Asianet Suvarna News Asianet Suvarna News

ಯಾದಗಿರಿಯಲ್ಲಿ ನಿರ್ಮಾಣವಾಗಲಿದೆಯಾ ಮೊಸಳೆ ಪಾರ್ಕ್?

'ಮೊಸಳೆ ಪಾರ್ಕ್’ ನಿರ್ಮಾಣಕ್ಕೆ ಚಿಂತನೆ| ಜನರನ್ನು ರಕ್ಷಿಸಲು ‘ಮೊಸಳೆ ಪಾರ್ಕ್’ ನಿರ್ಮಾಣದ ಹೊಸ ಪ್ರಯೋಗ | ವಡಗೇರಾ ತಾಲೂಕಿನ ಕೃಷ್ಣಾ-ಭೀಮಾ ಸಂಗಮ ಬಳಿ ಪಾರ್ಕ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಚಿಂತನೆ| ಬೆಂಡೆಬೆಂಬಳಿ, ಶಿವಪುರ ಬಳಿ ನೂರಕ್ಕೂ ಹೆಚ್ಚು ಮೊಸಳೆಗಳ ಹಾವಳಿ| ಜನರ ರಕ್ಷಣೆ, ವನ್ಯಜೀವಿಗಳ ಸಂತತಿ ಕಾಪಾಡಿದಂತೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನವೂ ಸಿಗಲಿದೆ| 
 

Yadgir DC Palnned to Start Crocodile Park
Author
Bengaluru, First Published Sep 29, 2019, 1:03 PM IST

ಆನಂದ್ ಎಂ. ಸೌದಿ 

ಯಾದಗಿರಿ(ಸೆ.29): ಪ್ರತಿ ವರ್ಷ ಮೊಸಳೆಗಳ ದಾಳಿಯಿಂದಾಗಿ ಆತಂಕಕ್ಕೆ ಕಾರಣವಾಗುತ್ತಿದ್ದ ಜಿಲ್ಲೆಯ ಕೃಷ್ಣಾ ಹಾಗೂ ಭೀಮಾ ನದಿ ಪಾತ್ರದ ಜನರ ಜೀವ ರಕ್ಷಣೆಯ ಸಲುವಾಗಿ ಜಿಲ್ಲಾಡಳಿತ ಇದೀಗ ಹೊಸ ಚಿಂತನೆಗೆ ಕೈಹಾಕಿದೆ. ಜನರ ಜೀವಕ್ಕೂ ಕುತ್ತಾಗಬಾರದು, ವನ್ಯಜೀವಿಯ ಸಂತತಿಯೂ ಉಳಿಯಬೇಕು ಎಂಬ ಸದುದ್ದೇಶದಿಂದ ‘ಮೊಸಳೆ ಪಾರ್ಕ್’ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಚಿಂತನೆ ನಡೆಸಿದ್ದು, ಈ ಕುರಿತು ಹೊಸದೊಂದು ರೂಪುರೇಷೆ ತಯಾರಿಸುವಂತೆ ಪರಿಸರ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

ಅತಿ ಹೆಚ್ಚು ಮೊಸಳೆಗಳಿಗೆ ಸಾಕ್ಷಿಯಾಗಿರುವ ಇಲ್ಲಿ ಅವುಗಳನ್ನು ಸ್ಥಳಾಂತರ ಮಾಡಲು ಅಷ್ಟೊಂದು ಸುಲಭದ ಕೆಲಸವಲ್ಲ. ಈ ಬದಲು, ಆ ಭಾಗದಲ್ಲಿ ಮೊಸಳೆ ಪಾರ್ಕ್ ಸ್ಥಾಪಿಸುವ ಚಿಂತನೆ ನಡೆಸಲಾಗಿದೆ. ಇದಕ್ಕಾಗಿನ ನಿರ್ಮಾಣದ ಬಗ್ಗೆ ನೀಲನಕ್ಷೆ ತಯಾರಿಸಿ, ಯೋಜನೆ ರೂಪಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಇಂತಹದ್ದೊಂದು ಪ್ರಯೋಗದಿಂದ ಜನರ ರಕ್ಷಣೆ, ವನ್ಯಜೀವಿಗಳ ಸಂತತಿ ಕಾಪಾಡಿದಂತೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನವೂ ನೀಡಿದಂತೆ ಆಗುತ್ತದೆ. ಹೀಗಾಗಿ ಸಂಬಂಧಿತ ಅಧಿಕಾರಿಗಳಿಗೆ ಯೋಜನೆ ರೂಪಿಸುವಂತೆ  ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. 

ಈ ಬಗ್ಗೆ ಮಾತನಾಡಿದ ಯಾದಗಿರಿಯ ಅರಣ್ಯ ಇಲಾಖೆ ಅಧಿಕಾರಿ ಭಾವಿಕಟ್ಟಿ ಅವರು, ನಿಯಮಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ, ಕೇಂದ್ರ ಪರಿಸರ, ಜೀವಿಶಾಸ್ತ್ರ ಹಾಗೂ ಅರಣ್ಯ ಇಲಾಖೆಗಳ ಅನುಮತಿಯನ್ನೂ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು. 

ರಾಜ್ಯದ ದಾಂಡೇಲಿ ಅರಣ್ಯದಲ್ಲಿ ಮೊಸಳೆಗಳಿಗಾಗಿಯೇ ಇಂತಹದ್ದೊಂದು ಜಾಗೆ ಇದೆಯಾದರೂ, ಜನರ ಹಾಗೂ ವನ್ಯಜೀವಿ ರಕ್ಷಣೆಯ ಹಿತದೃಷ್ಟಿಯಿಂದ ಇಲ್ಲಿ ನಿರ್ಮಾಣವಾಗುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ. 

‘ಮೊಸಳೆ ಪಾರ್ಕ್’ ಉದ್ದೇಶ ಯಾಕೆ: 

ಯಾದಗಿರಿ ಜಿಲ್ಲೆಯ ಭೀಮಾ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಮೊಸಳೆ ದಾಳಿ ದುರಂತಗಳು ಪದೇ ಪದೇ ಸಂಭವಿಸುತ್ತಿರುವುದು ಜನರ ಹಾಗೂ ಜಿಲ್ಲಾಡಳಿತದ ಆತಂಕಕ್ಕೆ ಕಾರಣವಾಗಿದೆ. ಬೇಸಿಗೆಯ ಸಂದರ್ಭಗಳಲ್ಲಿ ಭೀಮಾ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿನ ಬಹುತೇಕ ಕಡೆಗಳಲ್ಲಿನ ನೀರು ಬತ್ತಿ ಹೋಗುತ್ತದೆ. ಹೀಗಾಗಿ, ಅಲ್ಲಿನ ಮೊಸಳೆಗಳು ನದಿ ದಡಕ್ಕಷ್ಟೇ ಅಲ್ಲ, ಗ್ರಾಮದ ಹೊರವಲಯದಲ್ಲಿನ ಹೊಲಗದ್ದೆ ಗಳಿಗೂ ಆಗಮಿಸಿ, ವರ್ಷಕ್ಕೊಮ್ಮೆ ಇಂತಹ ಅವಘಡಗಳು ಸಂಭವಿಸಿ, ಸುತ್ತಲಿನ ಗ್ರಾಮಸ್ಥರ ಆತಂಕಕ್ಕೂ ಕಾರಣವಾಗುತ್ತಿವೆ. 

ಇದೇ ಏಪ್ರಿಲ್ ತಿಂಗಳಲ್ಲಿ ನೀರು ಕುಡಿಯಲು ಭೀಮಾ ನದಿಗಿಳಿದಿದ್ದ ಗುಡೂರು ಗ್ರಾಮದ ಕುರಿಗಾಹಿ ಬಸಲಿಂಗಪ್ಪ (50) ಮೊಸಳೆ ದಾಳಿಗೆ ಮೃತಪಟ್ಟಿದ್ದ. ಯಾದಗಿರಿ ತಾಲೂಕಿನ ಸೈದಾಪುರ ಸಮೀಪದ ಜೋಳದಡಗಿ ಸಮೀಪದ ಬ್ರಿಜ್ ಕಂ ಬ್ಯಾರೇಜ್ ಬಳಿ ದುರ್ಘಟನೆ ನಡೆದಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಇಂತಹ ಭೀಕರ ಪ್ರಕರಣಗಳು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದ್ದವು. 

ಈ ಹಿಂದೆಯೂ ಸಹ, ಕೊಂಕಲ್ ಗ್ರಾಮದ ಕುರಿಗಾಹಿ ಮರಿಲಿಂಗಪ್ಪ (24), ತುಮಕೂರು ಗ್ರಾಮದ ಕುರಿಗಾಹಿ ಮರೆಪ್ಪ ಪೂಜಾರಿ (50) ಸಹ ಜೀವ ಕಳೆದುಕೊಂಡಿದ್ದಾರೆ. ಮರಿಲಿಂಗಪ್ಪರ ದೇಹ ಸಿಕ್ಕರೆ, ಮೊಸಳೆಗಳ ದಾಳಿಗೆ ಮರೆಪ್ಪ ದೇಹವೇ ಸಿಗದೆ, ಕೇವಲ ಸಿಕ್ಕ ಚರ್ಮದ ಡಿಎನ್‌ಎ ಪರೀಕ್ಷೆ ಮಾಡಿಸಿ, ಗುರುತಿಸಲಾಗಿತ್ತು. 

ಇನ್ನು, ಮೊಸಳೆಗಳ ದಾಳಿಗೆ ಕೋಡಾಲ ಗ್ರಾಮದ ಶಂಕರಪ್ಪ ಕೈ ಕತ್ತರಿಸಿದ್ದರೆ, ಕಂದಳ್ಳಿ ಗ್ರಾಮದ ಸದ್ದಾಂ ಕಾಲು ಕಳೆದುಕೊಂಡಿದ್ದರು. ಕಳೆದ ತಿಂಗಳು ಆಗಸ್ಟ್ ನಲ್ಲಿ ನೆರೆ ಹಾವಳಿ ಸಂದರ್ಭದಲ್ಲಿ ಬೆಂಡೆಬೆಂಬಳಿ, ಶಿವಪುರ, ಮುಂ ತಾದೆಡೆ ಮೊಸಳೆಗಳು ಜಲಾವೃತಗೊಂಡಿದ್ದ ಗ್ರಾಮಗಳಲ್ಲಿ ನುಗ್ಗಿ, ಪರಿಹಾರ ಕೇಂದ್ರದಲ್ಲಿ ತಾತ್ಕಾ ಲಿಕ ಆಶ್ರಯ ಪಡೆದು ವಾಪಸ್ಸಾಗಿದ್ದ ಜನರಿಗೆ ಮೊಸಳೆ ಆತಂಕ ಮೂಡಿಸಿತ್ತು. 
 

Follow Us:
Download App:
  • android
  • ios