ಮೂರು ವರ್ಷ ಅವಿತು ಕುಳಿತಿದ್ದ ಗಂಗೆ ಏಕಾಏಕಿ ಹೊರಚಿಮ್ಮಿ ಅಚ್ಚರಿ..!
ಹಾಳಾದ ಕೊಳವೆ ಬಾವಿಯಿಂದ ತನ್ನಿಂದ ತಾನೆ 30 ಅಡಿ ಮೇಲಕ್ಕೆ ಚಿಮ್ಮಿದ ಗಂಗೆ| ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಭೂಮಿಯೊಳಗೊಂದು ವಿಸ್ಮಯ| ಅತಿವೃಷ್ಟಿಯೇ ಬೋರ್‌ವೆಲ್‌ನಿಂದ ನೀರು ಹೀಗೆ ಚಿಮ್ಮಲು ಕಾರಣ?| ಜೀವಮಾನದಲ್ಲೇ ನೋಡದಂತಹ ಘಟನೆ|
ಕಲಬುರಗಿ(ಡಿ.10): ಮೂರು ವರ್ಷಗಳ ಹಿಂದೆ ಕೊರೆದಿದ್ದ ಕೊಳವೆ ಬಾವಿಯಿಂದ ಏಕಾಏಕಿ 30 ಅಡಿಗೂ ಹೆಚ್ಚು ಎತ್ತರಕ್ಕೆ ನೀರು ತನ್ನಿಂದ ತಾನೇ ಒಂದೇ ಸವನೆ ಅರ್ಧ ಗಂಟೆ ಕಾಲ ರಭಸದಿಂದ ಚಿಮ್ಮಿದ ಘಟನೆ ಕಲಬುರಗಿ ತಾಲೂಕಿನ ಕಡಣಿ (ಕಣ್ಣಿ) ಗ್ರಾಮದಲ್ಲಿ ನಡೆದಿದೆ.
ಈ ಗ್ರಾಮದಲ್ಲಿನ ಕುಡಿವ ನೀರಿನ ಬವಣೆ ನೀಗಿಸಲು ಗ್ರಾಪಂ 3 ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಸಿತ್ತು. ಆಗ ಬಾವಿಗೆ ನೀರೇ ಬಂದಿರಲಿಲ್ಲ. ಇದರಿಂದ ಬೇಸತ್ತ ಪಂಚಾಯ್ತಿಯವರು ಅದನ್ನು ಹಾಗೇ ಬಿಟ್ಟಿದ್ದರು. ಈ ಬಾರಿ ಅತೀವೃಷ್ಟಿಯಾಗಿದ್ದರಿಂದ ಪಂಚಾಯ್ತಿಯವರು ಕೊಳವೆ ಬಾವಿಗೆ ನೀರೇನಾದರೂ ಬಂದಿದೆಯಾ ಎಂದು ನೋಡಲು ಮುಂದಾಗುತ್ತಿದ್ದಂತೆಯೇ ಕೊಳವೆಯಿಂದ ಅದೆಲ್ಲಿ ಗಂಗೆ ಅವಿತು ಕುಳಿತಿದ್ದಳೋ ಏನೋ ಏಕಾಏಕಿ ರಭಸದಿಂದ ಮೇಲಕ್ಕೆ ಚಿಮ್ಮಿದ್ದಾಳೆ.
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಮಹಿಳಾ ಡಿವೈಎಸ್ಪಿ : 4 ವರ್ಷ ಜೈಲು
ಎಲ್ಲರೂ ನೋಡುತ್ತಿದ್ದಂತೆಯೇ 30 ಅಡಿಗೂ ಹೆಚ್ಚಿನ ಎತ್ತರದಲ್ಲಿ ನೀರು ಕೊಳವೆಯಿಂದ ಚಿಮ್ಮಿ ಎಲ್ಲರನ್ನು ಅವಾಕ್ಕಾಗಿಸಿದೆ. 30 ನಿಮಿಷ ಕಾಲ ನೀರು ಹೀಗೆಯೇ ಚಿಮ್ಮಿದಾಗ ಊರಿಗೆ ಊರೇ ಅಲ್ಲಿ ಸೇರಿ ಭೂಮಿಯೊಳಗಿನ ವಿಸ್ಮಯ ನೋಡಿ ಬೆರಗಾಗಿತ್ತು. ನೀರಿನ ಬರ ಬಿದ್ದಾಗ ಕೊರೆಸಿದ ಬೋರ್‌ವೆಲ್‌ಗೆ ನೀರೇ ಇಲಿಲ್ಲ. ಈಗ ನೋಡಿದರೆ ನೀರು ತಾನಾಗಿಯೇ ಚಿಮ್ಮಿ ಅಚ್ಚರಿಗೆ ಕಾರಣವಾಗಿದೆ ಎಂದು ಊರವರು ಅಚ್ಚರಿ ಹೊರಹಾಕಿದ್ದಾರೆ.
ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ನೀರು ತನ್ನಿಂದ ತಾನೆ 30 ನಿಮಿಷ ಚಿಮ್ಮಿದೆ. ಪುನಹ ಇಂತಹ ವಿದ್ಯಮಾನ ಅಲ್ಲಿ ಕಂಡಿಲ್ಲ. ಕೊಳವೆ ಬಾವಿಯ ಪಕ್ಕದಲ್ಲೇ ಇದ್ದಂತಹ ವಿದ್ಯುತ್ ಕಂಬದ ಎತ್ತರವನ್ನೂ ಮೀರಿ ನೀರು ತಾನಾಗಿಯೇ ಚಿಮ್ಮಿತ್ತು. ಇದು ನಾವು ಜೀವಮಾನದಲ್ಲೇ ನೋಡದಂತಹ ಘಟನೆಯಾಗಿದೆ ಎಂದು ಗ್ರಾಮಸ್ಥರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಅತಿವೃಷ್ಟಿಯೇ ಬೋರ್‌ವೆಲ್‌ನಿಂದ ನೀರು ಹೀಗೆ ಚಿಮ್ಮಲು ಕಾರಣವಾಗಿರಬಹುದು ಎಂದು ಊರಿನ ಹಿರಿಯರು ಹೇಳುತ್ತಿದ್ದಾರೆ. ಈ ಘಟನೆಯ ಬಗ್ಗೆ ಇನ್ನೂ ಯಾವುದೇ ಶಾಸ್ತ್ರೀಯ ಅಧ್ಯಯನ ನಡೆದಿಲ್ಲ. ಈ ಜೀವಜಲದ ವಿಸ್ಮಯವನ್ನು ಕಲಬುರಗಿಯಲ್ಲಿರುವ ಭೂ ವಿಜ್ಞಾನಿಗಳ ಗಮನಕ್ಕೆ ತರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.