ಮಹಿಳೆಯರು ನಿಯಮಿತ ಪೌಷ್ಟಿಕ ಆಹಾರ ಸೇವಿಸುವ ಅಗತ್ಯವಿದೆ
ಮಹಿಳೆಯರು ನಿಯಮಿತವಾಗಿ ಪೌಷ್ಟಿಕ ಆಹಾರ ಸೇವಿಸಿ ಅನಿಮಿಯಾ (ರಕ್ತಹೀನತೆ) ತಡೆಗಟ್ಟಬಹುದು ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಮೋಹನ್.ಸಿ.ಆರ್ ಹೇಳಿದರು.
ಶಿರಾ: ಮಹಿಳೆಯರು ನಿಯಮಿತವಾಗಿ ಪೌಷ್ಟಿಕ ಆಹಾರ ಸೇವಿಸಿ ಅನಿಮಿಯಾ (ರಕ್ತಹೀನತೆ) ತಡೆಗಟ್ಟಬಹುದು ಎಂದು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಮೋಹನ್.ಸಿ.ಆರ್ ಹೇಳಿದರು.
ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪ.ಪೂ. ಕಾಲೇಜಿನಲ್ಲಿ ಆರೋಗ್ಯ ಇಲಾಖೆಯಿಂದ ಅನಿಮಿಯ ಮುಕ್ತ ಕರ್ನಾಟಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆಂಪುರಕ್ತ ಕಣಗಳು ಕಡಿಮೆಯಾದಾಗ ರಕ್ತಹೀನತೆ ಎಂದು ಕರೆಯಲಾಗುತ್ತದೆ. ಅನುವಂಶಿಯತೆ, ಜಂತುಹುಳು ಬಾಧೆ ಮತ್ತು ಆಹಾರ ಸೇವನೆಯಲ್ಲಿ ನ್ಯೂನತೆ ಇದಕ್ಕೆ ಕಾರಣ. ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದೆ. ಸೂಕ್ತ ಚಿಕಿತ್ಸೆ ನೀಡಿದಲ್ಲಿ ಗುಣಮುಖವಾಗುತ್ತದೆ ಎಂದು ಹೇಳಿದರು.
ಶಿರಾ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2781 ವಿದ್ಯಾರ್ಥಿಗಳು, ಅನುದಾನಿತ ಪ.ಪೂ. ಕಾಲೇಜಿನಲ್ಲಿ 1516 ವಿದ್ಯಾರ್ಥಿಗಳು, ಖಾಸಗಿ ಕಾಲೇಜಿನಲ್ಲಿ 876 ವಿದ್ಯಾರ್ಥಿಗಳಿಗೆ ಅನಿಮಿಯ ಬಗ್ಗೆ ಅರಿವು ಮೂಡಿಸಿ ಪರೀಕ್ಷೆ ಮಾಡಲಾಗುವುದು ಎಂದರು.
ಪ್ರಾಂಶುಪಾಲ ಇನಾಮುಲ್ಲಾ, ಪಂಜಿಗಾನಹಳ್ಳಿ ಸರ್ಕಾರಿ ಆಸ್ಪತ್ರೆಯ ಆಡಳಿತ ಡಾ.ಶ್ರೀಕಾಂತ್, ಆರ್.ಬಿ.ಎಸ್.ಕೆ. ವೈದ್ಯರಾದ ಡಾ. ವಿಕಾಸ್, ಡಾ.ರೆಡ್ಡಮ್ಮ, ಡಾ.ಮೇಘನ ಒಡೆಯರ್, ಡಾ.ಗೀತಾ, ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್.ಕೆ.ಎನ್, ಗ್ರಾ.ಪಂ ಸದಸ್ಯೆ ದಿವ್ಯಜ್ಞಾನೋದಯ, ಆರೋಗ್ಯಇಲಾಖೆಯ ನಿಜಾಮುದ್ದಿನ್, ಮುದ್ದರಾಜಮ್ಮ ಭಾಗವಹಿಸಿದ್ದರು
ಪೌಷ್ಟಿಕ ಆಹಾರದಿಂದ ಆರೋಗ್ಯ ವೃದ್ಧಿ
ತಿಪಟೂರು : ಪ್ರತಿಯೊಬ್ಬರು ದಿನನಿತ್ಯ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಮಾಡುವುದರಿಂದ ಸದೃಢವಾದ ಆರೋಗ್ಯ ಮತ್ತು ಪೌಷ್ಟಿಕಮಟ್ಟವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಬದುಕು ಸಂಸ್ಥೆಯ ಮೋಹನ್ ತಿಳಿಸಿದರು.
ನಗರದ ಗಾಂಧಿನಗರದ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬದುಕು ಸಂಸ್ಥೆ ಸಹಯೋಗದೊಂದಿಗೆ ನಡೆದ ಪೋಷಣ್ ಮಾಸಾಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ದೊರೆಯುವ ಸೊಪ್ಪು ತರಕಾರಿಗಳು, ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಉಪಯೋಗಿಸುವುದರಿಂದ ಉತ್ತಮ ಆರೋಗ್ಯ, ಪೌಷ್ಟಿಕತೆಯನ್ನು ಹೊಂದಬಹುದಾಗಿದೆ. ಸ್ಥಳೀಯ ಆಹಾರಗಳು ಬಳಕೆಯಿಂದ ಆಸ್ಪತ್ರೆಯಿಂದ ದೂರವಿರಬಹುದಲ್ಲದೆ. ಹಣದ ಉಳಿತಾಯವನ್ನು ಮಾಡಬಹುದ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಇರುವ ಸೌಲಭ್ಯಗಳ ಬಗ್ಗೆ ಬಾಲ್ಯವಿವಾಹ ತಡೆಗಟ್ಟುವಿಕೆಯ ಬಗ್ಗೆ ಕಾನೂನು ಅರಿವು ಮೂಡಿಸಿದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ನಗರ ವೃತ್ತದ ಮೇಲ್ವಿಚಾರಕಿ ಮೀನಾಕ್ಷಿ ಮಾತನಾಡಿ, ಗರ್ಭಿಣಿ, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಂದ ದೊರೆಯುವ ಪೌಷ್ಟಿಕ ಆಹಾರ ಹಾಗೂ ಇತರೆ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಪಡೆಯಲು ಮಾಹಿತಿ ನೀಡಿದರು.
ಆರೋಗ್ಯ ನಿರ್ವಹಣೆಯಲ್ಲಿ ಶುದ್ಧಕುಡಿಯುವ ನೀರು, ವೈಯಕ್ತಿಕ ಸ್ವಚ್ಛತೆಗೆ ಮತ್ತು ಶೌಚಾಲಯ ಬಳಕೆಗೆ ಒತ್ತು ನೀಡಬೇಕು. ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಹಾಗೂ ಮಹಿಳೆಯರ ರಕ್ತಹೀನತೆಯನ್ನು ತಡೆಗಟ್ಟುವ ಬಗ್ಗೆ ಮಕ್ಕಳ ಆರೋಗ್ಯ ಪೌಷ್ಠಿಕತೆಯ ಬಗ್ಗೆ ಮಾಹಿತಿ ನೀಡಿದರು.
ಸರ್ಕಾರಿ ಶಾಲೆಯ ಶಿಕ್ಷಕ ಚಿದಾನಂದ್ ಮಾತನಾಡಿ, ಪೌಷ್ಟಿಕಾಂಶ ನೈಸರ್ಗಿಕ ಔಷಧಿ ಗುಣಗಳುಳ್ಳ ಸೊಪ್ಪುಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ದೊರೆಯಲಿದ್ದು, ಹೆಚ್ಚಿನ ಪೌಷ್ಟಿಕಾಂಶಗಳನ್ನು ಇವುಗಳಿಂದ ಪಡೆಯಬಹುದಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಪೌಷ್ಠಿಕತೆ ಬಗ್ಗೆ ಅರಿವು ಮೂಡಿಸಿದರು.
ನಗರಸಭಾ ಸದಸ್ಯರಾದ ಭಾರತಿ ಮಂಜುನಾಥ್, ಆಶೀಫಾ ಬಾನು ಮಾತನಾಡಿ, ಸೊಪ್ಪು, ತರಕಾರಿಗಳಂತಹ ಆಹಾರಗಳಲ್ಲಿ ಹೆಚ್ಚು ಪೋಷಕಾಂಶಗಳು ಅಡಗಿದ್ದು, ಸ್ಥಳೀಯ ಆಹಾರ ಪದಾರ್ಥಗಳನ್ನು ಸೇವಿಸಿ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ. ಈ ಬಗ್ಗೆ ತಾಯಂದಿರು ಹೆಚ್ಚು ಗಮನ ಹರಿಸಿ ಪೌಷ್ಠಿಕಾಂಶಗಳ ಬಗ್ಗೆ ಅರಿವು ಮೂಡಿಸಿಕೊಂಡಲ್ಲಿ ಮನೆಮಂದಿಯೆಲ್ಲಾ ಆರೋಗ್ಯವಂತರಾಗಿರಬಹುದು ಎಂದರು.