ಮಂಗಳೂರು(ಫೆ.08): ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಉದ್ದುದ್ದ ಉಗುರಿನ, ದೊಡ್ಡ ದೇಹದ ಭಯಂಕರ ಆಕೃತಿಯೊಂದು ಜನರ ಗಮನ ಸೆಳೆದಿತ್ತು. ಬೃಹದಾಕಾರದ ಪೆಡಂಭೂತ ಭಯ ಹುಟ್ಟಿಸುವಂತಿದ್ದರೂ ಅದರೊಳಗಿದ್ದ ಮನಸಿಗೆ ಇದೀಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಯುವಕ ವಿಕ್ಕಿ ಶೆಟ್ಟಿ ಬೆದ್ರ. ನೇತಾಜಿ ಯುವ ಬ್ರಿಗೇಡ್‌ನ ಯುವಕನೊಬ್ಬ ಬೂದಿ ಬಣ್ಣದ ವೇಷ, ಭೂಷಣ ಧರಿಸಿ ಉದ್ದುದ್ದ ಉಗುರುಗಳೊಂದಿಗೆ ಅಜಾನುಬಾಹುವಾಗಿ ಜನರ ನಡುವೆ ಓಡಾಡುತ್ತಿದ್ದ. ಈತನೇ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಾಪ್‌ ಸ್ಟೇಟಸ್‌ಗಳಲ್ಲಿ ರಾರಾಜಿಸುತ್ತಿರುವ ಯುವಕ.

ಕಟೀಲು ಬ್ರಹ್ಮಕಲಶೋತ್ಸವದಲ್ಲಿ ಭಾವುಕರಾದ ಶಿಲ್ಪಾ ಶೆಟ್ಟಿ!

ಬ್ಲಡ್‌ ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದ 5 ವರ್ಷದ ಬಾಲಕಿ ನಿಹಾರಿಕಾಳ ಚಿಕಿತ್ಸೆಗಾಗಿ ವಿಕ್ಕಿ ಶೆಟ್ಟಿ ಬೆದ್ರ ವಿಕಾರ ವೇಷ ಧರಿಸಿದ್ದಾರೆ. ಸಂಘದ ಸದಸ್ಯರೊಂದಿಗೆ ಸೇರಿ ಕಟೀಲು ಬ್ರಹ್ಮ ಕಲಶೋತ್ಸವ ಸಂದರ್ಭ ಬಾಲಕಿಯ ಚಿಕಿತ್ಸೆಗೆ ಹಣ ಸಂಗ್ರಹಿಸಿದ್ದಾರೆ.

ಬ್ರಹ್ಮಕಲಶೋತ್ಸವಕ್ಕೆ ದೂರದಿಂದ ಬಂದ ಶಿಲ್ಪಾ, ತರಕಾರಿ ಕತ್ತರಿಸಿದ ಕಟೀಲ್

ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ನಿಹಾರಿಕಾಳ ಚಿಕಿತ್ಸೆಗೆ 10 ಲಕ್ಷ ರೂಪಾಯಿಯ ಅಗತ್ಯವಿತ್ತು. ಇದನ್ನು ಅರಿತ ನೇತಾಜಿ ಯುವ ಬ್ರಿಗೇಡ್‌ ತಂಡ ತಕ್ಷಣ ಕಾರ್ಯ ಪ್ರವೃತ್ತವಾಗಿದೆ. ಬ್ರಹ್ಮಕಲಶೋತ್ಸವ ಸಂದರ್ಭ ವಿಶೇಷ ವೇಷ ಧರಿಸಿ 3,00,136 ರೂಪಾಯಿ ಸಂಗ್ರಹಿಸಿ ಬಾಲಕಿಯ ಪೋಷಕರಿಗೆ ಹಸ್ತಾಂತರಿಸಲಾಗಿದೆ.