Asianet Suvarna News Asianet Suvarna News

ಮಲೆನಾಡಿಗೆ ಲಗ್ಗೆ ಇಟ್ಟಆನೆಗಳು : ಅರಣ್ಯ ಇಲಾಖೆ ಹರಸಾಹಸ

ಆನೆಗಳ ಹಿಂಡು ಇದೆ ಮೊದಲ ಬಾರಿಗೆ ಮಲೆನಾಡಿನ ಗ್ರಾಮಗಳತ್ತ ಆಗಮಿಸಿವೆ. ಕಳೆದೆರಡು ವಾರಗಳಿಂದ ಶಿರಸಿ-ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲಿ ಓಡಾಡುತ್ತಿರುವ ಆನೆಗಳ ಹಿಂಡು ಓಡಿಸಲು ಅರಣ್ಯ ಇಲಾಖೆ ನಾಲ್ಕು ತಂಡಗಳನ್ನು ರಚನೆ ಮಾಡಿಕೊಂಡಿದೆ.

Wild Elephants Enters To villages in Uttara kannada
Author
Bengaluru, First Published Nov 16, 2019, 2:40 PM IST

ಪ್ರಸಾದ ಹೆಗಡೆ ಕಡಬಾಳ

ಶಿರಸಿ (ನ.16):  ದೀಪಾವಳಿ ಮುಗಿದು ತುಳಸಿ ಮದುವೆಯೂ ಆಯ್ತು. ಆದರೆ, ಕಾಡಂಚಿನ ಹಲವು ಗ್ರಾಮಗಳಲ್ಲಿ ಪಟಾಕಿಯ ಶಬ್ದ ಮಾತ್ರ ನಿಂತಿಲ್ಲ. ಮೊದಲ ಬಾರಿಗೆ ಮಲೆನಾಡ ಭಾಗಕ್ಕೆ ಬಂದ ಆನೆಗಳ ಹಿಂಡು ಓಡಿಸಲು ಅರಣ್ಯ ಇಲಾಖೆ ಮತ್ತು ರೈತಾಪಿ ಜನತೆ ಈಗಾಗಲೆ ಸಹಸ್ರಾರು ರು. ಗಳಷ್ಟುಪಟಾಕಿ ಸಿಡಿಸಿ ಅವುಗಳು ಮೂಲ ಸ್ಥಳಕ್ಕೆ ತೆರಳುವಂತೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ.

ಮುಂಡಗೋಡು ತಾಲೂಕು ವ್ಯಾಪ್ತಿಯ ಗ್ರಾಮಗಳಿಗಷ್ಟೇ ಲಗ್ಗೆ ಇಡುತ್ತಿದ್ದ ಆನೆಗಳ ಹಿಂಡು ಇದೆ ಮೊದಲ ಬಾರಿಗೆ ಮಲೆನಾಡಿನ ಗ್ರಾಮಗಳತ್ತ ಆಗಮಿಸಿವೆ. ಕಳೆದೆರಡು ವಾರಗಳಿಂದ ಶಿರಸಿ-ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲಿ ಓಡಾಡುತ್ತಿರುವ ಆನೆಗಳ ಹಿಂಡು ಓಡಿಸಲು ಅರಣ್ಯ ಇಲಾಖೆ ನಾಲ್ಕು ತಂಡಗಳನ್ನು ರಚನೆ ಮಾಡಿಕೊಂಡಿದೆ. ತಾಲೂಕಿನ ಬನವಾಸಿ ಹಾಗೂ ಶಿರಸಿ ವಲಯ ಅರಣ್ಯ ವಿಭಾಗಗಳಲ್ಲಿ ಕಳೆದ ಹತ್ತು ದಿನಗಳ ಅವಧಿಯಲ್ಲಿ ಮರಿ ಆನೆ ಸೇರಿ ನಾಲ್ಕು ಆನೆಗಳ ಹಿಂಡು ಕಾಣಿಸಿಕೊಂಡಿದೆ. ಆರಂಭದಲ್ಲಿ ಬನವಾಸಿ ವಲಯ ಅರಣ್ಯ ವ್ಯಾಪ್ತಿಯ ಬದನಗೋಡ ಭಾಗದಲ್ಲಿ ಕಾಣಿಸಿಕೊಂಡ ಆನೆಗಳು ನಂತರ ಬೀಳೂರು, ಕಂಡ್ರಾಜಿ, ಹಲಸಿನಕೊಪ್ಪ ಭಾಗದಲ್ಲಿ ಓಡಾಡಿವೆ.

ಕೆಲವು ಕಡೆಗಳಲ್ಲಿ ರೈತರ ಅನಾನಸ್‌, ಬತ್ತದ ಗದ್ದೆ, ಬಾಳೆ ತೋಟಗಳಿಗೆ ಹಾನಿ ಮಾಡಿವೆ. ನಾಲ್ಕು ದಿನಗಳ ಕಾಲ ಈ ವಲಯದಲ್ಲಿದ್ದ ಆನೆಗಳು ಶಿರಸಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ. ಉಂಚಳ್ಳಿಯಿಂದ ಕುಳವೆ, ಉಗ್ರೇಮನೆ ಕಡೆಯಿಂದ ಸೊರಬದ ಕಡೆ ಸಾಗಿದ್ದವು. ಇದೀಗ ವಾಪಸ್‌ ಅಲ್ಲಿಂದ ತ್ಯಾಗಲಿ, ಕಾನಸೂರು, ದೇವಿಸರ ಭಾಗಕ್ಕೆ ಬಂದು ತಲುಪಿವೆ ಎಂಬ ಮಾಹಿತಿ ಅರಣ್ಯ ಇಲಾಖೆ ಮೂಲಗಳಿಂದ ಲಭ್ಯವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಹತ್ತು ದಿನಗಳಲ್ಲಿ ಹದಿನೈದಕ್ಕೂ ಅಧಿಕ ರೈತರ ಹೊಲಗಳಿಗೆ ದಾಂಗುಡಿ ಇಟ್ಟಿದ್ದು, 20 ಎಕರೆಗೂ ಹೆಚ್ಚು ಬತ್ತದ ಗದ್ದೆಗಳು ನಾಶವಾಗಿದೆ. ಇವುಗಳ ಸರ್ವೇ ಕಾರ್ಯವನ್ನು ಉಭಯ ವಲಯಗಳಲ್ಲೂ ನಡೆಸಲಾಗುತ್ತಿದ್ದರೂ ಒಂದೆಡೆಯಿಂದ ಇನ್ನೊಂದೆಡೆಗೆ ಓಡುವ ಆನೆಗಳನ್ನು ಊರಿಗೆ ಬಾರದಂತೆ, ಏನೂ ತೊಂದರೆ ಆಗದಂತೆ ನೋಡಿಕೊಳ್ಳುವದೇ ಇಲಾಖೆಗೆ ಎದುರಾದ ಸವಾಲಾಗಿದೆ.

ಆನೆಗಳ ಹೊಸ ಕಾರಿಡಾರ್‌?

ಸಾಮಾನ್ಯವಾಗಿ ಬನವಾಸಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಆನೆಗಳು ಬರುವುದುಂಟು. ಆದರೆ ಶಿರಸಿ ವಲಯ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದಿದ್ದಿಲ್ಲ. ಹೀಗೆ ದಿಕ್ಕು ತಪ್ಪಿ ಬಂದಂತಿರುವ ಆನೆಗಳ ಹಿಂಡು ಬಂದ ಮಾರ್ಗದಲ್ಲಿ ವಾಪಸ್‌ ಸಾಗುವ ಸಾಧ್ಯತೆಗಳಿದೆ. ಹೀಗಾಗಿ ಸೊರಬದ ಕಡೆ ಸಾಗಿದ ಆನೆಗಳು ಪುನಃ ವಾಪಸ್‌ ಬರುತ್ತಿವೆ. ಶಿರಸಿ ಭಾಗದ ಉಂಚಳ್ಳಿ, ಕುಳವೆ, ಉಗ್ರೇಮನೆ, ಸಿದ್ದಾಪುರದ ತ್ಯಾಗಲಿ ಪ್ರಾಂತದಲ್ಲಿ ಓಡಾಡುತ್ತಿದ್ದು, ಬನವಾಸಿ ವಲಯ ಅರಣ್ಯ ಪ್ರದೇಶದಿಂದ ತಮ್ಮ ಸಂಚಾರವನ್ನು ಶಿರಸಿ ವಲಯಾರಣ್ಯದ ವ್ಯಾಪ್ತಿಗೆ ವಿಸ್ತರಿಸಿಕೊಂಡಿದ್ದು ಹೊಸ ಕಾರಿಡಾರ್‌ ನಿರ್ಮಿಸಿಕೊಂಡಿವೆಯೆ ಎಂಬ ಶಂಕೆಯೂ ಮೂಡಿದೆ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಅಮಿತ್‌ ಚವ್ಹಾಣ.

10 ಸಾವಿರ ಪಟಾಕಿ

ಆನೆಗಳ ಬಂದಿರುವ ಮಾಹಿಯನ್ನಾಧರಿಸಿ ಅರಣ್ಯ ಭಾಗಗಳತ್ತ ಜನರು ಓಡಾಡದಂತೆ ಸೂಚನೆ ನೀಡಿರುವ ಅರಣ್ಯ ಇಲಾಖೆಯು ಆನೆಗಳ ಹಿಂಡು ರೈತರ ಜಮೀನಿನತ್ತ ಸುಳಿಯದಂತೆ ತಡೆಯಲು ಪಟಾಕಿಗಳನ್ನು ಸಿಡಿಸಿ ಅರಣ್ಯದಲ್ಲೇ ಅವುಗಳು ತೆರಳುವಂತೆ ಕ್ರಮ ಕೈಗೊಂಡಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿ ಇಲಾಖೆ 10 ಸಾವಿರ ರು. ಗಿಂತ ಹೆಚ್ಚಿನ ಪಟಾಕಿ ಸಿಡಿಸಿರುವ ಮಾಹಿತಿ ಲಭ್ಯವಾಗಿದೆ. ಶಿರಸಿ ವಲಯ ವ್ಯಾಪ್ತಿಯಲ್ಲಿ ತಲಾ ನಾಲ್ಕು ಸಿಬ್ಬಂದಿಗಳಿರುವ ನಾಲ್ಕು ಗ್ರೂಪ್ಗಳನ್ನು ಮಾಡಿ ನಿಗಾ ವಹಿಸಲಾಗುತ್ತಿದೆಂಬ ಮಾಹಿತಿ ಇಲಾಖೆ ಮೂಲದಿಂದ ಲಭ್ಯವಾಗಿದೆ.

ಪಟಾಕಿ, ಜಾಗಟೆಯೊಂದೆ ದಾರಿ

ಮಲೆನಾಡಿಗೂ ಲಗ್ಗೆಯಿಟ್ಟಆನೆಗಳನ್ನು ಪುನಃ ಮೂಲ ಸ್ಥಾನಕ್ಕೆ ಕಳುಹಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸುತ್ತಿದ್ದಾರೆ. ಆನೆಗಳ ಹಿಂಡು ಮದ ಏರದಂತೆ ನೋಡಿಕೊಳ್ಳಬೇಕಾದ್ದೂ ಜನರ, ಅರಣ್ಯಾಧಿಕಾರಿಗಳ ಕರ್ತವ್ಯ. ಹಾಗಂತ ಮದ ಏರಿದ ಆನೆಗಳನ್ನು ಹಿಡಿದು, ಅರವಳಿಕೆ ನೀಡಿ ತಜ್ಞರ, ಉನ್ನತಾಧಿಕಾರಿಗಳ ಅನುಮತಿ ಪಡೆದು ಸಾಗಾಟ ಮಾಡಬಹುದು. ಆದರೆ, ಸಾಮಾನ್ಯ ಓಡಾಟ ಮಾಡುವ ಆನೆಗಳಿಗೆ ಇಂಥ ಕಾರ್ಯಾಚರಣೆಗೆ ಅವಕಾಶ ಇಲ್ಲ. ಇವುಗಳನ್ನು ಬಂದಲ್ಲಿ ಜಾಗಟೆ, ಪಟಾಕಿ ಹೊಡೆದು ಓಡಿಸುವದೆ ಕೆಲಸವಾಗಿದೆ!

ಒಂದು ಮರಿ ಆನೆ ಸೇರಿ ನಾಲ್ಕು ಆನೆಗಳಿರುವ ಹಿಂಡು ದೇವಿಸರ ಭಾಗಕ್ಕೆ ಬಂದಿರುವ ಮಾಹಿತಿ ಲಭ್ಯವಾಗಿದೆ. ಅವುಗಳ ಚಲನವಲನ ಗಮನಿಸಿದರೆ ಪುನಃ ವಾಪಸ್‌ ತೆರಳುವ ಸಾಧ್ಯತೆ ಕಂಡುಬರುತ್ತಿದೆ.

ಅಮಿತ್‌ ಚವ್ಹಾಣ, ವಲಯ ಅರಣ್ಯಾಧಿಕಾರಿ, ಶಿರಸಿ

Follow Us:
Download App:
  • android
  • ios