Asianet Suvarna News Asianet Suvarna News

ಗಡಿ ವಿವಾದ: ಇಲ್ಲಾಂದ್ರೆ ಕರ್ನಾಟಕಕ್ಕೆ ಹೋಗ್ತೀವಿ, ಮಹಾರಾಷ್ಟ್ರದ ಗ್ರಾಮಸ್ಥರು..!

ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ಬೋಂಬಳಿ ಗ್ರಾಮಸ್ಥರಿಂದ ಆಗ್ರಹ: ಅಭಿವೃದ್ಧಿ ಮಾಡುವಲ್ಲಿ ಮಹಾರಾಷ್ಟ್ರ ಸಿಎಂ ಏಕನಾಥ ಸಿಂಧೆ ವಿಫಲ 

We Will Join Karnataka Says Maharashtra's Villagers grg
Author
First Published Dec 8, 2022, 11:30 PM IST

ಬೀದರ್‌(ಡಿ.08): ಅತ್ತ ಬೆಳಗಾವಿಗೆ ಬಂದು ಗಡಿ ವಿವಾದದ ಕಿಡಿ ಹೊತ್ತಿಸುವ ದುರಾಲೋಚನೆಯಲ್ಲಿರುವ ಮಹಾರಾಷ್ಟ್ರ ಸರ್ಕಾರದ ಪ್ರತಿನಿಧಿಗಳಿಗೆ ಜಿಲ್ಲೆಯ ಗಡಿಯಾಚೆಗಿನ ಮಹಾರಾಷ್ಟ್ರ ಗ್ರಾಮದ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದು, ಮೊದಲು ನಿಮ್ಮ ಗ್ರಾಮಗಳ ದುಸ್ಥಿತಿ ಸುಧಾರಿಸಿ ಇಲ್ಲಾಂದ್ರೆ ನಾವು ಕರ್ನಾಟಕಕ್ಕೆ ಹೋಗ್ತೇವೆ ಎಂದು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯ ದೇವಣಿ ತಾಲೂಕಿನ ಬೋಂಬಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗ್ರಾಮಸ್ಥರು ಇಂಥದ್ದೊಂದು ಕೂಗು ಎತ್ತಿದ್ದು, ಲಾತೂರ್‌ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಬೇಡಿಕೆ ಇಟ್ಟು ಅಲ್ಲಿನ ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಬೀದರ್‌ ಜಿಲ್ಲೆಯ ಗಡಿಯಿಂದ ಕೆಲ ಕಿಮೀ ದೂರದಲ್ಲಿರುವ ಈ ಗ್ರಾಮದ ಗ್ರಾಮಸ್ಥರು ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡುವ ಮೂಲಕ ಕರ್ನಾಟಕಕ್ಕೆ ಹೋಗಲು ಅನುಮತಿ ನೀಡಿ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

TICKET FIGHT: ಬೀದರ್‌ ಶಾಸಕರಿಗೆ ಹೊಸ ಸ್ಪರ್ಧಿಗಳ ಸವಾಲ್‌

ಸದ್ಯ ಅಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ ಮಾಡಿರುವ ಗ್ರಾಮಸ್ಥರು ಅಭಿವೃದ್ಧಿ ಮಾಡಲು ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ನಮಗೆ ಕರ್ನಾಟಕಕ್ಕೆ ಸೇರಲು ಅವಕಾಶ ಕೊಡಿ ಇಲ್ಲವಾದಲ್ಲಿ ತಮ್ಮ 6 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.

ರೈತರ ಹಾಗೂ ಗ್ರಾಮಗಳಲ್ಲಿ ಭುಗಿಲೆದ್ದಿರುವ ಕುಡಿಯುವ ನೀರಿನ ಸಮಸ್ಯೆ ಕಾಯಂ ಆಗಿ ಇತ್ಯರ್ಥಗೊಳಿಸಬೇಕು. ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆ, ಬಸ್‌ ದರ ಇಳಿಕೆ ಮಾಡಬೇಕು, ಕರ್ನಾಟಕದಲ್ಲಿ ರೈತರಿಗೆ ಸರ್ಕಾರ ನೀಡುವಂತೆ ಮಹಾರಾಷ್ಟ್ರದ ಸರ್ಕಾರವೂ ರು.50 ಸಾವಿರ ಧನ ಸಹಾಯ ನೀಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್‌ ವೈದ್ಯರು ಕಾಯಂ ಆಗಿ ನೇಮಕಗೊಳ್ಳಬೇಕು. ಕೃಷಿಗಾಗಿ 10ಎಚ್‌ಪಿ ವರೆಗೆ ಉಚಿತ ವಿದ್ಯುತ್‌ ಘೋಷಣೆ ಮಾಡಲಿ ಎಂದು ಗ್ರಾಮದ ಜ್ಞಾನೋಬ ಕಾರಬಾರಿ, ದೇವಿದಾಸ ದುಂಡಿಬಾ, ಸೋಮಶೇಖರ ದಯಾನಂದ, ದೇವಿದಾಸ ಗೋವಿಂದರಾವ್‌ ಮತ್ತಿತರರು ಮಹಾರಾಷ್ಟ್ರ ಸರ್ಕಾರಕ್ಕೆ ಆಗ್ರಹಿಸಿದ್ದು, ಸಾಮಾಜಿಕ ತಾಲತಾಣಗಲ್ಲಿ ಎಲ್ಲೆಡೆ ಹರಿದಾಡುತ್ತಿದೆ.

ಗಡಿ ವಿವಾದ ಸೃಷ್ಟಿಸಿದ ಮಹಾರಾಷ್ಟ್ರ ಸರ್ಕಾರಕ್ಕೆ ಗ್ರಾಮಸ್ಥರ ಈ ಬೇಡಿಕೆಗಳು ಮತ್ತು ಎಚ್ಚರಿಕೆ ಶಾಕ್‌ ನೀಡುವಂತಿದ್ದು, ಮಂತ್ರಿಗಳೆ ಬೆಳಗಾವಿ ಭೇಟಿ ಬದಲು ನಿಮಗೆ ಮತ ನೀಡಿರುವ ಜನತೆಯ ದುಸ್ಥಿತಿಯನ್ನು ನೋಡಿ ಅವುಗಳ ಪರಿಹಾರಕ್ಕೆ ಪ್ರಯತ್ನಿಸಿ ಎಂದು ಮಹಾರಾಷ್ಟ್ರದ ಗಡಿ ಗ್ರಾಮಗಳಲ್ಲಿ ಆಗ್ರಹಿಸಲಾಗುತ್ತಿದೆ.
 

Follow Us:
Download App:
  • android
  • ios