Asianet Suvarna News Asianet Suvarna News

ವಾಹನ ಸವಾರರೆ ನಿಯಮ ಮೀರಿದರೆ ನಿಮಗೆ ಪೆಟ್ರೋಲ್‌ ಸಿಗುವುದಿಲ್ಲ..!

ಅಪಘಾತ ನಿಯಂತ್ರಣದ ಉದ್ದೇಶದಿಂದ  ಪೊಲೀಸರು ಹೊಸ ಆದೇಶವೊಂದನ್ನು ಹೊರಡಿಸಿದ್ದಾರೆ. ನೀವು ಈ ನಿಯಮ ಮೀರಿದಲ್ಲಿ ನಿಮಗೆ ಪೆಟ್ರೋಲ್ ಸಿಗುವುದಿಲ್ಲ. 

You Don't Wear Helmet you Won't Get Petrol In Bengaluru
Author
Bengaluru, First Published Aug 2, 2019, 7:59 AM IST

ಬೆಂಗಳೂರು [ಆ.02]: ದ್ವಿಚಕ್ರ ವಾಹನ ಸವಾರರೇ ಹೆಲ್ಮೆಟ್‌ ಧರಿಸದೆ ಪೆಟ್ರೋಲ್‌ ಬಂಕ್‌ಗೆ ಹೋದರೆ ನಿಮ್ಮ ವಾಹನಗಳಿಗೆ ಪೆಟ್ರೋಲ್‌ ಹಾಕುವುದಿಲ್ಲ...!

"

ಹೌದು, ಅಪಘಾತ ನಿಯಂತ್ರಿಸುವ ಮೂಲಕ ಸಾವು, ನೋವುಗಳನ್ನು ತಪ್ಪಿಸುವ ಉದ್ದೇಶದಿಂದ ನಗರ ಸಂಚಾರ ಪೊಲೀಸರು ಇಂತಹದೊಂದು ನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಈ ಸಂಬಂಧ ಆದೇಶವೊಂದನ್ನು ಜಾರಿಗೊಳಿಸುವ ಉದ್ದೇಶವಿದ್ದು, ಇಂಡಿಯನ್‌ ಆಯಿಲ್‌, ಶೆಲ್‌, ರಿಲಾಯನ್ಸ್ ಪೆಟ್ರೋಲ್‌ ಸೇರಿದಂತೆ ಎಲ್ಲಾ ಪೆಟ್ರೋಲ್‌ ಬಂಕ್‌ ಹಾಗೂ ಅಸೋಸಿಯೇಷನ್‌ ನವರಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಶುಕ್ರವಾರ ಅಸೋಸಿಯೇಷನ್‌ ಹಾಗೂ ಪೆಟ್ರೋಲ್‌ ಬಂಕ್‌ ಮಾಲಿಕರೊಂದಿಗೆ ಸಭೆ ನಡೆಸಲಾಗುವುದು ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಮೋಟಾರು ವಾಹನ ಕಾಯ್ದೆ-1988 ಕಲಂ 129ರ ಪ್ರಕಾರ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರ ಸುರಕ್ಷತೆಗಾಗಿ ಹೆಲ್ಮೆಟ್‌ ಧರಿಸುವುದು ಕಡ್ಡಾಯ. ಬೆಂಗಳೂರಿನಲ್ಲಿ ದಶಕದಿಂದ ಹೆಲ್ಮೆಟ್‌ ಕಡ್ಡಾಯ ನಿಯಮ ಜಾರಿಗೊಳಿಸಲಾಗಿದೆ. 2016ರ ಜನವರಿಯಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್‌ ಕಡ್ಡಾಯಗೊಳಿಸಲಾಗಿದೆ. ದ್ವಿಚಕ್ರ ವಾಹನ ಅಪಘಾತ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ಹೆಲ್ಮೆಟ್‌ ಧರಿಸದೆ ಇರುವುದೇ ಹೆಚ್ಚಾಗಿದೆ.

ಅಪಘಾತ ಸಂಭವಿಸಿದಾಗ ಮೈಮೇಲೆ ಎಲ್ಲಿಯೂ ಗಾಯ ಇರುವುದಿಲ್ಲ. ದ್ವಿಚಕ್ರ ವಾಹನದಿಂದ ಬಿದ್ದರೆ ತಲೆಗೆ ಪೆಟ್ಟು ಬಿದ್ದು, ಸ್ಥಳದಲ್ಲಿಯೇ ಅಸುನೀಗಿರುವ ಪ್ರಕರಣಗಳೇ ಹೆಚ್ಚು. ಅಲ್ಲದೆ, ಹೆಲ್ಮೆಟ್‌ ಧರಿಸಿದ್ದರೆ ಗಾಯ ಮತ್ತು ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದ್ದು, ಜೀವ ಉಳಿಯಲಿದೆ ಎಂದು ಸಂಚಾರ ಪೊಲೀಸರು ತಿಳಿಸಿದರು. ಈ ನೂತನ ಕ್ರಮದ ನಗರದ 44 ಸಂಚಾರ ಪೊಲೀಸ್‌ ಠಾಣೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಇದು ಕಾನೂನು ಅಲ್ಲ, ಸಮಾಜಿಕ ದೃಷ್ಟಿಯಿಂದ, ಅಪಘಾತ ಸಂಭವಿಸಿದ ವೇಳೆ ಹೆಲ್ಮೆಟ್‌ ಧರಿಸಿದರೆ ಆ ಸವಾರ ಅಥವಾ ಹಿಂಬದಿ ಸವಾರನ ಪ್ರಾಣ ಉಳಿಯಲಿದೆ. ಹೀಗಾಗಿ ಇಂತಹದೊಂದು ನೂತನ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಪೆಟ್ರೋಲ್‌ ಬಂಕ್‌ ಮಾಲಿಕರು ಹಾಗೂ ಅಸೋಸಿಯೇಷನ್‌ ಅವರಿಗೂ ಮನವಿ ಮಾಡಿಕೊಳ್ಳಲಾಗುವುದು ಎಂದು ಹರಿಶೇಖರನ್‌ ಅವರು ಮಾಹಿತಿ ನೀಡಿದರು.

100 ಅಪಘಾತ ಪ್ರಕರಣಗಳು ಸಂಭವಿಸಿದರೆ ಈ ಪೈಕಿ ಶೇ.70ರಷ್ಟುಯುವ ಜನತೆ ಸಾವನ್ನಪ್ಪುತ್ತಿದ್ದು, ಇದರಲ್ಲಿ ಬಹುತೇಕ ಮಂದಿ ಹೆಲ್ಮೆಟ್‌ ಧರಿಸದಿರುವುದು ಕಂಡು ಬಂದಿದೆ. ಹೆಲ್ಮೆಟ್‌ ಧರಿಸಿದ್ದರೆ ವ್ಯಕ್ತಿಯ ಪ್ರಾಣ ಉಳಿಯುತ್ತದೆ. ಅಪಘಾತಗಳ ನಿಯಂತ್ರಣಕ್ಕೆ ಇಂತಹ ಕ್ರಮ ಅನಿವಾರ್ಯ. ಸಮಾಜದಲ್ಲಿನ ವಿದ್ಯಾವಂತರು ಈ ಬಗ್ಗೆ ಎಚ್ಚೆತ್ತುಕೊಂಡು ಸಂಚಾರ ನಿಯಮ ಪಾಲನೆ ಬಗ್ಗೆ ಸಹಕರಿಸಬೇಕು. ಪೆಟ್ರೋಲ್‌ ಬಂಕ್‌ಗಳಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

-ಪಿ.ಹರಿಶೇಖರನ್‌, ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ)

Follow Us:
Download App:
  • android
  • ios