ಉಳ್ಳಾಲ(ಫೆ.29): ತನ್ನ ಕಾಲೇಜಿನ ವಿದ್ಯಾರ್ಥಿನಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಡೆತ್ ನೋಟಲ್ಲಿ ಬರೆದಿಟ್ಟ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ರೈಲಿಗೆ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ರೈಲ್ವೆ ನಿಲ್ದಾಣ ಸಮೀಪದ ಸೋಮೇಶ್ವರದಲ್ಲಿ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. 

ಬೆಳಗಾವಿ ಜೈನ್ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿ ಸಮ್ಮೇದ್ ರಾಯಗೌಡ(23) ಆತ್ಮಹತ್ಯೆ ಮಾಡಿಕೊಂ ಡವರು. ಎರಡು ದಿನಗಳ ಹಿಂದೆ ಬೆಳಗಾವಿಯಿಂದ ನಾಪತ್ತೆಯಾಗಿದ್ದ ಈತನ ಕುರಿತು ಹೆತ್ತವರು ಅಲ್ಲಿನ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶುಕ್ರವಾರ ಬೆಳಗ್ಗೆ ಸೋಮೇಶ್ವರ ರೈಲ್ವೆ ಹಳಿಯಲ್ಲಿ ಆತ್ಮಹತ್ಯೆ ನಡೆಸಿರುವುದು ಬೆಳಕಿಗೆ ಬಂದಿದೆ. ರೈಲ್ವೆ ನಿಲ್ದಾಣದಲ್ಲಿ ಕೆಲ ಹೊತ್ತುಗಳ ಕಾಲ ಕುಳಿತಿದ್ದ ಸಮ್ಮೇದ್ ರೈಲು ಬರುತ್ತಿದ್ದಂತೆ ಓಡಿ ಹೋಗಿ ತಲೆಯಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. 

ಜೇಬಿನಲ್ಲಿ ಲಾಡ್ಜ್ ಒಂದರ ಕೀಲಿ ಕೈ ಕೂಡಾ ಪತ್ತೆಯಾಗಿತ್ತು. ಸ್ಥಳೀಯ ಲಾಡ್ಜ್‌ನಲ್ಲಿ ಉಳಿದುಕೊಂಡು ಬೆಳಗ್ಗೆ ಉಳ್ಳಾಲ ರೈಲ್ವೆ ನಿಲ್ದಾಣಕ್ಕೆ ಬಂದು ಆತ್ಮಹತ್ಯೆ ನಡೆಸಿರುವ ಶಂಕೆ ಇದೆ. ಮಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಫೋಟೋ ಮೂಲಕ ಬ್ಲ್ಯಾಕ್ ಮೇಲ್!:

ಸಮ್ಮೇದ್ ಗೌಡ ಜೇಬಿನಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ತನ್ನ ಸಾವಿಗೆ ತನ್ನದೇ ಕಾಲೇಜಿನಲ್ಲಿ ದ್ವಿತೀಯ ಇಲೆಕ್ಟ್ರಾನಿಕ್ ವಿಭಾಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಕಾರಣ ಎಂದು ಬರೆಯಲಾಗಿದೆ. ‘ಫೋಟೋ ಒಂದನ್ನು ಇಟ್ಟುಕೊಂಡು ಹಣಕ್ಕಾಗಿ ನಿರಂತರ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ. ಇದರಿಂದ ಮಾನಸಿಕವಾಗಿ ನೊಂದು ಕೃತ್ಯ ಎಸಗುತ್ತಿದ್ದೇನೆ. ಮಮ್ಮಿ, ಅಜ್ಜಿ ಎಲ್ಲರೂ ಕ್ಷಮಿಸಿ. ಅನೇಕ ಬಾರಿ ತನ್ನನ್ನು ತಿದ್ದಲು ಪ್ರಯತ್ನಿಸಿದ್ದೇನೆ. ಆದರೆ ಸಾಧ್ಯವಾಗಿಲ್ಲ. ಅದಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಬರೆಯಲಾಗಿತ್ತು.