ಬೆಂಗಳೂರು [ಅ.04] :  ಬೆಂಗಳೂರು ನಗರದಲ್ಲಿ ಇಡೀ ವರ್ಷ ಸುರಿಯುವ ಮಳೆ ಪ್ರಮಾಣ ಗಮನಿಸಿದರೆ ವೈಟ್‌ಟಾಪಿಂಗ್‌ ರಸ್ತೆಗಳ ಅವಶ್ಯಕತೆ ಇಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಇಡೀ ವರ್ಷ ಸುರಿಯುವ ಮಳೆಯ ಪ್ರಮಾಣವನ್ನು ಗಮನಿಸಿದರೆ ನಗರದ ರಸ್ತೆಗಳಿಗೆ ವೈಟ್‌ ಟಾಪಿಂಗ್‌ ಮಾಡುವ ಅವಶ್ಯಕತೆ ಇಲ್ಲ. ರಸ್ತೆಯ ಅಕ್ಕ-ಪಕ್ಕದ ಚರಂಡಿಗಳನ್ನು ಸುಸ್ಥಿತಿಯಲ್ಲಿ ನೋಡಿಕೊಂಡರೆ ಬ್ಲಾಕ್‌ ಟಾಪಿಂಗ್‌ (ಡಾಂಬರು) ರಸ್ತೆಗಳು ಉತ್ತಮ ಬಾಳಿಕೆ ಬರಲಿವೆ. ಆದರೆ, ಅದು ಆಗುತ್ತಿಲ್ಲ, ಹಾಗಾಗಿ, ರಸ್ತೆಗಳ ಗುಂಡಿ ಸಮಸ್ಯೆ ಎದುರಿಸಬೇಕಾಗಿದೆ. ಚರಂಡಿ ವ್ಯವಸ್ಥೆ ಉತ್ತಮ ಪಡಿಸಿದರೆ ಬೆಂಗಳೂರಿನ ಡಾಂಬರು ರಸ್ತೆಗಳೂ ಏಳರಿಂದ ಎಂಟು ವರ್ಷ ಬಾಳಿಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅತಿ ಹೆಚ್ಚು ವಾಹನ ದಟ್ಟಣೆ ಇರುವ ಮುಂಬೈನಂತಹ ಮಹಾನಗರದಲ್ಲಿಯೇ ವೈಟ್‌ ಟಾಪಿಂಗ್‌ ರಸ್ತೆಗಳನ್ನು ಮಾಡಿಲ್ಲ. ಅಲ್ಲಿ ಇಂದಿಗೂ ಡಾಂಬಾರ್‌ ರಸ್ತೆಗಳಿದ್ದು, ಉತ್ತಮ ಬಾಳಿಕೆ ಬರುತ್ತಿವೆ. ಕಾರಣ ಅಲ್ಲಿನ ಚರಂಡಿ ವ್ಯವಸ್ಥೆ ಉತ್ತಮವಾಗಿದೆ. ಭೋಗೋಳಿಕವಾಗಿ ಬೆಂಗಳೂರು ನಗರ ಗುಡ್ಡ ಮತ್ತು ತಗ್ಗು ಪ್ರದೇಶದಲ್ಲಿದೆ. ಹೀಗಾಗಿ, ಚರಂಡಿ ವ್ಯವಸ್ಥೆಯನ್ನು ಅದಕ್ಕೆ ಅನುಗುಣವಾಗಿ ನಿರ್ಮಾಣ ಮಾಡಬೇಕು. ಆಗ ನಗರದ ರಸ್ತೆಗಳೂ ಉತ್ತಮ ಬಾಳಿಕೆ ಬರಲಿವೆ ಎಂದು ಹೇಳಿದರು.

‘9ರಿಂದ ವೈಟ್‌ ಟಾಪಿಂಗ್‌ ಉಳಿಕೆ ಕಾಮಗಾರಿ’

ವೈಟ್‌ ಟಾಪಿಂಗ್‌ ರಸ್ತೆ ಕಾಮಗಾರಿ ಸ್ಥಗಿತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಆಯುಕ್ತರು, ಈಗಾಗಲೇ ನಗರದಲ್ಲಿ ಕೈಗೊಂಡಿರುವ ಎರಡು ಹಂತದ ಉಳಿಕೆ ಆಗಿರುವ ವೈಟ್‌ ಟಾಪಿಂಗ್‌ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್‌ ಇಲಾಖೆಯ ಅಧಿಕಾರಿಗಳೊಂದಿಗೆ ಎರಡು ಬಾರಿ ಸಭೆ ಮಾಡಲಾಗಿದೆ. ಅ.9ರಿಂದ ಬಾಕಿ ಉಳಿದಿರುವ ವೈಟ್‌ಟಾಪಿಂಗ್‌ ರಸ್ತೆಗಳ ಕಾಮಗಾರಿಗೆ ಪೊಲೀಸ್‌ ಇಲಾಖೆ ಅನುಮತಿ ನೀಡಲಿದೆ. ಜತೆಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸುವುದಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಆ ಪ್ರಕಾರ ಕಾಮಗಾರಿ ನಡೆಯಲಿದೆ. ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಾಲಿಕೆಯಿಂದ ಬೆಂಗಳೂರು ಉತ್ತರ ಮತ್ತು ಕೇಂದ್ರ ಭಾಗದಲ್ಲಿ ಡಾಂಬಾರ್‌ ತಯಾರಿಕ ಘಟಕ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ಎರಡು ಭೂಭರ್ತಿ ಕೇಂದ್ರಗಳನ್ನು ಘಟಕ ಸ್ಥಾಪನೆಗೆ ಗುರುತಿಸಲಾಗಿದೆ. ಶೀಘ್ರದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ನಂತರ ಘಟಕ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು.