ರೈತ ಹೋರಾಟದ ಶಕ್ತಿ, ಚಳವಳಿಯ ಗಟ್ಟಿತನ ಏನೆಂಬುದು ಕೇಂದ್ರಕ್ಕೆ ಈಗಾಗಲೇ ಗೊತ್ತಾಗಿದೆ| ರೈತರ ನಿರಂತರ 100 ದಿನಗಳ ಹೋರಾಟದಿಂದ ಅನ್ನದಾತ ವಿರೋಧಿ ಕೃಷಿ ಕಾಯ್ದೆಗಳು ಸತ್ತು ಹೋದವು| ಮರಣ ಪ್ರಮಾಣ ಪತ್ರ ಸಿಗಬೇಕಷ್ಟೇ| ದೆಹಲಿ ರೈತ ಚಳವಳಿ ನಿಲ್ಲುವುದಿಲ್ಲ. 300 ದಿನವಾದರೂ ಮುಂದುವರಿಯುತ್ತದೆ: ಯೋಗೇಂದ್ರ ಯಾದವ್‌| 

ಬಳ್ಳಾರಿ(ಮಾ.07): ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ನೀತಿಯನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಈಗಾಗಲೇ ಜಯ ಸಿಕ್ಕಿದೆ. ಸುದೀರ್ಘ ರೈತ ಚಳುವಳಿಯಿಂದ ಜನಪರ ಹೋರಾಟಕ್ಕೆ ಮತ್ತಷ್ಟುಬಲ ಬಂದಿದೆ. ರೈತರು ಒಗ್ಗೂಡಲು ಸಾಧ್ಯವಾಗಿದೆ. ಇನ್ನು ಮುಂದೆ ಯಾವುದೇ ಸರ್ಕಾರಗಳು ರೈತ ವಿರೋಧಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಂಯುಕ್ತ ಕಿಸಾನ್‌ ಮೋರ್ಚಾದ ರಾಷ್ಟ್ರೀಯ ಮುಖಂಡ ಯೋಗೇಂದ್ರ ಯಾದವ್‌ ತಿಳಿಸಿದ್ದಾರೆ. 

ನಗರದ ಎಪಿಎಂಸಿ ಆವರಣದಲ್ಲಿ ಶನಿವಾರ ರೈತ ಸಂಘದಿಂದ ಹಮ್ಮಿಕೊಂಡಿದ್ದ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೈತ ಹೋರಾಟದ ಶಕ್ತಿ, ಚಳವಳಿಯ ಗಟ್ಟಿತನ ಏನೆಂಬುದು ಕೇಂದ್ರಕ್ಕೆ ಈಗಾಗಲೇ ಗೊತ್ತಾಗಿದೆ. ರೈತರ ನಿರಂತರ 100 ದಿನಗಳ ಹೋರಾಟದಿಂದ ಅನ್ನದಾತ ವಿರೋಧಿ ಕೃಷಿ ಕಾಯ್ದೆಗಳು ಸತ್ತು ಹೋದವು. ಮರಣ ಪ್ರಮಾಣ ಪತ್ರ ಸಿಗಬೇಕಷ್ಟೇ. ದೆಹಲಿ ರೈತ ಚಳವಳಿ ನಿಲ್ಲುವುದಿಲ್ಲ. 300 ದಿನವಾದರೂ ಮುಂದುವರಿಯುತ್ತದೆ. ನಮ್ಮ 100 ದಿನಗಳ ಹೋರಾಟ ಫಲ ನೀಡಲಿಲ್ಲ ಎಂದು ಯಾವ ರೈತರು ನೊಂದುಕೊಂಡಿಲ್ಲ.

ದಿನ ದಿನಕ್ಕೆ ಚಳವಳಿ ಶಕ್ತಿ ಹೆಚ್ಚುತ್ತಿದೆ. ಕೇಂದ್ರದ ಹಠಮಾರಿ ಧೋರಣೆ, ಪ್ರಧಾನಮಂತ್ರಿಗಳ ಅಹಂಕಾರದ 100 ದಿನಗಳು ಪೂರ್ಣಗೊಂಡಿವೆ ಎಂದು ಭಾವಿಸಿದ್ದೇವೆ. ಕೇಂದ್ರದ ದಮನಕಾರಿ ನಿಲುವಿಗೆ ಹೋರಾಟಗಾರರು ಜಗ್ಗುವುದಿಲ್ಲ ಎಂದು ಈಗಾಗಲೇ ಸಂದೇಶ ರವಾನೆಯಾಗಿದೆ ಎಂದು ಹೇಳಿದರು.

MLA,MP ಸೇರಿದಂತೆ ಹಲವರ CD ಇವೆ ಎಂದಿದ್ದ ಸಾಮಾಜಿಕ ಕಾರ್ಯಕರ್ತನಿಗೆ ಪೊಲೀಸ್ ಶಾಕ್

ರೈತ ಹೋರಾಟ 100 ದಿನ ಪೂರ್ಣಗೊಂಡಿತು ಎಂದು ನಮಗೆ ಸಂಭ್ರಮವಿಲ್ಲ. ಕೇಂದ್ರದ ಧೋರಣೆಯ ಬಗ್ಗೆ ನಮಗೆ ತೀವ್ರ ಅಸಮಧಾನವಿದೆ. ಚಳವಳಿ ನಿರತ ರೈತರಿಗೆ ಕೇಂದ್ರ ನೀಡಿದ ಸಮಸ್ಯೆ ಅಷ್ಟಿಷ್ಟಲ್ಲ. ಕೊರೆವ ಚಳಿಯಲ್ಲೂ ವೃದ್ಧರು, ಮಹಿಳೆಯರು, ಮಕ್ಕಳು ಪಾಲ್ಗೊಂಡು ಕೃಷಿ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಇದ್ಯಾವುದನ್ನು ಲೆಕ್ಕಿಸದೆ ಮೊಂಡುತನ ಪ್ರದರ್ಶಿಸುತ್ತಿದೆ ಎಂದು ವಿಷಾಧಿಸಿದರು.

ಕೇಂದ್ರ ಸರ್ಕಾರ ಜನಪರವಾಗಿಲ್ಲ. ರೈತಪರವಾಗಿಲ್ಲ. ದುಡಿವ ಜನರ ಪರವಾಗಿಲ್ಲ ಎಂಬುದು ಗೊತ್ತಾಗಿದೆ. ಮಾನವೀಯತೆ ಮರೆತು ಪ್ರತಿಭಟನಾ ಸ್ಥಳದಲ್ಲಿ ಮುಳ್ಳುಬೇಲಿಯನ್ನು ಹಾಕಿದೆ. ಕೇಂದ್ರದ ಧೋರಣೆ ಜನಸಾಮಾನ್ಯರಿಗೆ ಗೊತ್ತಾಗಬೇಕು ಎಂದೇ ದೇಶಾದ್ಯಂತ ಕಪ್ಪುಬಾವುಟ ಪ್ರದರ್ಶಿಸಲಾಗುತ್ತಿದೆ. ಇದು ಬರೀ ಒಂದೆರೆಡು ರಾಜ್ಯಗಳ ರೈತರ ಹೋರಾಟವಲ್ಲ. ಇಡೀ ದೇಶದ ರೈತರ ಹೋರಾಟ. ಕೃಷಿ ವಲಯ ಉಳಿಯಬೇಕು ಎಂಬ ಹೋರಾಟವಾಗಿದೆ ಎಂದರು.

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಂಜಾಬ್‌ ಕಿಸಾನ್‌ ಸಭಾ ಅಧ್ಯಕ್ಷ ಸತನಮ್‌ ಸಿಂಗ್‌, ಹರಿಯಾಣದ ಜೈಕಿಸಾನ್‌ ಆಂದೋಲನದ ಪ್ರಧಾನ ಕಾರ್ಯದರ್ಶಿ ದೀಪಕ್‌ ಲಂಬೋ, ಸಾಮಾಜಿಕ ಕಾರ್ಯಕರ್ತ ಎಸ್‌.ಆರ್‌. ಹಿರೇಮಠ, ರಾಜ್ಯ ರೈತ ಸಂಘದ ರಾಜ್ಯ ಮುಖಂಡರಾದ ಚಾಮರಸ ಮಾಲಿಪಾಟೀಲ್‌, ಜೆ.ಎಂ. ವೀರಸಂಗಯ್ಯ, ರವಿಕಿರಣ್‌ ಪೊಣಚ್ಚು, ಯು. ಬಸವರಾಜ್‌, ಬಿ.ಆರ್‌. ಪಾಟೀಲ್‌, ಎಂ. ಶಂಕರಣ್ಣ, ಬಿ.ಆರ್‌. ಯಾವಗಲ್‌, ವಿ.ಎಸ್‌. ಶಿವಶಂಕರ್‌, ಸತ್ಯಬಾಬು, ಗೋಣಿ ಬಸಪ್ಪ, ಮಹಾರುದ್ರಗೌಡ, ಪೃಥ್ವಿರಾಜ್‌, ಪಾಲಣ್ಣ, ಅಹ್ಮದ್‌ ಪಾಶ ಸೇರಿದಂತೆ ವಿವಿಧ ರೈತಪರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಹಾಜರಿದ್ದರು.