ಅಣ್ಣಂದಿರು ಆಸ್ತಿಯಲ್ಲಿ ಪಾಲು ಕೊಡದ್ದಕ್ಕೆ 125 ಅಡಕೆ ಮರ ಕಡಿದ ತಂಗಿ
ತಮ್ಮ ಸಹೋದರರ ತೋಟದಲ್ಲಿಯೇ ಸಹೋದರಿಯೊಬ್ಬಳು 100ಕ್ಕೂ ಅಧಿಕ ಅಡಕೆ ಗಿಡಗಳನ್ನು ಕಡಿದು ಹಾಕಿದ ದಾರುಣ ಘಟನೆಯೊಂದು ನಡೆದಿದೆ.
ತುರುವೇಕೆರೆ(ಜ.18): ಆಸ್ತಿಯಲ್ಲಿ ಪಾಲು ಕೊಡದ ಕಾರಣಕ್ಕೆ ತಂಗಿಯೇ ಅಣ್ಣಂದಿರು ತಮ್ಮ ಜಮೀನಿನಲ್ಲಿ ಬೆಳೆದಿದ್ದ 125ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ ಘಟನೆ ಸಮೀಪದ ಬಾಣಸಂದ್ರದಲ್ಲಿ ನಡೆದಿದೆ.
ಬಾಣಸಂದ್ರದ ದಿವಂಗತ ಮೂಡಲಗಿಯಪ್ಪನವರ ಮಕ್ಕಳಾದ ಮಂಜುನಾಥ್ ಮತ್ತು ಶಿವಕುಮಾರ್ ಅಡಿಕೆ ತೋಟ ಬೆಳೆಸಿದ್ದರು. ಆಸ್ತಿಯನ್ನು ಇನ್ನು ಯಾರಿಗೂ ಪಾಲು ಮಾಡಿರಲಿಲ್ಲ. ಇದು ಅವರ ತಂದೆಯ ಹೆಸರಿನಲ್ಲೇ ಇದೆ. ಆಸ್ತಿಯಲ್ಲಿ ಪಾಲು ನೀಡುತ್ತಿಲ್ಲ ಎಂದು ತಂಗಿಯರು ಅಣ್ಣಂದಿರ ಜತೆ ತಗಾದೆ ತೆಗೆಯುತ್ತಿದ್ದರು. ಈ ನಡುವೆ ಪದ್ಮಾವತಿ ಎಂಬುವವರು ಶನಿವಾರ ಏಕಾಏಕಿ ತೋಟಕ್ಕೆ ಬಂದು ಯಾರು ಇಲ್ಲದ ವೇಳೆ 125ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಅವಳ ಗಂಡನ ಜತೆಗೂಡಿ ಕಡಿದು ಹಾಕಿದ್ದಾರೆ.
ಇದನ್ನು ಪಕ್ಕದ ಜಮೀನಿನಲ್ಲಿದ್ದ ಇವರ ಸಂಬಂಧಿಕರಾದ ಸಣ್ಣಹನುಮಯ್ಯ ಮತ್ತು ರಂಗಯ್ಯ ಅವರು ನೋಡಿದ್ದಾರೆ. ಈ ವೇಳೆ ಅಡಿಕೆ ಮರಗಳನ್ನು ಕಡಿಯಬೇಡಿ ಎಂದು ಆಕ್ಷೇಪಿಸಿದಾಗ, ಅವರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಲ್ಲದೇ ಈ ವಿಷಯವನ್ನು ಬಾಯಿಬಿಟ್ಟರೆ ಹುಷಾರ್ ಎಂದು ಅವರಿಗೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಅಡಿಕೆ ಮರಗಳನ್ನು ಕಡಿದ ಬಗ್ಗೆ ಸಹೋದರರು ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಣ್ಣ-ತಂಗಿಯರ ಆಸ್ತಿ ವಿಚಾರಕ್ಕೆ ನಡೆದ ಕಲಹದಲ್ಲಿ ಅಡಿಕೆ ಮರಗಳು ಜೀವ ಕಳೆದುಕೊಂಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಮಂಜುನಾಥ್ ಮತ್ತು ಶಿವಕುಮಾರ್ ಅವರ ಜೀವನೋಪಾಯಕ್ಕೆ ಈ ಮರಗಳೇ ಆಧಾರವಾಗಿದ್ದವು ಎನ್ನಲಾಗಿದೆ.