ಬೆಂಗಳೂರು: ತಮಗೆ 40 ಲಕ್ಷ ಹಣ ಕೊಡದ ಕಾರಣಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಅವರ ಫೇಸ್‌ಬುಕ್ ಗೆಳತಿ ಮತ್ತು ಕುಟುಂಬ ಸದಸ್ಯರು ರಸ್ತೆಯಲ್ಲೇ ಅಡ್ಡಗಟ್ಟಿ ಹಲ್ಲೆ ನಡೆಸಿರುವ ಘಟನೆ ಹನುಮಂತ ನಗರದಲ್ಲಿ ನಡೆದಿದೆ.

ಶ್ರೀನಗರದ 2 ನೇ ಅಡ್ಡರಸ್ತೆ ನಿವಾಸಿ ಆರ್.ಶಂಕರ್ ಎಂಬುವರೇ ದೌರ್ಜನ್ಯಕ್ಕೊಳಗಾಗಿದ್ದು, ಈ ಕೃತ್ಯ ಸಂಬಂಧ ಶಂಕರ್ ಅವರ ಫೇಸ್‌ಬುಕ್ ಸ್ನೇಹಿತೆ ದಾಕ್ಷಾಯಿಣಿ, ನಾಗರತ್ನ, ಕಿರಣ್ ಮತ್ತು ಬಾಬು ವಿರುದ್ಧ ಹನುಮಂತನಗರ ಠಾಣೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಮಕ್ಕಳ ವಿದ್ಯಾಭ್ಯಾಸದ ನೆಪದಲ್ಲಿ ಶಂಕರ್ ಅವರಿಂದ 7 ಲಕ್ಷ ಪಡೆದಿದ್ದ ಆರೋಪಿ ದಾಕ್ಷಾಯಿಣಿ, ಮತ್ತೆ 40 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಳು. ಈ ಬ್ಲ್ಯಾಕ್‌ಮೇಲ್‌ಗೆ ಬಗ್ಗದೆ ಹೋದಾಗ ಕೆರಳಿದ ಆರೋಪಿಗಳು, ಮೇ 14 ರಂದು ಹನುಮಂತನಗರದ ಪಿಇಎಸ್ ಕಾಲೇಜು ಬಳಿ ಶಂಕರ್ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಐದು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ದಾಕ್ಷಾಯಿಣಿ ಎಂಬಾಕೆ ಪರಿಚಯವಾಯಿತು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಂದು ಹೇಳಿ 7 ಲಕ್ಷ ಹಣವನ್ನು ಆಕೆ ಪಡೆದುಕೊಂಡಿದ್ದಳು. ಇದಾದ ನಂತರ ಆಕೆ ವರ್ತನೆ ಬದಲಾಯಿತು. ನನಗೆ 40 ಲಕ್ಷ ಹಣ ಕೊಡದೆ ಹೋದರೆ ನನ್ನಲ್ಲಿರುವ ನಿಮ್ಮ ಕೆಲ ಖಾಸಗಿ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಆಪ್‌ಲೋಡ್ ಮಾಡಿ, ಮಾನ ಮರ್ಯಾದೆ ಹರಾಜು ಹಾಕುತ್ತೇನೆ ಎಂದು ಬೆದರಿಸುತ್ತಿದ್ದಳು ಎಂದು ಶಂಕರ್ ದೂರಿನಲ್ಲಿ ಹೇಳಿದ್ದಾರೆ.

ಈ ಬ್ಲ್ಯಾಕ್‌ಮೇಲ್ ಸಹಿಸಲಾರದೆ ಆಕೆಗೆ ನಾನು ಈ ಹಿಂದೆ ಕೊಟ್ಟಿದ್ದ ಹಣವನ್ನು ವಾಪಸ್ ಕೊಡುವಂತೆ ಸೂಚಿಸಿದ್ದೆ. ಇದಕ್ಕೆ ಕೋಪಗೊಂಡ ಆಕೆ, ತನ್ನ ತಾಯಿ ನಾಗರತ್ನ, ಕಿರಣ್ ಮತ್ತು ಬಾಬು ಎಂಬುವವರನ್ನು ಕರೆದುಕೊಂಡು ಬಂದು ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾಳೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಂಕರ್ ಕೋರಿದ್ದಾರೆ.