ಬೆಂಗಳೂರು [ಮಾ.07]:  ಕಾನೂನಿನಲ್ಲಿ ಮಾನನಷ್ಟಹಾಗೂ 124 (ಎ) ದೇಶದ್ರೋಹ ಎಂಬ ಎರಡು ಸೆಕ್ಷನ್‌ಗಳಿರುವುದರಿಂದ ಸಂಪೂರ್ಣವಾಗಿ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ನಮಗಿನ್ನೂ ಸಿಕ್ಕಿಲ್ಲ ಎಂದು ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

ನಯನ ರಂಗಮಂದಿರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ’ ಉದ್ಘಾಟಿಸಿದ ಅವರು, ಸಂವಿಧಾನದಲ್ಲಿರುವ ಹಕ್ಕುಗಳನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಒಂದೊಂದು ಹಕ್ಕಿಗೂ ಒಂದೊಂದು ನಿಬಂಧನೆಗಳಿವೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧ ಮಾನನಷ್ಟಹಾಗೂ 124(ಎ)ದೇಶದ್ರೋಹದ ವಿರೋಧಿ ಕಾನೂನುಗಳಾಗಿವೆ. ಇದರಿಂದ ನಮಗಿಷ್ಟಬಂದಂತೆ ಇನ್ನೊಬ್ಬರ ಬಗ್ಗೆ ಮಾತನಾಡಲು, ನಿಂದಿಸುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ನಿಂದಿಸಿದರೆ ಕಾನೂನು ಪ್ರಕಾರ ಪ್ರಕರಣ ದಾಖಲಿಸುವುದಕ್ಕೆ ಅವಕಾಶಗಳಿವೆ. ಸೆಕ್ಷನ್‌ಗಳನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಬಳಸುತ್ತಿದ್ದರು. ಅದನ್ನು ನಾವು ಇಂದಿಗೂ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ಸ್ವಾತಂತ್ರ್ಯ ಬಂದು 55 ವರ್ಷದ ನಂತರ ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆ 2005ರ ನಂತರ ಅಂತಹ ಮತ್ತೊಂದು ಉತ್ತಮವಾದ ಕಾಯ್ದೆ ಜಾರಿಯಾಗಿಲ್ಲ. ಆದರೆ, ಅದನ್ನು ನಾವು ಜವಾಬ್ದಾರಿಯಿಂದ ಬಳಕೆ ಮಾಡಿಕೊಳ್ಳಬೇಕಾಗಿದೆ. ಈ ಕಾಯ್ದೆಯ ಸದ್ಬಳಕೆಯಾದರೆ ಸಮಾಜಕ್ಕೆ ಅನುಕೂಲವಾಗಲಿದೆ ಎಂದರು.

ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಡಾ. ಶಂಕರ್‌ ಎಂ. ಬಿದರಿ ಮಾತನಾಡಿ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಹಿತಿ ಹಕ್ಕು ಕಾಯ್ದೆ ಮತ್ತಷ್ಟುಬಲ ತುಂಬಿದೆ. ಸ್ವಯಂ ನೀತಿ ಸಂಹಿತೆ ಅಳವಡಿಸಿಕೊಂಡರೆ ಸಮಾಜ ಮತ್ತು ತಮಗೆ ಇಬ್ಬರಿಗೂ ಒಳ್ಳೆಯದಾಗಲಿದೆ. ಅಕ್ಕಿಯಲ್ಲಿರುವ ಕಲ್ಲಿನಂತೆ ಎಲ್ಲ ಕಾಲದಲ್ಲಿಯೂ ಭ್ರಷ್ಟಾಚಾರವಿದೆ. ಆದರೆ, ಇದೀಗ ಮಿತಿಮೀರಿ ಹೋಗಿದೆ. ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ ನೀರಾವರಿ ಯೋಜನೆಗಳನ್ನು ನಿರಂತರ ಆದಾಯದ ಮೂಲಗಳಾಗಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.

'ಜಿಲ್ಲೆಗೊಬ್ಬರು ‘ಮುಖ್ಯಮಂತ್ರಿ’ ಕೂಗೆದ್ದೀತು!'..

ಎನ್‌ಜಿಟಿಯ ರಾಜ್ಯಮಟ್ಟದ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ.ಆಡಿ ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆ ದುರುಪಯೋಗವಾಗದಂತೆ ಎಚ್ಚರಿಕೆಯಿಂದ ಬಳಕೆ ಮಾಡಿಕೊಳ್ಳಬೇಕು. ಪಾರದರ್ಶಕ ಆಡಳಿತಕ್ಕೆ ಮಾಹಿತಿ ಹಕ್ಕು ಕಾಯ್ದೆ ಅವಶ್ಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಟ್ಟಹಳ್ಳಿ ಮಠದ ಶ್ರೀ ಚಂದ್ರಶೇಖರ್‌ ಶಿವಾಚಾರ್ಯ ಸ್ವಾಮೀಜಿ, ವೇದಿಕೆ ಅಧ್ಯಕ್ಷ ಎಚ್‌.ಜಿ.ರಮೇಶ್‌ ಕುಣಿಗಲ್‌, ವಿಶ್ವಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ಧಲಿಂಗೇಗೌಡ ಸೇರಿದಂತೆ ಮೊದಲಾದವರು ಇದ್ದರು.