* ಉದ್ಯೋಗದ ನಿಮಿತ್ತ ಇರಾನ್‌ಗೆ ತೆರಳಿ ನೌಕೆಯಲ್ಲಿ ಸಿಲುಕಿದ್ದ ಯಾಸೀನ್‌*  3800 ಡಾಲರ್‌ ಸಂಬಳದಲ್ಲಿ 2000 ಡಾಲರ್‌ ಕೊಡಿಸುವಲ್ಲಿ ಯಶಸ್ವಿಯಾದ ಫೋರ್ಂ ತಂಡ*  ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದ ಯಾಸೀನ್‌ 

ಭಟ್ಕಳ(ಆ.05): ಉದ್ಯೋಗ ಅರಸಿ ಇರಾನ್‌ಗೆ ಹೋಗಿದ್ದ ಭಟ್ಕಳದ ಯುವಕ ಯಾಸೀನ್‌ ಶಾಹ ಮಕಾನ್‌ದಾರ್‌ (31) ಕಳೆದ 20 ತಿಂಗಳುಗಳ ಕಾಲ ಯಾತನೆ ಅನುಭವಿಸಿ ಬುಧವಾರ ತಾಯ್ನಾಡಿಗೆ (ಬೆಂಗಳೂರಿಗೆ) ಮರಳಿ ಬಂದಿದ್ದಾನೆ.

ಭಟ್ಕಳದ ಅಜಾದ್‌ ನಗರದ ನಿವಾಸಿ ಯಾಸೀನ್‌ ಶಾಹ ಮಕಾನ್‌ದಾರ ಉದ್ಯೋಗಕ್ಕಾಗಿ ವಿದೇಶದಿಂದ ವಿದೇಶಕ್ಕೆ ತೆರಳುವ ಸಲುವಾಗಿ ವೀಸಾ ಕೊಡಿಸುವ ಏಜೆಂಟ್‌ ಬಳಿ ಹೇಳಿಕೊಂಡಿದ್ದ. ಇರಾನ್‌ ನೌಕೆಯೊಂದರಲ್ಲಿ ಉತ್ತಮ ನೌಕರಿ ದೊರಕಿಸಿಕೊಡುವುದಾಗಿ ಹೇಳಿ ಏಜೆಂಟರು ವೀಸಾ ನೀಡಿದ್ದರು. ಇದನ್ನು ನಂಬಿದ್ದ ಈತ 20 ತಿಂಗಳು ಸಮುದ್ರದಲ್ಲಿ ನಿಂತುಕೊಂಡಿದ್ದ ನೌಕೆಯೊಂದರಲ್ಲಿಯೇ ಬಂಧಿಯಾಗಿದ್ದು ಊಟ, ತಿಂಡಿಗೂ ಪರದಾಡಿದ ಪ್ರಸಂಗ ನಡೆದಿತ್ತು.

ಹೇಗಾದರೂ ಮಾಡಿ ತಾಯ್ನಾಡಿಗೆ ಮರಳಲು ಹಂಬಲಿಸುತ್ತಿದ್ದ ಯಾಸೀನ್‌ಗೆ ಏಮ್ಸ್‌ ಇಂಡಿಯಾ ಫೋರಂನ ಶಿರಾಲಿಯ ಮುಝಪ್ಪರ್‌ ಶೇಖ್‌ ಮತ್ತವರ ತಂಡ ಬೆಂಬಲವಾಗಿ ನಿಂತು ಸಾಕಷ್ಟು ಪ್ರಯತ್ನ ನಡೆಸಿತ್ತು. ಭಾರತ ಮತ್ತು ಇರಾನ್‌ ಸರ್ಕಾರದ ಸಹಕಾರದಿಂದ ತಾಯ್ನಾಡಿಗೆ ಕರೆತರುವಲ್ಲಿ ಯಶಸ್ವಿಯಾಗಿದೆ. ಆತನನ್ನು ಬಿಡುಗಡೆಗೊಳಿಸಿದ್ದಲ್ಲದೇ ಆತನಿಗೆ ಬರಬೇಕಾಗಿದ್ದ 3800 ಡಾಲರ್‌ ಸಂಬಳದಲ್ಲಿ 2000 ಡಾಲರ್‌ ಕೊಡಿಸುವಲ್ಲಿ ಕೂಡಾ ಫೋರ್ಂ ತಂಡ ಯಶಸ್ವಿಯಾಗಿದೆ.

ಉತ್ತರ ಕನ್ನಡ: ಗುಡ್ಡಗಳ ಮೇಲಿನ ಬದುಕಿಗೆ ಬೇಕು ಭದ್ರತೆ

ನನ್ನ 20 ತಿಂಗಳ ಯಾತನೆಗೆ ತೆರೆಬಿದ್ದಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡಿದ್ದೇನೆ. ನನ್ನನ್ನು ಕಷ್ಟದಿಂದ ಪಾರುಮಾಡಿದ ಏಮ್ಸ್‌ ಇಂಡಿಯಾ ಫೋರಂನ ಶಿರಾಲಿ ಮುಝಫ್ಫರ್‌ ಶೇಖ್‌ ಹಾಗೂ ಭಟ್ಕಳ ಸಮುದಾಯದ ಯೂಸೂಫ್‌ ಬರ್ಮಾವರ್‌, ಸರಫ್ರಾಝ್‌ ಶೇಖ ಅಫ್ಝಲ್‌ಎಸ್‌.ಎಂ ಹಾಗೂ ನ್ಯಾಯವಾದಿ ಯಾಸಿರ್‌ ಆರಫಾತ್‌ ಮಕಾದ್ದಾರ್‌ರಿಗೆ ಧನ್ಯವಾದ ತಿಳಿಸುವುದಾಗಿ ಯಾಸೀನ್‌ ಮಕಾನದಾರ ತಿಳಿಸಿದ್ದಾರೆ. ಗುರವಾರ ಭಟ್ಕಳ ತಲುಪುದಾಗಿ ತಿಳಿಸಿದ್ದಾರೆ.

ಇರಾನ್‌ನಿಂದ ಬೆಂಗಳೂರಿಗೆ ಬಂದ ನನಗೆ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಲ್ಲದೆ ಭಟ್ಕಳಕ್ಕೆ ಹೋಗಲು ಬಸ್‌ ಟಿಕೆಟ್‌, ಊಟ ಎಲ್ಲ ವ್ಯವಸ್ಥೆಯನ್ನು ಏಮ್ಸ್‌ ಇಂಡಿಯಾ ಫೋರ್ಂ ಸಂಸ್ಥೆ ಮಾಡಿದೆ. ಕಳೆದ 20 ತಿಂಗಳಿಂದ ನಾನು ಇರಾನ್‌ನಲ್ಲಿ ತುಂಬಾ ಕಷ್ಟಮತ್ತು ನೋವು ಅನುಭವಿಸಬೇಕಾಗಿ ಬಂತು. ಎಜೆಂಟರ್‌ ಮೂಲಕ ವಿದೇಶಕ್ಕೆ ಉದ್ಯೋಗಕ್ಕೆ ಹೋಗುವ ಪೂರ್ವದಲ್ಲಿ ಸಾಕಷ್ಟು ಪೂರ್ವಾಪರ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಯಾರೂ ಮೋಸ ಹೋಗಿ ಕಷ್ಟಕ್ಕೆ ಸಿಲುಕಬಾರದು ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಅವರು ತಿಳಿಸಿದರು.