Asianet Suvarna News Asianet Suvarna News

ಇನ್ನೊಂದು ತಿಂಗಳಷ್ಟೇ ಬೆಂಗಳೂರಿಗೆ ಕಾವೇರಿ ನೀರು

ಬೆಂಗಳೂರಿಗರೇ ಎಚ್ಚರ, ಇನ್ನೊಂದು ತಿಂಗಳಷ್ಟೇ ನಿಮಗೆ ಕಾವೇರಿ ನೀರು ಸಿಗುವುದು. ಕಾರಣ ಏನು..?

Water Scarcity In KRS Bengaluru Will Face Water Crisis
Author
Bengaluru, First Published Jul 7, 2019, 8:23 AM IST
  • Facebook
  • Twitter
  • Whatsapp

ಬೆಂಗಳೂರು [ಜು.07] :  ರಾಜಧಾನಿಗೆ ನೀರು ಪೂರೈಸುವ ಕೆಆರ್‌ಎಸ್‌ನಲ್ಲಿ ಪ್ರಸ್ತುತ ಇರುವ ನೀರಿನ ಸಂಗ್ರಹದಿಂದ ಒಂದು ತಿಂಗಳಿಗೆ ಮಾತ್ರ ಬೆಂಗಳೂರಿಗೆ ನೀಡಲು ಸಾಧ್ಯ, ಒಂದು ವೇಳೆ ಮಳೆ ಬಾರದಿದ್ದರೆ ಬೆಂಗಳೂರಿಗೆ ನೀರು ಸಿಗುವುದು ಕಷ್ಟವಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಡಾ.ಬಾಬು ಜಗಜೀವನರಾಮ್‌ ಅವರ 33ನೇ ಪುಣ್ಯ ಸ್ಮರಣೆ ದಿನ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿನ ಜಗಜೀವನ್‌ರಾಮ್‌ ಪ್ರತಿಮೆಗೆ ಶನಿವಾರ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಕೆಆರ್‌ಎಸ್‌ನಲ್ಲಿ ಕೇವಲ 80 ಅಡಿ ನೀರಿದ್ದು, ಒಂದು ತಿಂಗಳ ಅವಧಿಗೆ ಮಾತ್ರ ಬೆಂಗಳೂರಿಗೆ ನೀರು ಹರಿಸಲು ಸಾಧ್ಯ. ಮಳೆ ಬಾರದೆ, ಒಳಹರಿವು ಹೆಚ್ಚಾಗದೆ ಬೆಂಗಳೂರಿಗೆ ನೀರು ಸಿಗುವುದು ಕಷ್ಟವಾಗಲಿದೆ ಎಂದರು.

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತರಲು ಮಾರ್ಗ ಪರಿಶೀಲನೆ ನಡೆಸಲಾಗುತ್ತಿದ್ದು, ಶಿವಮೊಗ್ಗ, ಚಿತ್ರದುರ್ಗ, ವಾಣಿ ವಿಲಾಸ ಸಾಗರ ಮೂಲಕ ಬೆಂಗಳೂರಿಗೆ ನೀರು ತರಲು ಮಾರ್ಗ ಗುರುತಿಸಲಾಗಿದೆ. ನೀರು ತರುವ ಸಂಬಂಧ ಶೀಘ್ರದಲ್ಲಿಯೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗುವುದು. ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಸರ್ಕಾರ ಗಮನ ಹರಿಸಿದೆ. ಜನರ ಆಶಯದಂತೆ ಸರ್ಕಾರ ನಡೆದುಕೊಳ್ಳಲಿದೆ ಎಂದು ಹೇಳಿದರು.

ಡಾ.ಬಾಬು ಜಗನ್‌ಜೀವನ್‌ ರಾಮ್‌ ಅವರ ಹಸಿರು ಕ್ರಾಂತಿ ಮೂಲಕ ನಮ್ಮ ದೇಶ ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ. ಜವಾಹರಲಾಲ್‌ ನೆಹರು ಅವರ ಸಂಪುಟದಲ್ಲಿ ಅತಿ ಕಿರಿಯ ವಯಸ್ಸಿನ ಸಚಿವರಾಗಿ ಕೆಲಸ ಮಾಡಿದ್ದರು. ಕೃಷಿ ಮತ್ತು ರಕ್ಷಣಾ ಸಚಿವರಾಗಿದ್ದ ವೇಳೆ ಸಾಕಷ್ಟುಕೆಲಸ ಮಾಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಅತಿದೊಡ್ಡ ಬದಲಾವಣೆ ತಂದು, ಹಸಿರು ಕ್ರಾಂತಿಗೆ ಕಾರಣರಾದವರು. ನಮ್ಮ ದೇಶ ಆಹಾರ ಧಾನ್ಯದಲ್ಲಿ ಸ್ವಾವಲಂಬಿಯಾಗಿದೆ ಎಂದರೆ ಅದಕ್ಕೆ ಜಗನ್‌ ಜೀವನ್‌ರಾಮ್‌ ಹಾಕಿಕೊಟ್ಟನೀತಿಗಳೇ ಕಾರಣ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios