ಬೆಳಗಾವಿ(ಮೇ.11): ವಿದ್ಯುತ್‌ ಶಾಕ್‌ನಿಂದ ಪ್ರಜ್ಞೆತಪ್ಪಿ ಬಿದ್ದಿದ್ದ ತಂಗಿಯನ್ನು ಎಚ್ಚರಗೊಳಿಸಲು ನೀರು ತರಲು ಹೋಗುತ್ತಿದ್ದ ಅಕ್ಕ ಆಯತಪ್ಪಿ ವಿದ್ಯುತ್‌ ತಂತಿ ಮೇಲೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ತಿಗಡೊಳ್ಳಿಯಲ್ಲಿ ಭಾನುವಾರ ನಡೆದಿದೆ.

ಸಂಜೋತಾ ಗುಂಡಪ್ಪ ಜಾಯ್ಕನವರ(22) ಮೃತಪಟ್ಟಿರುವ ಯುವತಿ. ಸದ್ಯ ವಿದ್ಯುತ್‌ ಶಾಕ್‌ ಹೊಡೆಸಿಕೊಂಡು ಪ್ರಜ್ಞೆತಪ್ಪಿದ ಸಂಜೋತಾಳ ತಂಗಿ ಈಗ ಗುಣಮುಖಳಾಗಿದ್ದಾಳೆ.

ತಬ್ಲೀಘಿ ಆಯ್ತು, ಈಗ ಅಜ್ಮೀರ್‌ ಕಂಟಕ: ಕೊರೋನಾ ಕಾಟಕ್ಕೆ ಬೆಳಗಾವಿ ಸುಸ್ತೋ ಸುಸ್ತು..!

ಏನಿದು ಘಟನೆ?:

ತಿಗಡೊಳ್ಳಿಯಲ್ಲಿ ಭಾನುವಾರ ಶೆಡ್‌ಗೆ ಆಕಸ್ಮಿಕವಾಗಿ ವಿದ್ಯುತ್‌ ತಂತಿ ತಗುಲಿ ಯುವತಿಯೊಬ್ಬಳು ಪ್ರಜ್ಞೆತಪ್ಪಿ ಬಿದ್ದಿದ್ದಳು. ಈಕೆಯ ಮುಖಕ್ಕೆ ನೀರು ಸಿಂಪಡಿಸಿ ಎಚ್ಚರಗೊಳಿಸಬೇಕು ಎಂಬ ಧಾವಂತದಲ್ಲಿ ಓಡಿ ಹೋಗುತ್ತಿರುವಾಗ ಎಡವಿ ತುಂಡಾಗಿ ಬಿದ್ದಿದ್ದ ತಂತಿಯ ಮೇಲೆ ಬಿದ್ದಿದ್ದಾಳೆ. ಅಲ್ಲಿಯೇ ಸಂಜೋತಾ ಅಸುನೀಗಿದ್ದಾಳೆ.

ವಿದ್ಯುತ್‌ ಶಾಕ್‌ ಹೊಡೆಸಿಕೊಂಡ ಹುಡುಗಿ ಸುಧಾರಿಸಿಕೊಂಡು ಆರೋಗ್ಯವಾಗಿದ್ದಾಳೆ. ಘಟನೆ ತಿಳಿದು ಚ.ಕಿತ್ತೂರು ಪೊಲೀಸರು ಮತ್ತು ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಘಟನೆ ಪರಿಶೀಲಿಸಿದ್ದಾರೆ. ಚ.ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸಂಜೋತಾ ಜಾಯ್ಕನವರ ಅವರು ಪಿಎಸ್‌ಐ ಹುದ್ದೆಗೆ ನಡೆದ ಪರೀಕ್ಷೆ ಬರೆದಿದ್ದಾಳೆ ಎಂದು ತಿಳಿದು ಬಂದಿದೆ.