಾಮೀಲಾಗಿರುವುದನ್ನು ತೋರಿಸುತ್ತದೆ ಎಂದು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ನೇರ ಆರೋಪ ಮಾಡಿದ್ದಾರೆ. ಜತೆಗೆ, ಈ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಶ್ರೀರಾಮುಲು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಐಎಂಎ ಹಗರಣಕ್ಕೆ ಸಂಬಂಧಿಸಿ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಗರಣದ ರೂವಾರಿ ಮನ್ಸೂರ್‌ ಖಾನ್‌ಗೆ ಸರ್ಕಾರವೇ ರಕ್ಷಣೆ ನೀಡುತ್ತಿದೆ. ಇವತ್ತಿಗೂ ಕಾಂಗ್ರೆಸ್‌ ಜೊತೆ ಮನ್ಸೂರ್‌ ನಂಟು ಹೊಂದಿದ್ದಾರೆ. ಇಷ್ಟೇ ಅಲ್ಲದೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಮೀರ್‌ ಅಹಮದ್‌ ಜೊತೆಯೂ ಹಗರಣದ ರೂವಾರಿ ಸಂಪರ್ಕದಲ್ಲಿದ್ದಾರೆ. ರಾಜ್ಯ ಹಿಂದೆಂದೂ ಕಾಣದಂಥ ಹಗರಣ ಇದಾಗಿದ್ದು, ಮುಸ್ಲಿಮರಿಗೆ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಶ್ರೀರಾಮಲು ಆಗ್ರಹಿಸಿದರು.

ಕಣ್ಣೀರಿನ ಶಾಪ: ಬಡವರ ರಕ್ಷಣೆ ಮಾಡಬೇಕಾದವರು ಆರೋಪಿಯ ರಕ್ಷಣೆಗೆ ನಿಂತಿದ್ದಾರೆ. ಮುಸ್ಲಿಂ ಮಹಿಳೆಯರ ಕಣ್ಣೀರಿನ ಶಾಪ ಈ ಮೈತ್ರಿ ಸರ್ಕಾರವನ್ನು ತಟ್ಟದೇ ಬಿಡದು. ನೊಂದ ಮುಸ್ಲಿಂ ಮಹಿಳೆಯರ ಕಣ್ಣೀರಿನಿಂದಲೇ ಈ ಸರ್ಕಾರ ಪತನವಾಗಲಿದೆ ಎಂದರು ಶ್ರೀರಾಮುಲು.