ಅಥಣಿ(ಸೆ.28): ನಮ್ಮ ತ್ಯಾಗದಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಭಿನ್ನಾಭಿಪ್ರಾಯಗಳು ಕಳೆದ ಒಂದು ವರ್ಷಗಳಿಂದ ನಡೆದಿತ್ತು. ಅದಕ್ಕೆ ಬೇಸತ್ತು ನಾವು ರಾಜೀನಾಮೆ ಸಲ್ಲಿಸಿದ್ದೇವೆ ಹೊರತು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅಲ್ಲ ಎಂದು ಮಾಜಿ ಸಚಿವ, ಅನರ್ಹ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. 

ತಾಲೂಕಿನ ದರೂರ ಗ್ರಾಮದಲ್ಲಿ ಶುಕ್ರವಾರ ಅಭಿಮಾನಿ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪ್ರಕರಣ ಇನ್ನೂ ಸುಪ್ರಿಂಕೋರ್ಟ್‌ದಲ್ಲಿ ನಡೆದಿದ್ದು ನ್ಯಾಯಾಲದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ. ಅಂತಿಮ ತೀರ್ಪು ಬಂದ ನಂತರವೇ ನಮ್ಮ ನಿಲುವು ಪ್ರಕಟಿಸುತ್ತೇವೆ ಎಂದರು. 

ಅನರ್ಹ 17 ಶಾಸಕರು ಯಾವುದೇ ಪಕ್ಷದ ಜೊತೆ ಗುತಿಸಿಕೊಂಡಿಲ್ಲ

ಅನರ್ಹಗೊಂಡ 17 ಶಾಸಕರು ಯಾವುದೇ ಪಕ್ಷದ ಜೊತೆ ಗುತಿಸಿಕೊಂಡಿಲ್ಲ. ಆಪರೇಷನ್ ಕಮಲಕ್ಕೆ ಒಳಗಾಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಮತಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ಮತ್ತು ಸಚಿವ ಸ್ಥಾನಮಾನ ನೀಡುವಲ್ಲಿ ಅನ್ಯಾಯವಾದಾಗ ನಾವು ಬಂಡಾಯ ಏಳಬೇಕಾಯಿತು. ಅಲ್ಲದೇ ಸ್ಪೀಕರ್ ರಮೇಶಕುಮಾರ ಅವರು ಸಿದ್ದರಾಮಯ್ಯ ನವರ ಏಜೆಂಟರ್‌ರಂತೆ ಕೆಲಸ ಮಾಡಿ ನನಗೆ ಅನ್ಯಾಯ ಮಾಡಿದ್ದಾರೆ ಎಂದು ಪುನರುಚ್ಚರಿಸಿದರು. 

ನಾನು ಯಾವುದೇ ತಪ್ಪು ಮಾಡಿಲ್ಲ

ನಾವು ಯಾವುದೇ ತಪ್ಪು ಮಾಡಿಲ್ಲ. ಆದರೂ ನಮ್ಮನ್ನು ಕಾಂಗ್ರೆಸ್ ಪಕ್ಷದಿಂದ ಅನರ್ಹಗೊಳಿಸಿದ್ದಾರೆ. ನಾವು ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾದ ಹಿನ್ನೆಲೆಯಲ್ಲಿ ಮತಕ್ಷೇತ್ರದ ಜನತೆ ಸಮಸ್ಯೆಗಳನ್ನು ಆಲಿಸಲು ಸಮಯಾವಕಾಶ ದೊರೆಯಲಿಲ್ಲ. ಅಥಣಿ, ಕಾಗವಾಡ ಮತ್ತು ಗೋಕಾಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಪ್ರವಾಹವಾಗಿ ಲಕ್ಷಾಂತರ ಜನರು ತೊಂದರೆಗೆ ಒಳಗಾಗಿದ್ದಾರೆ. ಅವರ ಕಷ್ಟ ನಮಗೂ ಅರ್ಥವಾಗಿದೆ. ಆದರೆ ನಾವು ಈಗ ಅನರ್ಹವಾಗಿರುವುದರಿಂದ ಮತ್ತು ಪ್ರಕರಣ ಸುಪ್ರೀಂ ಕೋರ್ಟ್‌ದಲ್ಲಿ ನಡೆದಿರುವುದರಿಂದ ಜನರ ಸಂಪರ್ಕ ಮಾಡಲು ಅಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಎದುರಾಗುವ ವಿಧಾನಸಭೆ ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಸನ್ನದ್ಧರಾಬೇಕು ಎಂದು ಅಭಿಮಾನಿಗಳಿಗೆ ಕರೆ ನೀಡಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರ ಪರವಾಗಿ ನಿಂತು ನಾನು ಪ್ರಚಾರ ಮಾಡಿದ ಅಭಿಮಾನ ಇಟ್ಟುಕೊಂಡಿರುವ ಮಹೇಶ ಕುಮಠಳ್ಳಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದರು. ಆದರೆ, ನನಗೆ ಸರ್ಕಾರದಲ್ಲಿ ಅನ್ಯಾಯವಾದಾಗ ನನ್ನ ಪರವಾಗಿ ನಿಂತು ಇನ್ನೀತರ ಶಾಸಕರ ಜೊತೆಗೆ ಅವರು ರಾಜೀನಾಮೆ ನೀಡಿದರು. ಅವರ ನಿಷ್ಠೆ, ಪ್ರಾಮಾಣಿಕತೆ ಮತ್ತು ಅಭಿವೃದ್ಧಿಯ ದೃಷ್ಟಿಕೋನ ಹೊಂದಿದ್ದಾರೆ. ಅವರ ಕನಸಿನಂತೆ ಅಥಣಿಯಲ್ಲಿ ನೀರಾವರಿ, ಸಂತ್ರಸ್ತರ ಗ್ರಾಮಗಳ ಸ್ಥಳಾಂತರ, ಸವಳು-ಜವಳು ಸಮಸ್ಯೆಯಾಗಿ ಶ್ರಮಿಸುತ್ತಿದ್ದಾರೆ. ಅವರು ಕೂಡಾ ಕ್ಷೇತ್ರದ ಜನರ ಸಂಪರ್ಕದಲ್ಲಿ ಇದ್ದಾರೆ. ಮುಂದಿನ ದಿನಗಳಲ್ಲಿ ಚುನಾವಣೆ ಎದುರಾದರೆ ಕ್ಷೇತ್ರದ ಜನರು ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಕೋರಿದರು. 

ಕುಟುಂಬದ ವಿಷಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ

ಗೋಕಾಕದ ಜಾರಕಿಹೊಳಿ ಸಹೋದರರು ಕುಟುಂಬದ ವಿಷಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಕುಟುಂಬದ ವಿಷಯ ಬಂದಾಗ ನಾವೆಲ್ಲ ಒಂದು, ರಾಜಕೀಯ ವಿಷಯ ಬಂದಾಗ ಬೇರೆ ಎಂದು ಹೇಳಿ ಹೆಚ್ಚಿನ ಪ್ರತಿಕ್ರಿಯೆ ನೀಡಲಿಲ್ಲ. ಪ್ರಸ್ತಾವಿಕವಾಗಿ ಮಾತನಾಡಿದ ಅನರ್ಹ ಶಾಸಕ ಮಹೇಶ ಕುಮಠಳ್ಳಿ, ಅಥಣಿ ತಾಲೂಕಿನಲ್ಲಿ ನೆರೆ ಹಾವಳಿಯಾದಾಗ ನಾವು ನ್ಯಾಯಾಲಯದ ಕೆಲಸದಲ್ಲಿ ಇದ್ದ ಕಾರಣ ಜನಸಂಪರ್ಕ ಸಾಧ್ಯವಾಗಲಿಲ್ಲ. ಈ ವಿಷಯದಲ್ಲಿ ನಮ್ಮಿಂದಲೂ ತಪ್ಪಾಗಿದೆ. ಆದರೂ ಕ್ಷೇತ್ರದ ಜನರ ಸಂಪರ್ಕದಲ್ಲಿದ್ದೇನೆ. ನಮ್ಮ ರಾಜಕೀಯ ನಾಯಕರಾದ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಇನ್ನೀತರ ಶಾಸಕರು ರಾಜೀನಾಮೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಬರುವ ಚುನಾವಣೆಯನ್ನು ಎದುರಿಸಲು ರಮೇಶ ಜಾರಕಿಹೊಳಿ ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ಬದ್ಧರಾಗಿ ಎಲ್ಲ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. 

ಸುಪ್ರೀಂ ಆದೇಶದ ನಂತರ ನಮ್ಮ ರಾಜಕೀಯ ನಡೆ

ಸುಪ್ರಿಂಕೋರ್ಟ್ ಆದೇಶ ಏನು ಬರಬಹುದು ಎಂದು ಕಾರ್ಯಕರ್ತರ ಕುತೂಹಲದಿಂದ ಇದ್ದಾರೆ. ಈ ಹಿನ್ನೆಲೆಯಲ್ಲಿ ಅದನ್ನು ಅವರಿಗೆ ಸಭೆಯಲ್ಲಿ ತಿಳಿಸಿ ಹೇಳಿದ್ದೇವೆ. ಸುಪ್ರೀಂ ಆದೇಶದ ನಂತರ ನಮ್ಮ ರಾಜಕೀಯ ನಡೆ ನಿರ್ಧಾರ ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. 

ಕುಮಟಳ್ಳಿ ಕುರಿತು ನಿಂದನೆ ಮಾಡಿದ ಸಂದರ್ಭದಲ್ಲಿ ಸವದಿ ಡಿಸಿಎಂ ಇರಲಿಲ್ಲ. ಒಂದು ತಿಂಗಳ ಹಿಂದೆ ಮಾತನಾಡಿದ್ದರೆ ಇದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಇಲ್ಲಿಯೇ ಇದನ್ನು ಬಿಟ್ಟರೆ ಎಲ್ಲರಿಗೂ ಒಳ್ಳೆಯದು. ಡಿಸಿಎಂ ಇದ್ದ ಈ ಸಂದರ್ಭದಲ್ಲಿ ಮಾತನಾಡಿದ್ದರೆ ಅದು ತಪ್ಪು. ಸ್ಪೀಕರ್ ರಮೇಶಕುಮಾರ ನೂರಕ್ಕೆ ನೂರು ಕಾನೂನು ಬಾಹಿರ ಕೆಲಸ ಮಾಡಿದ್ದಾರೆ ಎಂದು ಈಗಾಗಲೇ ಸಾಬೀತಾಗಿದೆ ಎಂದರು. 

ಕಾನೂನು ಪ್ರಕಾರ ಕಾಗವಾಡ ಕ್ಷೇತ್ರಕ್ಕೆ ಚುನಾವಣೆ ಬರೋದಿಲ್ಲ. ಏಕೆಂದರೆ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ರಾಜೀನಾಮೆ ನೀಡಿಲ್ಲ ಎಂದ ಅವರು, ನಾವು ಇನ್ನೂ ಯಾವುದೇ ಪಕ್ಷಕ್ಕೆ ಹೋಗಿಲ್ಲ. ನಮ್ಮ ಪರವಾಗಿ ತೀರ್ಪು ಬರುವವರೆಗೂ ರಾಜಕೀಯ ನಿರ್ಧಾರ ಕೈಗೊಳ್ಳಲ್ಲ. ಅನರ್ಹ ಎನ್ನುವ ಹಣೆಪಟ್ಟಿ ಕಳಚಿದ ನಂತರ ಸಚಿವ ಸ್ಥಾನ ಪಡೆಯೋದು ಸೇರಿದಂತೆ ಇತರೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.