ಮೈಷುಗರ್ ಆಸ್ತಿ ಮಾರಿ ಹೊಸ ಕಾರ್ಖಾನೆ ನಿರ್ಮಿಸುವಿರಾ?: ಸಂಸದೆ ಸುಮಲತಾ
ರಾಜ್ಯ ಸರ್ಕಾರ ಹೊಸ ಕಾರ್ಖಾನೆ ಮಾಡುವುದರ ಅರ್ಥ ಏನು ಎಂಬುದನ್ನು ಸರಿಯಾಗಿ ತಿಳಿಸಬೇಕು. ಮೈಷುಗರ್ ಆಸ್ತಿ ಒತ್ತೆ ಇಟ್ಟು ಹೊಸ ಕಾರ್ಖಾನೆ ನಿರ್ಮಿಸಲು ಮುಂದಾಗಿದೆಯೇ ಎಂದು ಸಂಸದೆ ಸುಮಲತಾ ಪ್ರಶ್ನಿಸಿದರು.
ಮಂಡ್ಯ (ಮಾ.08): ರಾಜ್ಯ ಸರ್ಕಾರ ಹೊಸ ಕಾರ್ಖಾನೆ ಮಾಡುವುದರ ಅರ್ಥ ಏನು ಎಂಬುದನ್ನು ಸರಿಯಾಗಿ ತಿಳಿಸಬೇಕು. ಮೈಷುಗರ್ ಆಸ್ತಿ ಒತ್ತೆ ಇಟ್ಟು ಹೊಸ ಕಾರ್ಖಾನೆ ನಿರ್ಮಿಸಲು ಮುಂದಾಗಿದೆಯೇ ಎಂದು ಸಂಸದೆ ಸುಮಲತಾ ಪ್ರಶ್ನಿಸಿದರು. ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಜೆಟ್ ಪುಸ್ತಕದಲ್ಲಿ ದಾಖಲಾಗಿರುವಂತೆ ಮೈಷುಗರ್ ಆಸ್ತಿಯನ್ನು ಅಡಮಾನವಿಟ್ಟು ಹೊಸ ಕಾರ್ಖಾನೆ ನಿರ್ಮಿಸುವುದಾಗಿ ಹೇಳಿದೆ. ಇದರ ಅವಶ್ಯಕತೆ ಇದೆಯೇ. ಹೊಸ ಕಾರ್ಖಾನೆ ಮಾಡುವ ಬದಲು ಅದೇ ಹಣದಲ್ಲಿ ಕಾರ್ಖಾನೆ ಅಭಿವೃದ್ಧಿಪಡಿಸುವಂತೆ ಸಚಿವರಿಗೆ ಮನವಿ ಮಾಡಿದರು.
ಮಂಡ್ಯ ಎಂದರೆ ಮೈಷುಗರ್ ಕಾರ್ಖಾನೆ. ಹಾಗಾಗಿ ಸರ್ಕಾರ ರೈತರ ಪರವಾಗಿ ನಡೆದುಕೊಳ್ಳಬೇಕು. ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು. ಕಾರ್ಖಾನೆ ಜಾಗದಲ್ಲಿ ಐಟಿ ಪಾರ್ಕ್ ಮಾಡುವುದನ್ನು ನಾವೂ ವಿರೋಧಿಸುತ್ತೇವೆ. ಐಟಿ ಪಾರ್ಕ್ ನಿರ್ಮಾಣದಿಂದ ಮಂಡ್ಯದ ಎಷ್ಟು ಜನರಿಗೆ ಉದ್ಯೋಗ ಸಿಗಲಿದೆ. ಮಂಡ್ಯದ ಯುವಕರಿಗೆ ಎಷ್ಟು ಲಾಭವಾಗಲಿದೆ ಎನ್ನುವುದನ್ನು ಹೇಳಬೇಕು. ಬೇರೆ ಜಾಗದಲ್ಲಿ ಸಾಫ್ಟ್‌ವೇರ್ ಪಾರ್ಕ್ ಮಾಡುವುದಾದರೆ ನನ್ನ ಅಭ್ಯಂತರವೇನಿಲ್ಲ ಎಂದು ನುಡಿದರು. ಕೆಆರ್‌ಎಸ್ ಉಳಿಸುವ ದೃಷ್ಟಿಯಿಂದ ಟ್ರಯಲ್ ಬ್ಲಾಸ್ಟ್ ಮಾಡಬಾರದು. ೨೦ ಕಿ.ಮೀ. ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಬೇಕು. ಮೈಷುಗರ್ ಕಾರ್ಖಾನೆಗೆ ಆಧುನಿಕ ಸ್ಪರ್ಶ ಕೊಡಿ. ಇತಿಹಾಸವನ್ನು ತೆಗೆದು ತಿರುಚುವ ಕೆಲಸ ಮಾಡಬೇಡಿ.
ಕೆಆರ್‌ಎಸ್ ಜಲಾಶಯದ ಬಳಿ ಟ್ರಯಲ್ ಬ್ಲಾಸ್ಟ್ ಬಗ್ಗೆ ಆತಂಕ ಬೇಡ: ಕೃಷಿ ಸಚಿವ ಚಲುವರಾಯಸ್ವಾಮಿ
ಅವಧಿ ಮುಗಿದ ಬಳಿಕ ನಾನು ಬಿಜೆಪಿ ಸೇರುವೆ: ಲೋಕಸಭಾ ಅವಧಿ ಮುಗಿದ ಬಳಿಕ ನಾನು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತೇನೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿರುವುದರಿಂದ ಬಿಜೆಪಿ ಪಕ್ವನ್ನು ಸೇರುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಪಕ್ಷ ಸೇರ್ಪಡೆಯಾಗಿಲ್ಲವೆಂಬ ವಿಚಾರವನ್ನು ದೊಡ್ಡದು ಮಾಡುವುದರಲ್ಲಿ ಅರ್ಥವಿಲ್ಲ. ರೆಕಾರ್ಡ್ ಪಟ್ಟಿ, ಕೆಲಸ ನೋಡಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕೆ ನನಗೆ ಮೈತ್ರಿ ಟಿಕೆಟ್ ಸಿಗುವ ಬಗ್ಗೆ ಪೂರ್ಣ ವಿಶ್ವಾಸವಿದೆ ಎಂದಿದ್ದಾರೆ. ಬಿಜೆಪಿ ಪಕ್ಷ ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಯಾವುದೂ ಫೈನಲ್ ಆಗುವುದಿಲ್ಲ.
ಕಾಂಗ್ರೆಸ್ ಪಕ್ಷಕ್ಕೆ ಜನರ ಸಾಥ್ ಗ್ಯಾರಂಟಿ: ಸಚಿವ ಈಶ್ವರ್ ಖಂಡ್ರೆ
ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ನನಗಿದೆ. ಅದು ನನ್ನ ವೈಯಕ್ತಿಕ. ಆದರೆ, ಪಕ್ಷದಿಂದ ಬರುವುದೇ ಅಧಿಕೃತ ಘೋಷಣೆ. ಕಳೆದ ಎಂಪಿಗಳು ಮಾಡಿರುವ ಕೆಲಸಕ್ಕೂ ನನ್ನ ಕೆಲಸಕ್ಕೂ ವ್ಯತ್ಯಾಸವಿದೆ. ಬಿಜೆಪಿ ಸಿದ್ಧಾಂತ, ನರೇಂದ್ರ ಮೋದಿ ಕೆಲಸದ ರೀತಿ ನೋಡಿ ನಾನು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ ಎಂದರು. ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ದುಡ್ಡು ಪಡೆಯುವ ಸಂಸ್ಕೃತಿ ಇದೆ. ಪಕ್ಷದೊಂದಿಗೆ ಸಂಪರ್ಕವೇ ಇಲ್ಲದವರನ್ನು ಕರೆತಂದು ಅಭ್ಯರ್ಥಿ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಮಂಡ್ಯ ಲೋಕಸಭಾ ಅಭ್ಯರ್ಥಿ ಎಂದು ಪರಿಚಯ ಮಾಡುತ್ತಾರೆ. ದುಡ್ಡಿನಿಂದ ಮಂಡ್ಯ ಜನರನ್ನ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ನುಡಿದರು.