Asianet Suvarna News Asianet Suvarna News

Wildlife: ಕಲಘಟಗಿ ಕಾಡಂಚಿನಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ

ತಾಲೂಕಿನ ಸುತ್ತಮುತ್ತಲಿನ ಅರಣ್ಯ ಪ್ರದೇಶದ ಗ್ರಾಮಗಳಲ್ಲಿ ಆನೆಗಳು ನಿರಂತರವಾಗಿ ಓಡಾಡುತ್ತಿದ್ದು, ರೈತರ ಜಮೀನಗಳಿಗೆ ನುಗ್ಗಿ ಅಪಾರ ಬೆಳೆ ಹಾನಿ ಮಾಡುವುದರೊಂದಿಗೆ ಜನರಲ್ಲಿ ಭಯ ಮೂಡಿಸುತ್ತಿವೆ.

wild elephants attaced in Kalaghatagi forest share villages at dharwad rav
Author
First Published Jul 11, 2023, 8:02 AM IST | Last Updated Jul 11, 2023, 12:34 PM IST

ರಮೇಶ್‌ ಸೋಲಾರಗೋಪ್ಪ

 ಕಲಘಟಗಿ (ಜು.11) : ತಾಲೂಕಿನ ಸುತ್ತಮುತ್ತಲಿನ ಅರಣ್ಯ ಪ್ರದೇಶದ ಗ್ರಾಮಗಳಲ್ಲಿ ಆನೆಗಳು ನಿರಂತರವಾಗಿ ಓಡಾಡುತ್ತಿದ್ದು, ರೈತರ ಜಮೀನಗಳಿಗೆ ನುಗ್ಗಿ ಅಪಾರ ಬೆಳೆ ಹಾನಿ ಮಾಡುವುದರೊಂದಿಗೆ ಜನರಲ್ಲಿ ಭಯ ಮೂಡಿಸುತ್ತಿವೆ.

ತಾಲೂಕಿನ ಕಲಕುಂಡಿ, ಈಚನಳ್ಳಿ, ತಂಬೂರ, ದೇವಿಕೊಪ್ಪ, ಹುಲಗಿನಕಟ್ಟಿ, ಹಟಕಿನಾಳ, ಮಾಚಾಪುರ, ಕಲಘಟಗಿ ಹೊರವಲಯದ ಮಂಗೇಶ ಕೆರೆ ಹತ್ತಿರ ಹಾಗೂ ಇನ್ನಿತರ ಪ್ರದೇಶದಲ್ಲಿ ರೈತರು ವರ್ಷ ಪೂರ್ತಿ ಆನೆ ಹಾಗೂ ಕಾಡು ಪ್ರಾಣಿಗಳ ಆತಂಕದಲ್ಲಿ ಬದಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಿನದಿಂದ ದಿನಕ್ಕೆ ಈ ಪ್ರಾಣಿಗಳು ಆಹಾರ, ನೀರು ಅರಿಸಿ ಬರುತ್ತಿದ್ದು, ರೈತರ ಕಬ್ಬು, ಭತ್ತ, ಗೋವಿನಜೋಳ, ತೆಂಗಿನ ಮರ ಹಾಗೂ ಇತರೆ ಬೆಳೆಗಳನ್ನು ಹಾಳುಮಾಡುತ್ತಿವೆ. ಇದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಮದ್ದಾನೆ ಹಿಂಡು ಪ್ರತ್ಯಕ್ಷ:

ಈ ಹಿಂದೆ ಕಲಘಟಗಿ ಹೊರವಲಯದ ಮಂಗೇಶ ಕೆರೆ ಹತ್ತಿರ ಹಾಗೂ ವಿವಿಧ ಗ್ರಾಮಗಳಲ್ಲಿ 10 ಮದ್ದಾನೆ ಹಾಗೂ ಮೂರು ಮರಿ ಆನೆಗಳು ಪ್ರತ್ಯಕ್ಷವಾಗಿದ್ದವು. ಕಾಡಿಗೆ ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಹಗಲು-ರಾತ್ರಿ ನಿರಂತರ ಕಾರ್ಯಾಚರಣೆ ನಡೆಸಿದರು.

ಕಲಘಟಗಿ ವ್ಯಾಪ್ತಿಗೆ ಒಟ್ಟು 19,661 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಈ ಭಾಗದಲ್ಲಿ ಆನೆಗಳ ದಾಳಿ ಮಿತಿ ಮೀರಿದೆ. ಇದರಿಂದ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಕಾಡಾನೆಗಳ ಹಾವಳಿ ನಿಲ್ಲಲು ಮುಖ್ಯವಾಗಿ 93 ಕಿಮೀ ಆನೆಕಂದಕ ನಿರ್ಮಾಣವಾಗಬೇಕಿದೆ. ಈಗಾಗಲೇ ಆನೆ ದಾಳಿ ತಡೆಯಲು ಇಲಾಖೆ ಹಲವಾರು ಪ್ರಯೋಗ ಮಾಡಿದರೂ ದಾಳಿ ನಿಲ್ಲಿಸಲು ಆಗಿಲ್ಲ.

ಆನೆ ಕಂದಕ ನಿರ್ಮಾಣ:

ಬಡ್ಡಿಕೊಪ್ಪ, ಈಚನಹಳ್ಳಿ, ಜುಂಜನಬೈಲ್‌, ತಂಬೂರ, ಸಂಗಟಿಕೊಪ್ಪ ಗ್ರಾಮಗಳ ಅರಣ್ಯ ಪ್ರದೇಶಗಳಲ್ಲಿ 22 ಕಿಮೀ ಆನೆ ತಡೆ ಕಂದಕದ ನಿರ್ಮಾಣ ಮಾಡಿದ್ದರಿಂದ ಕಾಡಂಚಿನ ಪ್ರದೇಶದ ರೈತರಿಗೆ ಅನುಕೂಲವಾಗಿದೆ. ಜೊತೆಗೆ ಆನೆಯ ಭಯವಿಲ್ಲದೇ ನಿಟ್ಟಿಸಿರು ಬಿಟ್ಟಿದ್ದಾರೆ.

ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು ಇನ್ನೂ 93 ಕಿಮೀ ಕಂದಕ ನಿರ್ಮಿಸಿದರೆ ಮಾತ್ರ ದಾಳಿ ಸಂಪೂರ್ಣ ತಡೆಗಟ್ಟಲು ಸಾಧ್ಯ. ಇಲ್ಲದೇ ಹೋದಲ್ಲಿ ಕಾಡಿನ ಅಕ್ಕ ಪಕ್ಕದ ಗ್ರಾಮಗಳು ಸೇರಿದಂತೆ ಕಲಘಟಗಿ ಪಟ್ಟಣಕ್ಕೆ ಆನೆ ಹಾಗೂ ಕಾಡು ಪ್ರಾಣಿಗಳು ನುಗ್ಗುವ ಪರಿಸ್ಥಿತಿ ಬಂದರೂ ಅಚ್ಚರಿ ಪಡಬೇಕಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಿ ಕಂದಕ ನಿರ್ಮಾಣಕ್ಕೆ ಮುಂದಾಗಬೇಕಿದೆ ಎನ್ನುತ್ತಾರೆ ಇಲಾಖೆಯ ಹಿರಿಯ ಅರಣ್ಯಾ​ಧಿಕಾರಿ ಆರ್‌.ಜೆ. ಕಡೇಮನಿ.

ಈ ಹಿಂದೆ ಕರ್ತವ್ಯದಲ್ಲಿದ್ದ ತಂಬೂರ ಶಾಖೆಯ ಅರಣ್ಯ ಪ್ರದೇಶಗಳಲ್ಲಿ ಅಧಿ​ಕಾರಿಗಳ ಮೇಲೆ ಆನೆಗಳ ಹಿಂಡು ಮಾರಣಾಂತಿಕ ದಾಳಿ ಮಾಡಿದ್ದವು. ಗಂಭೀರ ಗಾಯಗೊಳಗಾಗಿ ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಅಲ್ಲಿಂದ ಇಲ್ಲಿ ವರೆಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ರೈತರ ಬೆಳೆ ಹಾನಿ ಮಾತ್ರ ನಿರಂತರವಾಗಿ ನಡಿದಿದ್ದು, ರೈತರು ಬೇಸತ್ತಿದ್ದಾರೆ.

637 ಪ್ರಕರಣ ದಾಖಲು:

2022ರ ಏಪ್ರಿಲ್‌ನಿಂದ ಮಾಚ್‌ರ್‍ 2023ರ ವರೆಗೆ ರೈತರ ಹೊಲಗಳಿಗೆ ಕಾಡಾನೆಗಳು ದಾಳಿ ಮಾಡಿರುವ ಕುರಿತು 637 ಪ್ರಕರಣ ದಾಖಲಾಗಿವೆ. ಇದರಲ್ಲಿ ಈಗಾಗಲೇ ಪರಿಶೀಲನೆ ನಡೆಸಿ 618 ಪ್ರಕರಣಗಳಿಗೆ .50 ಲಕ್ಷಕ್ಕಿಂತ ಹೆಚ್ಚು ಪರಿಹಾರ ನೀಡಲಾಗಿದೆ. 19 ಪ್ರಕರಣ ಬಾಕಿ ಉಳಿದಿವೆ. ಇನ್ನೂ ಪರಿಹಾರ ನೀಡಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಭಾಗದ ರೈತರ ಹೊಲಗಳಿಗೆ ಆನೆಗಳ ದಾಳಿಯನ್ನು ತಡೆಯಬೇಕಿದೆ. ಇಲ್ಲವಾದರೆ ಪ್ರತಿವರ್ಷ 50 ಲಕ್ಷಕ್ಕಿಂತ ಹೆಚ್ಚಿನ ಪರಿಹಾರ ಹಣ ನೀಡುವ ಪರಿಸ್ಥಿತಿ ತಪ್ಪಿದ್ದಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.

ಪ್ರತಿ ವರ್ಷ ಆನೆ ದಾಳಿಯಿಂದ ಕಲಘಟಗಿ ಸುತ್ತಲೂ ಅಪಾರ ಪ್ರಮಾಣದಲ್ಲಿ ವಿವಿಧ ಬೆಳೆಗಳು ನಾಶವಾಗುತ್ತಿವೆ. ಆನೆ ಹಾವಳಿ ನಿರಂತರವಾಗಿ ನಡೆದಿದೆ. ಸರ್ಕಾರ ಕೂಡಲೇ ಇತ್ತ ಗಮನಹರಿಸಿ ರೈತರ ಹೊಲಗಳಿಗೆ ಆನೆಗಳು ದಾಳಿ ಮಾಡದಂತೆ ಕಂದಕ ನಿರ್ಮಿಸಬೇಕಿದೆ.

ರಾಮಣ್ಣ ಲಮಾಣಿ, ದೇವಿಕೊಪ್ಪ ರೈತರು

ಕಲಘಟಗಿ ತಾಲೂಕಿನ ಗಡಿಭಾಗದಲ್ಲಿ ಆನೆಗಳು ಬರಲು ದಾರಿಯಿದೆ. ಅಲ್ಲಿ ಸಂಚರಿಸುವ ಆನೆಗಳು ಸುತ್ತಲಿನ ರೈತರ ಹೊಲಗಳು ಮತ್ತು ಜನವಸತಿ ಪ್ರದೇಶಗಳಿಗೆ ಬರದಂತೆ ತಡೆಯಲು ಮುಖ್ಯವಾಗಿ 93 ಕಿಮೀ ಆನೆ ತಡೆ ಕಂದಕ ನಿರ್ಮಾಣವಾಗಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ.

ಸಂತೋಷ ಸೂರಿಮಠ, ವಲಯ ಅರಣ್ಯ ಅ​ಕಾರಿಗಳು ಕಲಘಟಗಿ

Latest Videos
Follow Us:
Download App:
  • android
  • ios