ಚುನಾವಣೆ ಅಂದ ಮೇಲೆ ಪಕ್ಷ ದುಡ್ಡು ಕೊಡೋದು ಸಹಜ. ಆದರೆ ಲೆಕ್ಕ ಕೇಳಲು ಸಂಸದ ವಿ. ಶ್ರೀನಿವಾಸಪ್ರಸಾದ್‌ ಯಾರು? ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಪ್ರಶ್ನಿಸಿದರು.

ಮೈಸೂರು (ಡಿ.18): ಚುನಾವಣೆ ಅಂದ ಮೇಲೆ ಪಕ್ಷ ದುಡ್ಡು ಕೊಡೋದು ಸಹಜ. ಆದರೆ ಲೆಕ್ಕ ಕೇಳಲು ಸಂಸದ ವಿ. ಶ್ರೀನಿವಾಸಪ್ರಸಾದ್‌ ಯಾರು? ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಪ್ರಶ್ನಿಸಿದರು.

ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಹುಣಸೂರು ಉಪ ಚುನಾವಣೆ (By Election) ವೇಳೆ ಯಡಿಯೂರಪ್ಪ (Yediyurappa) ’ಸೈನಿಕ’ನ ಕೈಯಲ್ಲಿ ದುಡ್ಡು ಕೊಟ್ಟು ಕಳುಹಿಸಿದ್ದರು. ‘ಸೈನಿಕ’ ಹುಣಸೂರಿಗೆ ಬರಲಿಲ್ಲ. ಈ ವಿಚಾರವನ್ನು ಈಗಾಗಲೇ ಹೇಳಿದ್ದೇನೆ. ಎಲ್ಲಾ ಚುನಾವಣೆಗಳಲ್ಲೂ ಪಕ್ಷದವರು ದುಡ್ಡು ಕೊಡುತ್ತಾರೆ. ಶ್ರೀನಿವಾಸಪ್ರಸಾದ್‌ ಅವರಿಗೆ ಅವರಿದ್ದ ಪಕ್ಷಗಳು ಹಣ ನೀಡಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು? ನನಗೆ ಎಷ್ಟುಕೋಟಿ ಬಂದಿದೆ ಅಂತ ಶ್ರೀನಿವಾಸಪ್ರಸಾದ್‌ಗೆ ಏನು ಗೊತ್ತು? ಅವರಿಗೆ ಗೊತ್ತಿಲ್ಲದ ವಿಚಾರವನ್ನು ಯಾಕೆ ಮಾತಾನಾಡಬೇಕು ಎಂದರು.

ದಲಿತರ ಕಷ್ಟಕ್ಕಾಗದ ರಾಜಕಾರಣಿ:

ವಿ. ಶ್ರೀನಿವಾಸಪ್ರಸಾದ್‌ ದಲಿತರ ಕಷ್ಟಕ್ಕಾಗದ ರಾಜಕಾರಣಿ. ಮುರುಘ ಸ್ವಾಮೀಜಿ ದಲಿತರ ಹೆಣ್ಣು ಮಗಳನ್ನು ಕೆಡಿಸಿದ. ಅಂಬೇಡ್ಕರ್‌ ಮೊಮ್ಮಗ ಆನಂದ ತೇಲ್ತುಂಬ್ಡೆ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಯಿತು. ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಯಾವ ಸಂದರ್ಭದಲ್ಲಾದರೂ ನೀವು ಧ್ವನಿ ಎತ್ತಿದ್ದೀರಾ?. ಕೇಂದ್ರ ಸಚಿವರಾಗಿದ್ದಾಗ ಸಂವಿಧಾನ ಪರಿಷ್ಕರಣೆಯಾಗಬೇಕು ಎಂಬ ಹೇಳಿಕೆ ನೀಡಿದ್ದಿರಿ. ನೀವು ವೈಟ್‌ ಕಾಲರ್‌ ರಾಜಕಾರಣಿ ಎಂದು ಟೀಕಿಸಿದರು. ನನ್ನ ಬಗ್ಗೆ ಯಾವುದೋ ಬೀದಿ ರೌಡಿ ರೀತಿ ಮಾತನಾಡಿದ್ದೀರಿ. ನನ್ನ ಬಗ್ಗೆ ಬಳಸಿರುವ ಪದಗಳನ್ನು ಜನ ಕ್ಷಮಿಸುವುದಿಲ್ಲ ಎಂದರು.

ಪ್ರತಾಪ್‌ಸಿಂಹ ವಿರುದ್ಧವೂ ಟೀಕೆ:

ನನ್ನನ್ನು ಪಕ್ಷ ಬಿಡು ಅನ್ನಲು ನೀನ್ಯಾರು? ಎಂದು ಸಂಸದ ಪ್ರತಾಪ ಸಿಂಹ ವಿರುದ್ಧವೂ ಎಚ್‌. ವಿಶ್ವನಾಥ್‌ ಹರಿಹಾಯ್ದರು. ನಾನು ಮಾತನಾಡಿರೋದು ಸರಿಯೋ ತಪ್ಪೋ? ಅದನ್ನು ಕೇಳೋಕೆ ರಾಜ್ಯಾಧ್ಯಕ್ಷರು ಇದ್ದಾರೆ. ನೀನೇನು ರಾಜ್ಯಾಧ್ಯಕ್ಷನೇ? ಪ್ರತಾಪ್‌ ಸಿಂಹ ನನ್ನ ಬಗ್ಗೆ ಮಾತನಾಡುವ ನೈತಿಕತೆ ನಿನಗೇನಿದೆಯೇ. ನೀನೇ ಸರಿಯಿಲ್ಲ, ಬೇರೆಯವರಿಗೆ ಬುದ್ದಿ ಹೇಳೋ ಕೆಲಸ ಮಾಡುತ್ತಿದ್ದೀಯ? ಎಂದು ಕಿಡಿಕಾರಿದರು.

ಬೇರೆಯವರು ಮಾಡಿರುವ ಕೆಲಸವನ್ನು ನಾನು ಮಾಡಿದ್ದು ಅಂತ ತಿರುಗುತ್ತೀಯ ನಾಚಿಕೆ ಆಗಬೇಕು ನಿನಗೆ. ಆಸ್ಕರ್‌ ಫರ್ನಾಂಡೀಸ್‌ ಅವರ ಕಾಲದ ರಸ್ತೆ ನಾನು ಮಾಡಿಸಿದೆ ಅಂತೀಯ ಎಂದು ಛೇಡಿಸಿದರು.

ಈಶ್ವರಪ್ಪ ವಿರುದ್ಧವೂ ಗುಟುರು

ಕಾಂಗ್ರೆಸ್‌ ಪಕ್ಷ ಬ್ಯಾನ್‌ ಮಾಡುವ ಪರಿಸ್ಥಿತಿ ಬರುತ್ತದೆ ಎಂಬ ಈಶ್ವರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರಿಗೆ ಮರ್ಯಾದೆ ಇದೆಯಾ? ಕೊಟ್ಟಇಲಾಖೆ ಸರಿಯಾಗಿ ನಡೆಸಿದ್ದಾರಾ? ಎಂದು ತಿರುಗೇಟು ನೀಡಿದರು. ಕಾಂಗ್ರೆಸ್‌ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಪಕ್ಷ. ಇಂದಿರಾಗಾಂಧಿ ಮನೆ ಇಂದು ಮ್ಯೂಸಿಯಂ ಆಗಿದೆ. ಅವರ ದೇವರ ಕೋಣೆಯಲ್ಲಿ ಭಾರತದ ಭೂಪಟ ಇದೆ. ಅದಕ್ಕೆ ಅವರು ಪೂಜೆ ಮಾಡುತ್ತಿದ್ದರು. ಇಂದಿರಾಗಾಂಧಿ ನಿಜವಾದ ದೇಶ ಭಕ್ತರು. ನಿವು ಯಾಕೆ ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡುತಿದ್ದೀರಿ? ಕಾಂಗ್ರೆಸ್‌ಗೆ ಹೋಗುವ ಸಂದರ್ಭ ಬಂದರೆ ಹೋಗುತ್ತೇನೆ. ಇಲ್ಲವಾದರೆ ಇರುತ್ತೇನೆ, ಆದರಲ್ಲಿ ಏನಿದೆ ಎಂದು ಅವರು ತೀಷ್ಣವಾಗಿ ಪ್ರತಿಕ್ರಿಯಿಸಿದರು.

ಯಾವುದೇ ಪಕ್ಷದಲ್ಲಿ ಇದ್ದೂ ಅದರ ತಪ್ಪಿನ ಬಗ್ಗೆ ಮಾತಾಡೋದು ನಾನು ಮಾತ್ರ. ನನ್ನ ಜಂಡ ಬದಲಾಗಬಹುದು. ಆದರೆ ಅಜೆಂಡ ಬದಲಾಗುವುದಿಲ್ಲ ಎಂದರು.

ಡಿಕೆಶಿ ಪರ ವಿಶ್ವನಾಥ್‌ ಬ್ಯಾಟಿಂಗ್‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪರ ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಬ್ಯಾಟಿಂಗ್‌ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್‌ ಹೇಳಿದ್ದರಲ್ಲಿ ತಪ್ಪೇನಿದೆ? ನೀವು ಮತದಾರ ಪಟ್ಟಿಯನ್ನೇ ಬದಲಿಸುತ್ತಿದ್ದರಲ್ಲ, ನಾಚಿಗೆ ಆಗುವುದಿಲ್ಲವೇ? ಚುನಾವಣೆಯೇ ಪ್ರಜಾಪ್ರಭುತ್ವದ ಆತ್ಮ. ಮತದಾರರ ಹಕ್ಕನ್ನೇ ಕಸಿಯಲು ನೀವು ಹೊರಟಿದ್ದೀರಿ. ಅದನ್ನು ಕೇಳಿದಾಗ ಮತ್ತ್ಯಾವುದನ್ನೋ ತಂದು ಬಿಟ್ಟು ಬಿಡುತ್ತೀರಿ. ಬಿಜೆಪಿಯ ಈ ನಡೆಯನ್ನು ನಾನು ಒಪ್ಪುವುದಿಲ್ಲ. ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಯಾಕಿಷ್ಟುಸುಳ್ಳು ಹೇಳ್ತಿದ್ದೀರಿ. ಡಿ.ಕೆ. ಶಿವಕುಮಾರ್‌ ಆಗಲಿ, ಕಾಂಗ್ರೆಸ್‌ ಆಗಲಿ ಭಯೋತ್ಪಾದಕರ ಬೆನ್ನು ತಟ್ಟುತ್ತಿಲ್ಲ. ನೀವೇ ಸುಮ್ಮನೆ ಮಾತನಾಡುತ್ತಿದ್ದೀರಿ ಎಂದು ಕಟುವಾಗಿ ಟೀಕಿಸಿದರು.