ಯಾದಗಿರಿ: ವರ್ಗಾವಣೆ ತಡೆಗೆ ಶಾಸಕರಿಗೆ ಹಣ ಕೊಡಬೇಕು ಎಂದಿದ್ದರೇ ಪಿಎಸ್‌ಐ ಪರಶುರಾಮ್!
ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ಹೃದಯಾಘತದಿಂದಾದ ಸಾವು ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗಗೊಂಡಿತ್ತು. ರಾಷ್ಟ್ರವ್ಯಾಪಿ ಈ ಪ್ರಕರಣ ಸದ್ದು ಮಾಡಿತ್ತು. ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸಂಸದೆ ಶೋಭಾ ಕರದ್ಲಾಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವರಿಗೆ ಪತ್ರ ಬರೆದು ಕೋರಿದ್ದರು. ರಾಜ್ಯ ಸರ್ಕಾರಕ್ಕೆ ಈ ಪ್ರಕರಣ ಭಾರಿ ಮಜುಗರಕ್ಕೆ ಸಿಲುಕಿಸಿತ್ತು.
ಆನಂದ್ ಎಂ. ಸೌದಿ
ಯಾದಗಿರಿ(ಡಿ.10): ತಮ್ಮ ಅವಧಿಪೂರ್ವ ವರ್ಗಾವಣೆ ತಡೆಯಬೇಕೆಂದರೆ ಲಕ್ಷಾಂತರ ರು. ಹಣ ನೀಡಬೇಕಿದ್ದು, ಒಂದಿಷ್ಟು ಹಣ ಸಹಾಯ ಮಾಡುವಂತೆ ತಮ್ಮ ಆಪ್ತ ಸ್ನೇಹಿತನ ಬಳಿ ಪಿಎಸ್ಸೈ ಆಗಿದ್ದ ದಿ. ಪರಶುರಾಮ್ ನೆರವು ಕೇಳಿದ್ದರೆ?
ತೀವ್ರ ಚರ್ಚೆಗೆ ಗ್ರಾಸವಾಗಿದ್ದ, ಯಾದಗಿರಿ ನಗರ ಠಾಣೆಯ ಪಿಎಸ್ಸೈ ಆಗಿದ್ದ ಪರಶುರಾಮ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡಕ್ಕೆ ಮೊಬೈಲ್ ಸಂಭಾಷಣೆಯ ಧ್ವನಿಮುದ್ರಿಕೆ ದೊರೆತಿದ್ದು, ತನಿಖೆಯ ವೇಳೆ ಇದು ಮಹತ್ವದ ಪಾತ್ರ ವಹಿಸಬಹುದು ಎನ್ನಲಾಗುತ್ತಿದೆ.
‘ಘಟನೆ ನಂತರ, ಪರಶುರಾಮ್ ಮೊಬೈಲ್‌ಗಳನ್ನು ಜಪ್ತಿ ಮಾಡಿಕೊಂಡಿದ್ದ ಸಿಐಡಿ ಅಧಿಕಾರಿಗಳ ತಂಡಕ್ಕೆ ತನಿಖೆಯ ವೇಳೆ ಸ್ನೇಹಿತನ ಜೊತೆ ಮಾತನಾಡಿರುವ ಧ್ವನಿಮುದ್ರಿಕೆ (ಆಡಿಯೋ) ಸಿಕ್ಕಿದೆ, ನಮಗೆಲ್ಲ ಅದನ್ನು ತೋರಿಸಿ, ಕೇಳಿಸಿದ್ದಾರೆ.
ಕರ್ನಾಟಕಕ್ಕೆ ಮೋದಿ ಸರ್ಕಾರ ಗುಡ್ ನ್ಯೂಸ್, ಮೂರು ಹೊಸ ಕೇಂದ್ರೀಯ ವಿದ್ಯಾಲಯಗಳಿಗೆ ಒಪ್ಪಿಗೆ
ನನ್ನ ಟ್ರಾನ್ಸಫರ್ ಆಗಿದೆ, ಪೋಸ್ಟಿಂಗ್ ಉಳಿಸಿಕೊಳ್ಳಬೇಕು ಅಂದರೆ ಎಂಎಲ್‌ಎ ಅವರಿಗೆ ಹಣ ನೀಡಲೇಬೇಕು. ಹೀಗಾಗಿ, ದೊಡ್ಡ ಮೊತ್ತದ ಹಣ ಬೇಕಾಗಿದೆ, ನಿನಗೆಷ್ಟು ಸಾಧ್ಯವೋ ಅಷ್ಟನ್ನು ಕೊಡು ಎಂದು ಶಾಸಕರ ಹೆಸರು ಸಮೇತ ಹೇಳಿರುವುದು ಆಡಿಯೋದಲ್ಲಿದೆ’ ಎಂದು ಅವರ ಸಹೋದರ ಹನುಮಂತ ತಮ್ಮನ್ನು ಸಂಪರ್ಕಿಸಿದ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
‘ತಮ್ಮ ಅವಧಿಪೂರ್ವ ವರ್ಗಾವಣೆ ತಡೆಯಲು ದೊಡ್ಡ ಮೊತ್ತದ ಹಣದ ಜಮೆ ನೀಡಬೇಕಿದ್ದರಿಂದ ಪರಶುರಾಮ್ ಅವರ ಬಂದು-ಬಳಗ ಹಾಗೂ ಸ್ನೇಹಿತರಲ್ಲಿ ಇಷ್ಟಿಷ್ಟು ಹಣ ಜಮೆ ಮಾಡುತ್ತಿದ್ದರು. ಮತ್ತೋರ್ವ ಸ್ನೇಹಿತನೊಬ್ಬನಿಗೆ ಇದೇ ತೆರನಾಗಿ ಹಣ ಕೋರಿ ‘ಮೆಸೇಜ್’ ಮಾಡಿರುವುದನ್ನೂ ಸಿಐಡಿಯವರು ನಮಗೆ ತೋರಿಸಿದ್ದಾರೆ..‘ ಎಂದು ಹೇಳಿದ ಹನುಮಂತ, ಸಿಐಡಿ ತನಿಖೆ ಏನಾಯ್ತು? ಎಲ್ಲಿಗೆ ಬಂತು ಅನ್ನೋದರ ಮಾಹಿತಿ ಬಹಿರಂಗವಾಗಗೇಕಿದೆ, ಜನರಿಗೆ ಸತ್ಯ ಗೊತ್ತಾಗಬೇಕಿದೆ ಎಂದರು.
ಇನ್ನೂ ದೊರೆಯದ ನಯೆಪೈಸೆ ನೆರವು: ಕುಟುಂಬಸ್ಥರ ಬೇಸರ
ಯಾದಗಿರಿ: ಇನ್ನು, ಮೃತ ಪಿಎಸ್ಸೈ ಪರಶುರಾಮ್ ಕುಟುಂಬಕ್ಕೆ ಸರ್ಕಾರದಿಂದ 50 ಲಕ್ಷ ರು.ಗಳ ಹಣ ಹಾಗೂ ಪತ್ನಿಗೆ ನೌಕರಿ ಘೋಷಿಸಿದ್ದ ಸರ್ಕಾರ ಈಗ ಅದನ್ನು ಮರೆತಂತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಘಟನೆ ನಡೆದು ನಾಲ್ಕು ತಿಂಗಳುಗಳಾದರೂ ಈವರೆಗೆ ನಯೆಪೈಸೆ ದೊರೆತಿಲ್ಲ ಎಂದಿರುವ ಅವರ ಕುಟುಂಬಸ್ಥರು, ಸಂಘ ಸಂಸ್ಥೆಗಳು, ನೌಕರರ ಸಂಘಗಳು ನೀಡಿದ ಸಹಾಯಧನ ಬಿಟ್ಟರೆ ಸರ್ಕಾರದಿಂದ ನಯೆಪೈಸೆಯೂ ಸಿಕ್ಕಿಲ್ಲ. ಪರಶುರಾಮ ಕುಟುಂಬಕ್ಕೆ ಕೋಟ್ಯಂತರ ರುಪಾಯಿಗಳ ಹಣ ಹಾಗೂ ಪತ್ನಿಗೆ ನೌಕರಿ ನೀಡಲಾಗಿದೆ ಎಂಬ ಪುಕಾರುಗಳನ್ನು ಹಬ್ಬಿಸಲಾಗುತ್ತಿದೆ ಎಂದು ನೋವು ತೋಡಿಕೊಂಡರು.
‘ಪರಿಹಾರಕ್ಕೆ ಕೋರಿ ಗೃಹ ಸಚಿವರನ್ನು ಮೂರು ಬಾರಿ ಭೇಟಿ ಮಾಡಿದ್ದೇನೆ, ಸಿಎಂ ಜೊತೆ ಮಾತನಾಡಿ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಸಚಿವರೊಬ್ಬರನ್ನು ಭೇಟಿಯಾಗಿ ಕೇಳಿದರೆ, ಹಾದಿಬೀದಿಯಲ್ಲಿ ನಿಂತು ಪರಿಹಾರ ಕೇಳಿದರೆ ಹೇಗೆ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ’ ಎಂದು ಹನುಮಂತ ಆಘಾತ ವ್ಯಕ್ತಪಡಿಸಿದರು.
ಸಿಎಂ ಕುರ್ಚಿಗಾಗಿ ಸಿದ್ದು-ಡಿಕೆಶಿ ಬಡಿದಾಟ: ವಿಜಯೇಂದ್ರ
ಏನಿದು ಪಿಎಸ್ಸೈ ಪರಶುರಾಮ್ ಘಟನೆ?
ಯಾದಗಿರಿ ನಗರ ಠಾಣೆಯ, ಕಾನೂನು ಸುವ್ಯವಸ್ಥೆಯ ಪಿಎಸ್ಸೈ ಆಗಿದ್ದ ಪರಶುರಾಮ್, 2024ರ ಆ.2ರಂದು ಮೃತಪಟ್ಟಿದ್ದರು. ಇವರ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಕುಟುಂಬಸ್ಥರು ಹಾಗೂ ಸಂಘಟನೆಗಳು ತನಿಖೆಗೆ ಆಗ್ರಹಿಸಿದ್ದರು. ವರ್ಗಾವಣೆ ತಡೆಗಯಲು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹಾಗೂ ಪುತ್ರ ಸನ್ನೀಗೌಡ ಲಕ್ಷಾಂತರ ರುಪಾಯಿಗಳ ಬೇಡಿಕೆ ಇಟ್ಟಿದ್ದರು ಎಂದು ಗಂಭೀರವಾಗಿ ಆರೋಪಿಸಿದ್ದ ಕುಟುಂಬಸ್ಥರು ಮತ್ತು ಸಂಘಟನೆಗಳು, ಶಾಸಕ ಮತ್ತು ಪುತ್ರನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಆಗ್ರಹಿಸಿ. ಆ.3ರಂದು ಯಾದಗಿರಿಯಲ್ಲಿ ಪ್ರತಿಭಟನೆ ಭಾರಿ ನಡೆಸಿದ್ದರು. ಇದಕ್ಕೆ ಮಣಿದ ಸರ್ಕಾರ ಶಾಸಕ ಹಾಗೂ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆಯನ್ನು ಸಿಐಡಿಗೆ ವಹಿಸಿತ್ತು.
ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ಹೃದಯಾಘತದಿಂದಾದ ಸಾವು ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗಗೊಂಡಿತ್ತು. ರಾಷ್ಟ್ರವ್ಯಾಪಿ ಈ ಪ್ರಕರಣ ಸದ್ದು ಮಾಡಿತ್ತು. ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸಂಸದೆ ಶೋಭಾ ಕರದ್ಲಾಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವರಿಗೆ ಪತ್ರ ಬರೆದು ಕೋರಿದ್ದರು. ರಾಜ್ಯ ಸರ್ಕಾರಕ್ಕೆ ಈ ಪ್ರಕರಣ ಭಾರಿ ಮಜುಗರಕ್ಕೆ ಸಿಲುಕಿಸಿತ್ತು.