ಮೈಸೂರು (ನ.21): ಕೇಂದ್ರ ಸರ್ಕಾರ ಮತ್ತು ಡಬ್ಲ್ಯೂಎಚ್‌ಒ ಘೋಷಣೆ ಮಾಡುವವರೆಗೂ ಕೊರೋನಾ ಲಸಿಕೆ ವಿಚಾರದಲ್ಲಿ ಯಾವುದೇ ಔಷಧಿ ಕಂಪನಿಯ ಹೇಳಿಕೆಗಳನ್ನು ನಂಬಬಾರದು ಎಂದು ಸ್ವತಃ ವೈದ್ಯರೂ ಆಗಿರುವ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಪ್ರಯೋಗದ ಹಂತದಲ್ಲಿದ್ದು ಇಷ್ಟುಶೀಘ್ರದಲ್ಲಿ ಕಂಡು ಹಿಡಿಯುವುದು ಸವಾಲಿನ ಕೆಲಸವೇ. 

ಹೀಗಾಗಿ ಲಸಿಕೆ ವಿಚಾರದಲ್ಲಿ ಪ್ರಚಾರ ಹಾಗೂ ರಾಜಕೀಯ ಹೇಳಿಕೆಗಳನ್ನ ನಂಬಬೇಡಿ. ಈಗಲೇ ಬರುತ್ತದೆ, ನಾಳೆ ಬರುತ್ತದೆ ಮುಂತಾದ ಭರವಸೆಗಳಿಗೆ ಸೊಪ್ಪು ಹಾಕಬೇಡಿ ಎಂದರು. 

ಇದೇವೇಳೆ ಕಾಂಗ್ರೆಸ್‌ ಪಕ್ಷದ ನಾಯಕತ್ವದ ಬಗ್ಗೆ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಗೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯದ ಬಗ್ಗೆ ಮಾತನಾಡಿದ್ದಾರೆ ಅನ್ನಿಸುತ್ತಿಲ್ಲ. ಅವರು ಕೇಂದ್ರದ ವಿಚಾರ ಮಾತನಾಡಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದರು.