ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡಿದ ಪ್ರಕರಣ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

 ಮಂಗಳೂರು (ಆ.18): ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ಪ್ರಕಟಿಸಿದೆ. ಮೂಡುಬಿದಿರೆ ಕುಕ್ಕುದಕಟ್ಟೆಮೂಡುಕೊಣಾಜೆ ಗ್ರಾಮದ ಅಶ್ವಿನಿ ಯಾನೆ ಮಮತಾ ಹಾಗೂ ಅದೇ ಗ್ರಾಮದ ಆನಂದ ಮೇರ ಶಿಕ್ಷೆಗೀಡಾದವರು. ಅಶ್ವಿನಿಯ ಪತಿ ಜಯರಾಜ್‌ ಕೊಲೆಯಾದವರು.

Add Asianetnews Kannada as a Preferred SourcegooglePreferred

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪೇರಮೊಗರಿನ ಜಯರಾಜ್‌ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. 2014ರಲ್ಲಿ ಅಶ್ವಿನಿ ಜತೆ ಅವರ ವಿವಾಹವಾಗಿದ್ದು, ಮೂಡುಬಿದಿರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. 2015ರಲ್ಲಿ ಅಶ್ವಿನಿ ಗರ್ಭವತಿಯಾಗಿ ತವರು ಮನೆಗೆ ಹೆರಿಗೆಗೆ ಹೋಗಿ 2016ರ ಆಗಸ್ಟ್‌ 6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ನಡುವೆ ಅಶ್ವಿನಿ ಅದೇ ಊರಿನ ಹಳೆ ಪರಿಚಯದ ಆನಂದ ಮೇರನೊಂದಿಗೆ ಸಂಬಂಧವಿರಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಜಯರಾಜ್‌ ಮತ್ತು ಅಶ್ವಿನಿ ನಡುವೆ ವೈಮನಸ್ಸು ಉಂಟಾಗಿತ್ತು. ತಾಯಿ ಮನೆಯಲ್ಲಿದ್ದ ಅಶ್ವಿನಿ, 2016ರ ಸೆಪ್ಟಂಬರ್‌ 13ರಂದು ಪತಿ ಜಯರಾಜ್‌ನನ್ನು ಮನೆಗೆ ಕರೆಯಿಸಿ ಪ್ರಿಯಕರ ಆನಂದ ಮೇರನ ಜತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದರು.

ಕುಡುಕ ಗಂಡನ ಕರೆಂಟ್ ಶಾಕ್ ಕೊಟ್ಟು ಕೊಲ್ಲಲು ಮುಂದಾದಳು!

ಜಯರಾಜ್‌ ಮನೆಗೆ ಬಂದಾಗ ಆನಂದ ಮೇರ ಕಬ್ಬಿಣದ ರಾಡ್‌ನಿಂದ ಜಯರಾಜ್‌ ತಲೆಗೆ ಹೊಡೆದು, ದೇಹದ ಭಾಗಗಳಿಗೆ ಹಲ್ಲೆ ಮಾಡಿ ಹೊಟ್ಟೆಗೆ ತಿವಿದು ಅಶ್ವಿನಿ ಸಹಕಾರ ಪಡೆದು ಕೊಲೆ ಮಾಡಿದ್ದ. ನಂತರ ಜಯರಾಜ್‌ನ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಮನೆಯ ಹಿಂಬದಿಯಲ್ಲಿರುವ ಶಾಲೆಯ ಕಂಪೌಂಡ್‌ನ ಬಳಿ ಅಡಗಿಸಿಟ್ಟಿದ್ದರು. ಬಳಿಕ ಪಾಳುಬಾವಿಗೆ ಹಾಕಿದ್ದ. ಮೃತದೇಹ ವಾಸನೆ ಬರದಂತೆ ರಾಸಾಯನಿಕ ವಸ್ತುಗಳನ್ನು ಹಾಕಿದ್ದರು.

ಕೊಲೆ ಮುಚ್ಚಿಹಾಕಲು ಆರೋಪಿ ಆನಂದ ಮೇರನು ಜಯರಾಜ್‌ನನ್ನು ಅಪಹರಿಸಿರುವುದಾಗಿ ನಾಟಕ ಮಾಡುತ್ತಾನೆ. ಇದಕ್ಕೆ ಶ್ರೀಪತಿ ಮತ್ತು ಧನಪತಿ ಎಂಬವರು ಸಹಕರಿಸುತ್ತಾರೆ. ಜಯರಾಜ್‌ನ ಮೊಬೈಲ್‌ನ ಸಿಮ್‌ ಬಳಸಿ ಜಯರಾಜ್‌ನ ತಾಯಿಗೆ ಕರೆ ಮಾಡಿದ್ದ ಆರೋಪಿಗಳು ‘ಜಯರಾಜ್‌ ನಮಗೆ 62 ಸಾವಿರ ರು. ನೀಡಬೇಕಿತ್ತು. ಅದಕ್ಕಾಗಿ ಅವನನ್ನು ಕರೆದುಕೊಂಡು ಬಂದಿದ್ದೇವೆ. ಆತನಿಂದ ಬರಬೇಕಾದ ಹಣ ಬರುವವರೆಗೆ ಆತನನ್ನು ನಮ್ಮ ಜೊತೆ ದುಡಿಸಿ ಹಣ ವಸೂಲು ಮಾಡಿ ಬಳಿಕ ಕಳುಹಿಸುತ್ತೇವೆ’ ಎಂದು ಹೇಳುತ್ತಾರೆ. ಆರೋಪಿಗಳು ಮಾಡಿದ ಪೋನ್‌ ಕರೆಯಿಂದ ಅನುಮಾನಗೊಂಡ ಜಯರಾಜ್‌ ಅವರ ಅಣ್ಣ ಗಿರೀಶ್‌ ಸೆ.22ರಂದು ಮೂಡುಬಿದಿರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು.

ಆನಂದ ಮೇರ ಮತ್ತು ಅಶ್ವಿನಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5,000 ರು. ದಂಡ, ದಂಡದ ಹಣ ಪಾವತಿಸಲು ತಪ್ಪಿದರೆ ಜೈಲು ಶಿಕ್ಷೆ, ಸಾಕ್ಷ್ಯನಾಶ ಪ್ರಕರಣಕ್ಕೆ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ 2 ಸಾವಿರ ರು. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 1 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.