Asianet Suvarna News Asianet Suvarna News

Weekend Curfew Bengaluru : 944 ವಾಹನ ಖಾಕಿ ವಶಕ್ಕೆ: ಗೃಹ ಸಚಿವ ಆರಗರಿಂದ ಖುದ್ದು ಭದ್ರತೆ ಪರಿಶೀಲನೆ!

*ನಗರದಲ್ಲಿ 2ನೇ ದಿನವೂ ಉತ್ತಮ ಪ್ರತಿಕ್ರಿಯೆ
*ಅಗತ್ಯವಸ್ತುಗಳ ಮಾರಾಟ ಹೊರತುಪಡಿಸಿ ಉಳಿದೆಲ್ಲಾ ವಾಣಿಕ್ಯ ಚಟುವಟಿಕೆ ಬಂದ್‌
*ಭಾನುವಾರ ರಜಾ ದಿನವಾಗಿದ್ದರಿಂದ ವಾಹನಗಳ ಸಂಚಾರವೂ ವಿರಳ
*ಸಚಿವ ಆರಗರಿಂದ ಖುದ್ದು ಭದ್ರತೆ ಪರಿಶೀಲನೆ!
*ನಗರದ ಬಹುತೇಕ ಭಾಗಗಳು ಬಿಕೋ, ರಸ್ತೆಗಳು ಸ್ತಬ್ಧ
 

Weekend Curfew Succesful in Silicon City Bengaluru on Sunday Araga Jnanendra City Rounds mnj
Author
Bengaluru, First Published Jan 10, 2022, 5:50 AM IST

ಬೆಂಗಳೂರು (ಜ. 10): ವಾರಾಂತ್ಯ ಕರ್ಫ್ಯೂ (Weekend Curfew) ಜಾರಿಯಾದ ಎರಡನೇ ದಿನವಾದ ಭಾನುವಾರ ಸಹ ನಗರದಲ್ಲಿ ಅಗತ್ಯವಸ್ತುಗಳ ವ್ಯಾಪಾರ ಹೊರತುಪಡಿಸಿದರೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆ ಬಂದ್‌ ಆಗಿತ್ತು. ನಗರದ ಬಹುತೇಕ ಭಾಗಗಳು ಬಿಕೋ ಎನ್ನುತ್ತಿದ್ದವು. ವಸತಿ ಪ್ರದೇಶಗಳಲ್ಲಿ ಇರುವ ದಿನಸಿ ಅಂಗಡಿ, ತರಕಾರಿ, ಹಾಲಿನ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಪ್ರಮುಖ ಮಾರ್ಗಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕಿ ವಿಚಾರಿಸುತ್ತಿದ್ದರಿಂದ ಅನಗತ್ಯವಾಗಿ ಸಂಚರಿಸುವವರ ಸಂಖ್ಯೆ ಕಡಿಮೆ ಇತ್ತು. ರಜಾ ದಿನವಾಗಿದ್ದರಿಂದ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಓಡಾಟ ಇರಲಿಲ್ಲ. ಕೇವಲ ತುರ್ತು ಸೇವೆಯಲ್ಲಿ ತೊಡಗಿರುವವರು, ಬೇರೆ ಊರಿಗೆ ಹೋಗಬೇಕಾದ ಅನಿವಾರ್ಯತೆ ಇದ್ದವರು ಮಾತ್ರ ಆಟೋ, ಬಸ್‌, ಮೆಟ್ರೋ ರೈಲುಗಳಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿತು.

ನಗರದ ಕೆ.ಆರ್‌.ಮಾರುಕಟ್ಟೆ, ಕಾರ್ಪೊರೇಷನ್‌ ವೃತ್ತ, ಮೆಜೆಸ್ಟಿಕ್‌, ಮಲ್ಲೇಶ್ವರ, ಯಶವಂತಪುರ, ವಿಜಯನಗರ, ಕೋರಮಂಗಲ ಸೇರಿದಂತೆ ಪ್ರಮುಖ ಪ್ರದೇಶಗಳ ಬಹುತೇಕ ಹೋಟೆಲ್‌ಗಳು ಬಂದ್‌ ಆಗಿದ್ದವು. ಕೆಲವು ಹೊಟೇಲ್‌ಗಳು ತೆರೆದಿದ್ದರೂ ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ ಇದ್ದ ಕಾರಣ ಅಲ್ಪ ಪ್ರಮಾಣದಲ್ಲಿ ಊಟ, ತಿಂಡಿ ತಯಾರಿಸಿದ್ದರು.

ಕೆ.ಆರ್‌.ಮಾರುಕಟ್ಟೆಯಲ್ಲಿ ನಿತ್ಯ ನಡೆಯುವ ಹೂವಿನ ವ್ಯಾಪಾರ, ತರಕಾರಿ, ಹಣ್ಣಿನ ವ್ಯಾಪಾರ ಸಾಕಷ್ಟುಕುಸಿದಿತ್ತು. ಕೊಳ್ಳುವವರು ಇಲ್ಲದೇ ವಿವಿಧ ಬಗೆಯ ಸೊಪ್ಪುಗಳನ್ನು ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು, ಹೀಗಾಗಿ ಸೊಪ್ಪುಗಳ ದರ ಸಾಕಷ್ಟುಇಳಿಕೆಯಾಗಿತ್ತು. ಇನ್ನೂ ಹೂವಿನ ವ್ಯಾಪಾರ ಸಹ ಕಡಿಮೆ ಇದ್ದ ಕಾರಣ ವಿಶೇಷವಾಗಿ ಅಲಂಕಾರಿಕ ಹೂವುಗಳನ್ನು ಅನೇಕರು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ತಂದಿರಲಿಲ್ಲ.

ಸುಖಾಸುಮ್ಮನೆ ರಸ್ತೆಗಿಳಿದ 944 ವಾಹನ ಖಾಕಿ ವಶಕ್ಕೆ

ವಾರಾಂತ್ಯದ ಕರ್ಫ್ಯೂ ವೇಳೆ ಅನಗತ್ಯವಾಗಿ ರಸ್ತೆಗಳಿದ ವಾಹನ ಸವಾರರಿಗೆ ಬಿಸಿ ಮುಟ್ಟಿಸಿರುವ ಪೊಲೀಸರು, ಭಾನುವಾರವೂ ನಗರದಲ್ಲಿ 944 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಪೂರ್ವ ವಿಭಾಗದಲ್ಲಿ 91, ದಕ್ಷಿಣ 51, ಈಶಾನ್ಯ 42, ಪಶ್ಚಿಮ 414, ಉತ್ತರ 147, ದಕ್ಷಿಣ 171, ಕೇಂದ್ರ ವಿಭಾಗದಲ್ಲಿ 28 ಸೇರಿದಂತೆ ಒಟ್ಟು 944 ವಾಹನ ಜಪ್ತಿ ಮಾಡಿದ್ದಾರೆ. ಈ ಪೈಕಿ 864 ದ್ವಿಚಕ್ರ ವಾಹನ, 26 ತ್ರಿಚಕ್ರ ವಾಹನ ಹಾಗೂ 54 ನಾಲ್ಕು ಚಕ್ರದ ವಾಹನಗಳಾಗಿವೆ.

ತುರ್ತು ಹಾಗೂ ಅಗತ್ಯ ಸೇವೆ ವಾಹನಗಳನ್ನು ಹೊರತುಪಡಿಸಿ ಅನಗತ್ಯವಾಗಿ ಸಂಚರಿಸುವ ವಾಹನಗಳ ಮೇಲೆ ಪೊಲೀಸರು ತೀವ್ರ ನಿಗಾ ವಹಿಸಿದ್ದರು. ಪ್ರಮುಖ ರಸ್ತೆಗಳು, ಜಂಕ್ಷನ್‌ಗಳು, ವೃತ್ತಗಳಲ್ಲಿ ಬ್ಯಾರಿಕೇಡ್‌ ಇರಿಸಿ ಪ್ರತಿ ವಾಹನ ತಪಾಸಣೆ ನಡೆಸಿದರು. ವಿನಾಕಾರಣ ಓಡಾಡುತ್ತಿರುವ ವಾಹನಗಳನ್ನು ಜಪ್ತಿ ಮಾಡಿದರು. ಶನಿವಾರ 829 ವಾಹನಗಳನ್ನು ಜಪ್ತಿ ಮಾಡಿದ್ದರು. ಇದರೊಂದಿಗೆ 2 ದಿನದಲ್ಲಿ 1773 ವಾಹನಗಳನ್ನು ವಶಕ್ಕೆ ಪಡೆದಂತಾಗಿದೆ.

ಗೃಹ ಸಚಿವ ಆರಗರಿಂದ ಖುದ್ದು ಭದ್ರತೆ ಪರಿಶೀಲನೆ

ಪೊಲೀಸರು ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪೊಲೀಸರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಬೂಸ್ಟರ್‌ ಡೋಸ್‌ ಕೊರೋನಾ ಲಸಿಕೆ ನೀಡುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವೀಕೆಂಡ್‌ ಕರ್ಫ್ಯೂ ಹಿನ್ನೆಲೆಯಲ್ಲಿ ಭಾನುವಾರ ಎಂ.ಜಿ.ರಸ್ತೆ, ಕೆ.ಆರ್‌.ವೃತ್ತ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ವೀಕೆಂಡ್‌ ಕರ್ಫ್ಯೂಗೆ ಜನ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ದಿನೇ ದಿನೆ ಸೋಂಕು ಹೆಚ್ಚಾಗುತ್ತಿದೆ. ಬೆಂಗಳೂರು ನಗರ ಡೇಂಜರ್‌ ಝೋನ್‌ನಲ್ಲಿದ್ದು, 20 ಸಾವಿರ ಕೇಸ್‌ಗಳು ವರದಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಸೇವೆ ಶ್ಲಾಘನೀಯ. ಮುಂದಿನ ದಿನಗಳಲ್ಲಿ ವೀಕೆಂಡ್‌ ಕಫä್ರ್ಯ ಮಾಡುವ ಬಗ್ಗೆ ತಜ್ಞರ ವರದಿ ಮೇಲೆ ನಿರ್ಧರಿಸುವುದಾಗಿ ತಿಳಿಸಿದರು.

ಸಚಿವರ ಪುತ್ರನಿಗೆ ಬ್ಲ್ಯಾಕ್‌ ಮೇಲ್‌ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ಈ ಪ್ರಕರಣ ಸಂಬಂಧ ಎರಡು-ಮೂರು ಜನರನ್ನು ಬಂಧಿಸಲಾಗಿದೆ. ಪ್ರಕರಣ ಇನ್ನೂ ತನಿಖೆ ಹಂತದಲ್ಲಿ ಇರುವುದರಿಂದ ಆ ಬಗ್ಗೆ ನಾನು ಪ್ರತಿಕ್ರಿಯಸುವುದಿಲ್ಲ ಎಂದರು. ಇನ್ನು ಕಾಂಗ್ರೆಸ್‌ ಪಾದಯಾತ್ರೆ ಸಂಬಂಧ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಮಾಂಸ ಮಳಿಗೆಯಲ್ಲಿ ರಶ್‌:

ಭಾನುವಾರ ರಜೆ ಹಿನ್ನೆಲೆ ಮೀನು ಮಳಿಗೆಗಳು, ಕೋಳಿ ಮತ್ತು ಕುರಿ ಮಾಂಸದ ಅಂಗಡಿಗಳ ವ್ಯಾಪಾರ ಹೆಚ್ಚಾಗಿತ್ತು. ಅನೇಕ ಕಡೆ ಜನರು ಸಾಲಿನಲ್ಲಿ ನಿಂತು ಖರೀದಿಸುತ್ತಿದ್ದರು. ನಗರದ ಬಸವೇಶ್ವರ ನಗರ, ಶ್ರೀನಗರ, ಜಯನಗರ, ಮಲ್ಲೇಶ್ವರ, ಹೆಬ್ಬಾಳ, ಯಲಹಂಕ ಎಚ್‌ಎಸ್‌ಆರ್‌ ಬಡಾವಣೆ, ಕೋರಮಂಗಲ, ಕೆ.ಆರ್‌.ಪುರ ಸೇರಿದಂತೆ ಅನೇಕ ಕಡೆ ಮಾಂಸ ಮಳಿಗೆಗಳು ಬೆಳಗ್ಗೆ 4.30ರಿಂದಲೇ ಪ್ರಾರಂಭವಾಗಿದ್ದವು.

ಪಾರ್ಕ್ಗಳಿಗೆ ಬೀಗ:

ಕರ್ಫ್ಯೂ ಹಿನ್ನೆಲೆ ನಗರದ ಕಬ್ಬನ್‌ ಪಾರ್ಕ್ ಮತ್ತು ಲಾಲ್‌ಬಾಗ್‌ಗೆ ಸಾರ್ವಜನಿಕರ ಪ್ರಯಾಣಿಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈ ಕುರಿತು ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಇಲ್ಲದ ಪರಿಣಾಮ ಭಾನುವಾರ ಬೆಳಗ್ಗೆ ವಾಯುವಿಹಾರ ನಡೆಸಲು ಉದ್ಯಾನವನಗಳಿಗೆ ಆಗಮಿಸಿದ್ದರು. ನಂತರ ಉದ್ಯಾನಗಳ ಬಂದ್‌ ಆಗಿರುವ ಸಂಬಂಧ ಫಲಕಗಳನ್ನು ಗಮನಿಸಿ ಮನೆಗಳಿಗೆ ಹಿಂದಿರುಗಿದರು. ಅಲ್ಲದೆ, ಬಿಬಿಎಂಪಿ ನಿರ್ವಹಣೆ ಮಾಡುವ ಎಲ್ಲ ಪಾರ್ಕ್ಗಳನ್ನು ಬಂದ್‌ ಮಾಡಲಾಗಿತ್ತು.

ವಾಹನ ಸಂಚಾರ ವಿರಳ:

ಅಗತ್ಯ ಸೇವೆಗಳಿಗೆ ಬಳಕೆಗಾಗಿ ಸುಮಾರು 750 ಬಿಎಂಟಿಸಿ ಬಸ್‌ಗಳನ್ನು ನಗರದ ಪ್ರಮುಖ ಭಾಗಗಳಲ್ಲಿ ನಿಯೋಜಿಸಲಾಗಿತ್ತು. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಲ್ಲಿದ ಪರಿಣಾಮ ಬೆರಳೆಣಿಕೆ ಪ್ರಯಾಣಿಕರೊಂದಿಗೆ ಸಂಚರಿಸಿದವು. ಆಟೋ ರಿಕ್ಷಾ, ಟ್ಯಾಕ್ಸಿ ಮತ್ತು ಕ್ಯಾಬ್‌ಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ನಿಂತಿದ್ದವಾದರೂ, ಪ್ರಯಾಣಿಕರು ಬರಲಿಲ್ಲ.

Follow Us:
Download App:
  • android
  • ios