'ವಿಧವೆ ಎಂದು ಗೋಗರೆದರೂ ನನಗೆ ಪರಿಹಾರ ನೀಡ್ತಿಲ್ಲ'
ಲೋಕಾಯುಕ್ತರಿಂದ ರೋಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ| ಹೊಳೆಆಲೂರ ಗ್ರಾಮದ 8ನೇ ವಾರ್ಡ್ ಸಂತ್ರಸ್ತೆ ಭೀಮವ್ವ ಓಲೇಕಾರ ಲೋಕಾಯುಕ್ತರಿಗೆ ಮನವಿ| ನ್ಯಾಯ ಒದಗಿಸಿಕೊಡಿ. ಬೇಕಿದ್ರೆ ನಿಮ್ಮ ಕಾಲಿಗೆ ಬೀಳುತ್ತೇನೆ ಎಂದು ಕಣ್ಣೀರು ಹಾಕುತ್ತ ಬೇಡಿಕೊಂಡ ವಿಧವೆ|
ರೋಣ(ಫೆ.19): 2019ರಲ್ಲಿ ಅತಿವೃಷ್ಟಿ ಮತ್ತು ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡಿದ್ದು, ಮನೆ ಹಾನಿ ಪರಿಹಾರಕ್ಕೆ ಕಳೆದ 2 ವರ್ಷದಿಂದ ತಹಸೀಲ್ದಾರ್ ಕಚೇರಿ, ಸ್ಥಳೀಯ ಗ್ರಾಪಂಗೆ ಅಲೆಯುತ್ತಾ ಬಂದಿದ್ದು, ನಾನು ವಿಧವೆ, ನನಗೆ ಯಾರು ದಿಕ್ಕಿಲ್ಲ, ಇರುವುದೊಂದು ಮನೆ ಬಿದ್ದಿದೆ. ಬಿದ್ದಿರುವ ಮನೆಯಲ್ಲಿಯೇ ನನ್ನ ಮಗಳೊಂದಿಗೆ ಜೀವನ ಸಾಗಿಸುತ್ತಿದ್ದೇನೆ. ಕೂಡಲೇ ಮನೆ ಹಾನಿ ಪರಿಹಾರ ಕೊಡಿ ಎಂದು ಎಷ್ಟೇ ಬೇಡಿಕೊಂಡರೂ, ಈ ವರೆಗೂ ಪರಿಹಾರ ನೀಡಿಲ್ಲ ಎಂದು ತಾಲೂಕಿನ ಹೊಳೆಆಲೂರ ಗ್ರಾಮದ 8ನೇ ವಾರ್ಡ್ ಸಂತ್ರಸ್ತೆ ಭೀಮವ್ವ ಓಲೇಕಾರ ಲೋಕಾಯುಕ್ತರಿಗೆ ಮನವಿ ಮಾಡಿದ್ದಾರೆ.
ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದ ಜಿಲ್ಲಾ ಲೋಕಾಯುಕ್ತ ಅಧಿಕಾರಿ ರವಿ ಪುರುಷೋತ್ತಮ ಅವರಲ್ಲಿ ಅಳಲು ತೋಡಿಕೊಂಡ ಅವರು, ನಾನೊಬ್ಬ ವಿಧವೆ, ನನ್ನ ಗಂಡ ಸತ್ತ 9 ವರ್ಷ ಆಗಿದೆ. 11 ವರ್ಷದ ಹೆಣ್ಣು ಮಗುವಿನೊಂದಿಗೆ, ನೆರೆ ಹಾವಳಿಯಿಂದ ಬಿದ್ದಿರುವ ಮನೆಯಲ್ಲಿಯೇ ಜೀವನ ಸಾಗಿಸುತ್ತಿದ್ದೇನೆ. ಮಲಪ್ರಭಾ ನದಿ ಪ್ರವಾಹದಿಂದಾಗಿ ಬಿದ್ದಿರುವ ನನ್ನ ಮನೆ ಮರಳಿ ದುರಸ್ತಿಗೆ ಪರಿಹಾರ ನೀಡಿ ಎಂದು ಎಷ್ಟೇ ಗೋಗರೆದರೂ ಯಾವುದೇ ಅಧಿಕಾರಿ ಕೇಳುತ್ತಿಲ್ಲ. ಏನಾದರೊಂದು ಸಬೂಬ ಹೇಳುತ್ತಾ ಬಂದಿದ್ದಾರೆ. ನನ್ನ ಮನೆ ಅಕ್ಕಪಕ್ಕದಲ್ಲಿ ಸ್ವಲ್ಪ ಮಟ್ಟದಲ್ಲಿ ಬಿದ್ದಿರುವ ಮನೆಗಳಿಗೆ ಪರಿಹಾರ ಕೊಟ್ಟಿದ್ದಾರೆ. ಆದರೆ ನನ್ನ ಮನೆ ಹಾನಿಗೆ ಪರಿಹಾರ ಕೊಟ್ಟಿಲ್ಲ. ಸಾಕಷ್ಟು ಬಾರಿ ಗ್ರಾಪಂಗೆ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇನೆ. ಆಯ್ತು ನೋಡೋಣ ಎನ್ನುತ್ತಲೇ ಇದ್ದಾರೆ. ಇದರಿಂದ ನನಗೆ ತೀವ್ರ ಅನ್ಯಾಯವಾಗಿದೆ. ನೀವಾದರೂ ನ್ಯಾಯ ಒದಗಿಸಿಕೊಡಿ. ಬೇಕಿದ್ರೆ ನಿಮ್ಮ ಕಾಲಿಗೆ ಬೀಳುತ್ತೇನೆ ಎಂದು ಕಣ್ಣೀರು ಹಾಕುತ್ತ ಬೇಡಿಕೊಂಡಳು.
ಗದಗ: ಲಾರಿ, ಕಾರು ಡಿಕ್ಕಿ, ಇಬ್ಬರು ಸಾವು
ಆಗ ಲೋಕಾಯುಕ್ತ ಅಧಿಕಾರಿ ರವಿ ಪುರುಷೋತ್ತಮ ಅವರು, ಉಪ ತಹಸೀಲ್ದಾರ್ ಜೆ.ಟಿ. ಕೊಪ್ಪದ ಅವರನ್ನು ಕರೆಯಿಸಿ, ಏನ್ರಿ? ಇಷ್ಟು ವರ್ಷ ಆದರೂ ಈ ವರೆಗೆ ಈ ಫಲಾನುಭವಿಗೆ ಮನೆ ಹಾನಿ ಪರಿಹಾರ ಯಾಕೆ ಕೊಟ್ಟಿಲ್ಲ, ಗಂಡ ಸತ್ತು ಒಂಬತ್ತು ವರ್ಷವಾಗಿದ್ದು, ಸಣ್ಣ ಮಗಳೊಂದಿಗೆ ಅದೇ ಮುರುಕಲು ಮನೆಯಲ್ಲಿ ಜೀವನ ಸಾಗಿಸುತ್ತಿರುವುದು ನಿಮಗೆ ಕಾಣಿಸುವದಿಲ್ಲವೇ? ಕೂಡಲೇ ಈ ಮಹಿಳೆಗೆ ನ್ಯಾಯ ಒದಗಿಸುವ ದಿಶೆಯಲ್ಲಿ ಕಾರ್ಯ ಕೈಗೊಳ್ಳಿ ಎಂದು ತಾಕೀತು ಮಾಡಿದರು. ಕೂಡಲೇ ಹೊಳೆಆಲೂರಿಗೆ ತೆರಳಿ, ವಸ್ತುಸ್ಥಿತಿ ಪರಿಶೀಲಿಸಿ ಮನೆ ಹಾನಿ ಪರಿಹಾರ ಬಿಡುಗಡೆಗೆ ಶ್ರಮಿಸಲಾಗುವುದು ಎಂದು ಉಪ ತಹಸೀಲ್ದಾರ್ ಜೆ.ಟಿ. ಕೊಪ್ಪದ ಭರವಸೆ ನೀಡಿದರು.
ತಾಲೂಕಿನ ಅಸೂಟಿ ಗ್ರಾಮದ ವಿಕಲಚೇತರಾದ ಹನುಮವ್ವ ಬಂಡಿವಡ್ಡರ ಅವರಿಗೆ ಕಳಡದ ಒಂದು ವರ್ಷದಿಂದ ಮಾಸಾಶನ ಬರುತ್ತಿಲ್ಲ. ಈ ಹಿಂದೆ ಪ್ರತಿ ತಿಂಗಳು ಮಸಾಶನ ಬರುತ್ತಿತ್ತು. ಈ ಕುರಿತು ತಹಸೀಲ್ದಾರ್ ಕಚೇರಿಯ ಕೇಳುತ್ತಾ ಬಂದಿದ್ದು, ಸ್ಪಂದನೆ ನೀಡುತ್ತಿಲ್ಲ ಎಂದು ಹನುಮವ್ವ ಬಂಡಿವಡ್ಡರ ಅಜ್ಜ ಮಲ್ಲಪ್ಪ ವಡ್ಡರ (ಮಾದರ) ದೂರು ಸಲ್ಲಿಸಿದರು.
ಪಡಿತರ ಚೀಟಿ ಪಡೆಯಲು ಕಳೆದೊಂದು ವರ್ಷದಿಂದ ಅರ್ಜಿ ಸಲ್ಲಿಸಿದ್ದು, ಈ ವರೆಗೂ ಪಡಿತರ ನಿತ್ಯ ತಹಸೀಲ್ದಾರ ಕಚೇರಿ, ಆಹಾರ ವಿಭಾಗ ಕಚೇರಿಗೆ ಅಲೆದು ಅಲೆದು ಸಾಕಾಗಿದೆ ಎಂದು ರೋಣ ಪಟ್ಟಣದ ಲಲಿತಾ ಬಡಿಗೇರ ದೂರು ಸಲ್ಲಿಸಿದರು. ಈ ವೇಳೆ ಲೋಕಾಯುಕ್ತ ಸಿಬ್ಬಂದಿ ವಿಶ್ವನಾಥ ದೀಪಾಲಿ, ಅಮರಶೆಟ್ಟಿ ಅರಿಸಿಣದ ಇದ್ದರು.