ರಾಜ್ಯ ಸರ್ಕಾರ ಪ್ರಸ್ತುತ 56,437 ಹುದ್ದೆಗಳ ಭರ್ತಿಯಲ್ಲಿ ಶೇ.3 ರಷ್ಟು ಮಾತ್ರ ಮೀಸಲಾತಿ ಅನ್ವಯವಾಗುವಂತೆ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ವಿ.ಎಸ್.ಉಗ್ರಪ್ಪ ಹೇಳಿದರು.

ವಿಜಯಪುರ (ಏ.21): ರಾಜ್ಯ ಸರ್ಕಾರ ಪ್ರಸ್ತುತ 56,437 ಹುದ್ದೆಗಳ ಭರ್ತಿಯಲ್ಲಿ ಶೇ.3 ರಷ್ಟು ಮಾತ್ರ ಮೀಸಲಾತಿ ಅನ್ವಯವಾಗುವಂತೆ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಇದರಿಂದ ಪರಿಶಿಷ್ಟ ಪಂಗಡದ ಉದ್ಯೋಗ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಾಲ್ಮಿಕಿ ನಾಯಕ ವಿ.ಎಸ್.ಉಗ್ರಪ್ಪ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡದ ಹೆಸರಿನಲ್ಲಿ ಸುಳ್ಳು ಜಾತಿ (ನಕಲಿ) ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರಿಶಿಷ್ಟ ಜಾತಿಗಳಿಗೆ ಶೇ.15 ರಿಂದ ಶೇ.17 ಪರಿಶಿಷ್ಟ ಪಂಗಡಗಳಿಗೆ ಶೇ.3 ರಿಂದ ಶೇ.7 ಹೆಚ್ಚಿಸಿ ಕಾಯ್ದೆಯನ್ನು ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸಲು ಸಂವಿಧಾನದ 9ನೇ ಪರಿಚ್ಚೇದಕ್ಕೆ ಸೇರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರಮ ವಹಿಸಬೇಕು. ಕರ್ನಾಟಕದ ಸಂಸದರು ಕೇಂದ್ರ ಸರ್ಕಾರಕ್ಕೆ ಮೀಸಲಾತಿ ಬಗ್ಗೆ ಒತ್ತಡ ತರಬೇಕು ಎಂದರು.ಸರ್ಕಾರ ಕೂಡಲೇ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನಿಗದಿಪಡಿಸಬೇಕು. ಶೇ.56ರಷ್ಟು ಮೀಸಲಾತಿಯನ್ನು ಜಾರಿಗೊಳಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಮಾನ ಮನಸ್ಕರ ವೇದಿಕೆ ಬೆಂಗಳೂರು ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರದ ಚಿಂತನ ಮಂಥನ ಕಾರ್ಯಕ್ರಮವನ್ನು ಸಮಾಜದ ಬಂಧುಗಳ ಜತೆಗೆ ನಡೆಸಲಾಗುವುದು. ಶೇ.56 ಎಸ್ಸಿ, ಎಸ್ಟಿ ಒಬಿಸಿ ಮೀಸಲಾತಿಗೆ ನಡೆಯುತ್ತಿರುವ ಸಂಘರ್ಷ, ಅದಕ್ಕೆ ಆಗಿರುವ ಹಿನ್ನಡೆಗೆ ನಾನು ಆ ಜನಾಂಗದ ಪ್ರತಿನಿಧಿಯಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿದರು.

ಕುಲಶಾಸ್ತ್ರ ಅಧ್ಯಯನ

ರಾಜ್ಯದಲ್ಲಿ 17 ಪರ್ಸೆಂಟ್ ಎಸ್ಸಿ, 6.95 ಪರ್ಸೆಂಟ್ ಎಸ್‌ಟಿಗಳು, 33 ಪರ್ಸೆಂಟ್ ಒಬಿಸಿಗಳು ಇದ್ದಾರೆ. ಆದರೆ, ಮೋದಿಯವರು, ಕೋಳಿ ಸಮಾಜ, ಕುರುಬರನ್ನು, ಗೊಲ್ಲರನ್ನು ಎಸ್ಟಿಗೆ ಸೇರಿಸುತ್ತೇವೆ ಎಂದು ಹೇಳುತ್ತಾರೆ. 341, 343 ಆರ್ಟಿಕಲ್ ಪ್ರಕಾರ ಮೂಲಕ ಅರ್ಹರಿದ್ದವರಿಗೆ ಎಸ್ಸಿ, ಎಸ್ಟಿ ಮಾಡಲು ಅವಕಾಶವಿದೆ. ಆದರೆ, ಯಾವುದೇ ಸಮಾಜವನ್ನು ಎಸ್ಸಿ, ಎಸ್ಟಿ ಮಾಡಬೇಕಾದರೆ ಕುಲಶಾಸ್ತ್ರ ಅಧ್ಯಯನ ಮಾಡಿಸಬೇಕು. ಸೇರಿಸಿದ ದಿನವೇ ಒಬಿಸಿನಲ್ಲಿ ಇರುವ ಪರ್ಸೆಂಟೇಜ್ ಇಲ್ಲಿಗೆ ತರಬೇಕು. ಕಾನೂನು ಬಾಹಿರವಾಗಿ ಸುಳ್ಳು ಪ್ರಮಾಣಪತ್ರ ತೆಗೆದುಕೊಳ್ಳುವುದು ಹಾಗೂ ಕೊಡಿಸೋದು ಮಾಡಿದರೆ ಅದು ತಪ್ಪು. 2000ನೇ ಇಸ್ವಿಯಿಂದ 2 ಲಕ್ಷ 39 ಸಾವಿರ ಜನರು ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ವಿವರಿಸಿದರು.

ವಿಜಯಪುರ ಜಿಲ್ಲೆಯೊಂದರಲ್ಲೇ 56 ಸಾವಿರ ಜನರು ಸುಳ್ಳು ಎಸ್ಟಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ಕೆಲವು ರಾಜಕಾರಣಿಗಳು ಓಟ್ ಬ್ಯಾಂಕಿಗೋಸ್ಕರ ಸುಳ್ಳು ಸರ್ಟಿಫಿಕೇಟ್ ಕೊಡಿಸುವಲ್ಲಿ ಕಾಂಪಿಟೇಷನ್ ಮಾಡಬೇಡಿ. ಕಾನೂನಾತ್ಮಕವಾಗಿ ಅರ್ಹರಿದ್ದವರಿಗೆ ಕೊಡಿಸಿ. ಕಾನೂನಾತ್ಮಕವಾಗಿ ಮೊದಲು ಅವರನ್ನು ಎಸ್ಸಿ, ಎಸ್ಟಿಗೆ ಸೇರಿಸಿ ಪ್ರಮಾಣಪತ್ರ ಕೊಡಿಸಿ ಎಂದ ಅವರು, ಇನ್ನು ಸಿಎಂ, ಡಿಸಿಎಂ ಅವರು ಸೀನಿಯರ್‌ ಕೌನ್ಸಿಲ್‌ರನ್ನು ನೇಮಿಸಿ ತಡೆಯಾಜ್ಞೆ ತೆರವುಗೊಳಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಅನುಭವಿಸಬೇಕಾಗುತ್ತದೆ ಎಂದರು.