ಕಾರವಾರ (ಸೆ.17): ಕಾರವಾರ ಮೂಲದ ಯುವಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಕುವೈತ್‌ನಲ್ಲಿ ಭಾನುವಾರ ನಡೆದಿದೆ. 

ಬಡತನ ಹಿನ್ನೆಲೆಯಲ್ಲಿ ಮಗನ ಮೃತದೇಹವನ್ನು ಭಾರತಕ್ಕೆ ತರಲಾಗದೇ ಮೃತರ ತಾಯಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಮೂಲಕ ಕುವೈತಿನ ಭಾರತೀಯ ದೂತವಾಸದ ನೆರವು ಕೇಳಿದ್ದಾರೆ.

ಇಲ್ಲಿನ ಕ್ರಿಶ್ಚಿಯನ್‌ ವಾಡಾದ ನಿವಾಸಿ ರೊಬಿನ್ ಸನ್ ಫ್ರಾನ್ಸಿಸ್ ರುಜಾರಿಯೋ ಎಂಬ ಯುವಕ ಕುವೈತ್ ನ ಫರ್ವಾನಿಯದ ಫುಡ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ಇಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮಗನ ಮೃತದೇಹ ಭಾರತಕ್ಕೆ ತರಲು ತಾಯಿ ಮೇರಿ ಫ್ರಾನ್ಸಿಸ್ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಆರ್ಥಿಕ ಮುಗ್ಗಟ್ಟು ಇರುವ ಕಾರಣ ತನ್ನ ಮಗನ ಮೃತ ದೇಹವನ್ನು ಭಾರತಕ್ಕೆ ತರಲು ತನ್ನಿಂದ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಕುವೈತಿನ ಭಾರತೀಯ ದೂತಾವಾಸದ ಜೊತೆ ಚರ್ಚಿಸಿ ತನ್ನ ಮಗನ ಮೃತದೇಹವನ್ನು ಗೋವಾ ಮೂಲಕ ಕಾರವಾರಕ್ಕೆ ತರಲು ನೆರವು ನೀಡಬೇಕೆಂದು ಕೇಳಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತವೂ ನೆರವಿನ ಭರವಸೆ ನೀಡಿದೆ.