Council Election Karnataka : ಕೆಜಿಎಫ್‌ನಿಂದ ಕಾಂಗ್ರೆಸ್ ಅಭ್ಯರ್ಥಿ ಬಾಬು 3 ವರ್ಷ ಗಡಿಪಾರಾಗಿದ್ದೇಕೆ ?
- ಕೆಜಿಎಫ್‌ನಿಂದ 3 ವರ್ಷ ಕಾಲ ಕೆಜಿಎಫ್ ಬಾಬುಗೆ ಗಡೀಪಾರು ಮಾಡಿದ್ದು ಏಕೆ
- ಸಚಿವ ಎಸ್.ಟಿ.ಸೋಮಶೇಖರ್ ದಾಖಲೆ ಸಮೇತ ಹೇಳಿದ್ದಾರಷ್ಟೇ ಎಂದ ನಗರಾಭಿವೃದ್ಧಿ ಸಚಿವ ಬಿ.ಎ.ಭೈರತಿ,
ದಾವಣಗೆರೆ (ಡಿ.04): ಕೆಜಿಎಫ್‌ನಿಂದ (KGF) 3 ವರ್ಷ ಕಾಲ ಕೆಜಿಎಫ್ ಬಾಬುಗೆ ಗಡೀಪಾರು ಮಾಡಿದ್ದು ಏಕೆ? ಮಗಳೇ ಬಾಬು (KGF Babu) ಮೇಲೆ ದೂರು ಕೊಟ್ಟಿದ್ದನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್(STSomashekar) ದಾಖಲೆ ಸಮೇತ ಹೇಳಿದ್ದಾರಷ್ಟೇ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಭೈರತಿ, ಕಾಂಗ್ರೆಸ್ (Congress) ಅಭ್ಯರ್ಥಿ ಕೆಜಿಎಫ್ ಬಾಬು ವಿರುದ್ಧದ ವೈಯಕ್ತಿಕ ಟೀಕೆಯನ್ನು ಸಮರ್ಥಿಸಿಕೊಂಡರು. ಬಾಬು ವಿರುದ್ಧ ಮಗಳೇ ಪೊಲೀಸ್ ಠಾಣೆಯಲ್ಲಿ (Police station) ಕೇಸ್ ಕೊಟ್ಟಿದ್ದಾರೆ. ಸಚಿವ ಎಸ್.ಟಿ.ಸೋಮಶೇಖರ್ ದಾಖಲೆಗಳನ್ನೆಲ್ಲಾ ಇಟ್ಟು ಕೊಂಡು ಮಾತನಾಡಿದ್ದಾರೆಯೇ ಹೊರತು, ಯಾವುದೇ ವೈಯಕ್ತಿಕ ಟೀಕೆಯನ್ನೂ ಮಾಡಿಲ್ಲ. ಬಾಬು ಪುತ್ರಿ ನೀಡಿದ ದೂರಿನ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.
ನಗರದ ಜಿಎಂಐಟಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಜಿಎಫ್‌ನಿಂದ ಬಾಬುಗೆ ಗಡೀಪಾರು ಮಾಡಿದ್ದು ಏಕೆ? ಮೂರು ವರ್ಷಗಳ ಕಾಲ ಅಲ್ಲಿಂದ ಯಾಕೆ ಗಡೀಪಾರು ಮಾಡಿದ್ದರು ಎಂಬ ಬಗ್ಗೆ ಹೇಳಲಿ. ವಿಪ ಚುನಾವಣೆಯಲ್ಲಿ (MLC Election) ಪ್ರತಿ ಮತಕ್ಕೆ 5 ಲಕ್ಷ ರು. ಕೆಜಿಎಫ್ ಬಾಬು ನೀಡುತ್ತಿದ್ದಾರಂತೆ. ಅಷ್ಟೊಂದು ಹಣ ಬಾಬುರಿಗೆ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದರು.
ವಿಪ ಚುನಾವಣೆಗೆ 500 ಕೋಟಿ ರು.ಗಳನ್ನು ಬಾಬು ಖರ್ಚು ಮಾಡುತ್ತಾರಂತೆ. ಹೀಗಾದ್ರೆ ಪ್ರಜಾಪ್ರಭುತ್ವ ಉಳಿಯುತ್ತದೆಯೇ? ಇಂತಹವರಿಗೆ ಮತದಾರರು ಓಟು ಹಾಕಬೇಕಾ? ಕೆಜಿಎಫ್ ಬಾಬು ಚರಿತ್ರೆ ಏನು ಅಂತಾ ಸೋಮಶೇಖರ್ ದಾಖಲೆ ಹಿಡಿದೇ ಹೇಳುತ್ತಿದ್ದಾರೆ. ನಾವ್ಯಾರೂ ವೈಯಕ್ತಿಕವಾಗಿ ಇಂತಹ ಮಾತುಗಳನ್ನು ಹೇಳುತ್ತಿಲ್ಲ. ಸ್ವತಃ ಬಾಬು ಮಗಳೇ ಪೊಲೀಸ್ (Police) ಠಾಣೆಗೆ ದೂರು ನೀಡಿದ್ದಾರೆ. ಸೋಮಶೇಖರ್ ಹೇಳಿದ್ದು ಸರಿಯಾಗಿಯೇ ಇದೆ ಎಂದು ಪುನರುಚ್ಛರಿಸಿದರು.
ರಾಜ್ಯದಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆ ಆಗಬಹುದು ಎಂದು ವಿಜಯಪುರ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಹೇಳಿರುವುದಕ್ಕೆ ಯತ್ನಾಳ್‌ರನ್ನೇ ನೀವು ಕೇಳಬೇಕು. ಸಚಿವರ ಬದಲಾವಣೆ ಅಂತೆಲ್ಲಾ ಯತ್ನಾಳ್ ಹೇಳಿರುವುದನ್ನು ಮಾಧ್ಯಮಗಳಲ್ಲಿ ನಾನೂ ಗಮನಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸಕ್ಕೆ ಬೇರೆ ಅರ್ಥ ನೀಡಬೇಕಿಲ್ಲ. ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ನವೀನ್ ಪರ ಪ್ರಚಾರಕ್ಕೆ ಡಿ.4ರಂದು ದಾವಣಗೆರೆ (Davanagere) ತಾಲೂಕಿನ ಆನಗೋಡು ಗ್ರಾಮಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಆಗಮಿಸಲಿದ್ದಾರೆ ಎಂದು ಹೇಳಿದರು.
ಓಮಿಕ್ರಾನ್ (Omicron) ಸೋಂಕಿನ ಹಿನ್ನೆಲೆಯಲ್ಲಿ ತಜ್ಞರು, ಉನ್ನತ ಅಧಿಕಾರಿಗಳ ಸಭೆಯನ್ನು ಮುಖ್ಯಮಂತ್ರಿ, ಆರೋಗ್ಯ ಸಚಿವರು ಕರೆದಿದ್ದಾರೆ. ರೂಪಾಂತರಿ ವೈರಸ್ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ, ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಸೋಂಕು ತಡೆಗೆ ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದು ಆಗುತ್ತದೆ. ಸಾವು, ನೋವುಗಳಿಗೆ ಅವಕಾಶ ನೀಡುವುದಿಲ್ಲ. ಇನ್ನು 7-8 ದಿನಕ್ಕೆ ರಾಜ್ಯದ 25 ವಿಧಾನ ಪರಿಷತ್ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಬೆಳಗಾವಿಯಲ್ಲಿ ನಿರ್ಧರಿತವಾದಂತೆ ಅಧಿವೇಶನ ನಡೆಯಲಿದೆ.
- ಬಿ.ಎ.ಬಸವರಾಜ ಭೈರತಿ ನಗರಾಭಿವೃದ್ಧಿ ಸಚಿವ.
ಮತ್ತೊಂದು ಸಂಕಷ್ಟ :
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ (Karnataka MLC Election) ರಾಜಕೀಯ ಚಟುವಟಿಕೆಗಳು ರಂಗೇರಿದೆ. ಆದ್ರೆ, ಬೆಂಗಳೂರು ನಗರ ಜಿಲ್ಲೆ ಕಾಂಗ್ರೆಸ್ ಅಭ್ಯರ್ಥಿಗೆ (Congress Candidate) ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಲೇ ಇವೆ.
ಹೌದು..ಮೊನ್ನೇ ಅಷ್ಟೇ ಸಚಿವ ಎಸ್‌ಟಿ ಸೋಮಶೇಖರ್ ಅವರು ಬೆಂಗಳೂರು ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ (yousuf sharif ) ಅಲಿಯಾಸ್ ಕೆಜಿಎಫ್ ಬಾಬು( KGF Babu) ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಇದೀಗ ಬಿಜೆಪಿ ಯೂಸುಫ್ ಷರೀಫ್ ವಿರುದ್ಧ ದೂರು ದಾಖಲಿಸಿದೆ.
ಹಣದ ಆಮಿಷ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ ಬಾಬು ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ (Election Commission) ದೂರು ನೀಡಿದೆ.
ಬಿಜೆಪಿ(BJP) ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ (N Ravikumar) ಮತ್ತು ಬಿಜೆಪಿ ಎಸ್.ಸಿ. ಮೋರ್ಚ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾಗೆ ದೂರು ಸಲ್ಲಿಸಿದ್ದು, ಪ್ರಚಾರ ಭಾಷಣದಲ್ಲಿ ಹಣ ನೀಡುವ ಆಮಿಷ ತೋರಿಸಿದ್ದಾರೆ. ಇದರಿಂದ ಅವರನ್ನ ಚುನಾವಣಾ ಕಣದಿಂದ ಬಾಬು ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರತಿಕ್ರಿಯಿಸಿದ್ದು, ಯೂಸುಫ್ ಬಾಬು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಕಾಂಗ್ರೆಸ್ ಯೂಸುಫ್ ಬಾಬು ಅವರನ್ನು ಚುನಾವಣಾ ಕಣದಿಂದ ನಿವೃತ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ವಿರುದ್ಧ ಆರೋಪ ಮಾಡುವುದನ್ನು ಕಾಂಗ್ರೆಸ್ ನಿಲ್ಲಿಸಬೇಕು. ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಗೆ ಸಂವಿಧಾನದ ಬಗ್ಗೆ ಗೌರವ ಇದ್ದರೆ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಲಿ. ಯೂಸುಫ್ ಬಾಬು ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಕ್ರಮ ತೆಗೆದುಕೊಳ್ಳಬೇಕು, ಪಕ್ಷದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.