ಬೆಳಗಾವಿ: ಊರ ಹೆಸರೇ ತಪ್ಪು ಕನ್ನಡಕ್ಕೆ ಅವಮಾನ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಲಾಬಾದ ಗ್ರಾಮದ ಮೂಲಕ ಹಾಯ್ದು ಹೋಗುವ ರಾಜ್ಯ ಹೆದ್ದಾರಿ ಮಲಾಬಾದ ಗ್ರಾಮದಲ್ಲಿ ನಾಮಫಲಕದಲ್ಲಿ ಊರ ಹೆಸರಿನ ನಾಮಫಲಕವನ್ನು ತಪ್ಪಾಗಿ ಬರೆದು ಅನರ್ಥಗೊಳಿಸಿರುವುದಕ್ಕೆ ಕನ್ನಡಿಗರ ಆಕ್ರೋಶ
ಸಿದ್ದಯ್ಯ ಹಿರೇಮಠ
ಕಾಗವಾಡ(ಜು.07): ಕನ್ನಡ ಉಳಿಸಿ, ಬೆಳೆಸಲು ಎಲ್ಲೆಡೆ ಕನ್ನಡ ಡಿಂಡಿಮ ಮೊಳಗುತ್ತಿದ್ದರೇ ರಾಜ್ಯ ಹೆದ್ದಾರಿ ಪ್ರಾಧಿಕಾರದವರು ನಾಮಫಲಕಗಳಲ್ಲಿ ಊರುಗಳ ಹೆಸರನ್ನು ತಪ್ಪಾಗಿ ಬರೆದು ಸುಂದರ, ಸರಳ ಭಾಷೆ ಕನ್ನಡಕ್ಕೆ ಅವಮಾನಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಲಾಬಾದ ಗ್ರಾಮದ ಮೂಲಕ ಹಾಯ್ದು ಹೋಗುವ ರಾಜ್ಯ ಹೆದ್ದಾರಿ ಮಲಾಬಾದ ಗ್ರಾಮದಲ್ಲಿ ನಾಮಫಲಕದಲ್ಲಿ ಊರ ಹೆಸರಿನ ನಾಮಫಲಕವನ್ನು ತಪ್ಪಾಗಿ ಬರೆದು ಅನರ್ಥಗೊಳಿಸಿರುವುದಕ್ಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾರಾಷ್ಟ್ರದ ಗಡಿ ಜತ್ತದಿಂದ ಜಾಂಬೋಟಿ ತನಕ ಕೆಲ ನಾಮಫಲಕಗಳಲ್ಲಿ ಊರ ಹೆಸರು ತಪ್ಪು ತಪ್ಪಾಗಿ ಪ್ರಕಟಿಸಿರುವುದರಿಂದ ಪ್ರಯಾಣಿಕರಿಗೆ ಊರುಗಳ ಕಲ್ಪನೆ ತಪ್ಪುವುದರ ಜೊತೆಗೆ ಅನರ್ಥವಾಗಿ ಮುಜುಗರವೂ ಉಂಟಾಗುತ್ತಿದೆ. ಕೆಲ ಊರುಗಳ ಹೆಸರು ಸಂಪೂರ್ಣ ಬದಲಾಗಿ ಬೇರೆ ಅರ್ಥ ಕೊಡುತ್ತಿವೆ. ಈ ನಾಮಫಲಕ ಕಂಡು ನಾವು ಕರ್ನಾಟಕದಲ್ಲಿದ್ದೇಯೋ ಅಥವಾ ಬೇರೆ ರಾಜ್ಯದಲ್ಲಿದ್ದೇವೆಯೋ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ನರೇಗಾದಲ್ಲಿ ಬೆಳಗಾವಿ ಜಿಲ್ಲೆಯೇ ಪ್ರಥಮ
ಮಲಾಬಾದ ಬದಲು ಮಲ್ಲಬಾದ್:
ರಾಜ್ಯ ಹೆದ್ದಾರಿಗಳ ಮೇಲಿನ ಊರುಗಳಿಗೆ ಹಾಕಲಾದ ನಾಮಫಲಕಗಳಲ್ಲಿ ಮಲಾಬಾದ ಬದಲಾಗಿ ಮಲ್ಲಬಾದ್ ಎಂದಾಗಿದೆ. ಇದರಿಂದ ಪ್ರಯಾಣಿಕರಿಗೆ ಅರ್ಥವಾಗುತ್ತಿಲ್ಲ. ಈ ನಾಮಫಲಕ ಹಾಕಿ ಸುಮಾರು ಐದು ಗತಿಸಿದರು ಯಾವೊಬ್ಬ ಅಧಿಕಾರಿಯ ಕಣ್ಣಿಗೂ ಬಿದ್ದಿಲ್ಲವೇನು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಕನ್ನಡ ಕಾವಲು ಸಮೀತಿ ಅಂಥಾ ಒಂದಿದೆ. ಅದು ಏನು ಮಾಡುತ್ತಿದ್ದೆ ಎಂದು ಪ್ರಜ್ಞಾವಂತರು ಕೇಳುತ್ತಿದ್ದಾರೆ. ಊರುಗಳ ಹೆಸರಿನಲ್ಲಿ ಅರ್ಥ, ಅನರ್ಥವಾಗಿ ಪ್ರಯಾಣಿಕರಿಗೆ ಗೊಂದಲ ಆಗುತ್ತಿದೆ. ನಾಮಫಲಕವನ್ನು ಬರೆಸುವಾಗ ಒತ್ತಕ್ಷರ, ದೀರ್ಘ, ಸೊನ್ನೆ ಹೀಗೆ ವ್ಯಾಕರಣ ತಪ್ಪುಗಳನ್ನು ಪ್ರಕಟಿಸಿ ಶಾಸ್ತ್ರೀಯ ಭಾಷೆ ಕನ್ನಡವನ್ನು ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ನಿತ್ಯ ಸಹಸ್ರಾರು ಜನ ಓಡಾಡುವ ರಾಜ್ಯ ಹೆದ್ದಾರಿಯಲ್ಲಿ ನಾಮಫಲಕ ತಪ್ಪಾಗಿರುವುದು ಕನ್ನಡಪರ ಸಂಘಟನೆಗಳ ಕಣ್ಣಿಗೆ ಬಿದ್ದಿಲ್ಲವೇ ಅಥವಾ ಗೊತ್ತಿದ್ದು ಸುಮ್ಮನೆ ಕುಳಿತಿವೆಯೋ?. ಸಣ್ಣ ವಿಷಯಕ್ಕೂ ಹೋರಾಟ, ಪ್ರತಿಭಟನೆ ನಡೆಸುವ ಸಂಘಟನೆಗಳು ಇಷ್ಟೊಂದು ದೊಡ್ಡ ಪ್ರಮಾಣದ ಪ್ರಮಾದಗಳಾಗಿದ್ದರೂ ಸರಿಪಡಿಸಲು ಮುಂದಾಗಿಲ್ಲ. ತಪ್ಪಾಗಿರುವ ನಾಮಫಲಕವನ್ನು ತಕ್ಷನವೇ ಸರಿ ಪಡೆಸುವಂತೆ ಸಂಬಂಧಿಸಿದ ಇಲಾಖೆಗೆ ಎಚ್ಚರಿಕೆ ನೀಡುತ್ತೇನೆ ಅಂತ ನ್ಯಾಯವಾದಿಗಳು ಹಾಗೂ ಜನಪರ ಹೋರಾಟಗಾರ ಎಸ್.ಎಸ್.ಪಾಟೀಲ ತಿಳಿಸಿದ್ದಾರೆ.