ಕೊಡಗು: ಮತದಾನ ಜಾಗೃತಿ ರಾಯಭಾರಿಗಳಿಗೆ ಸನ್ಮಾನ
ಮೇಕೇರಿ ಗ್ರಾಮದ ಎಸ್.ಕೆ.ಈಶ್ವರಿ, ಹೊಸಕೋಟೆ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರಾದ ಬಸವರಾಜ ಬಡಿಗೇರ್ ಹಾಗೂ ಚೇರಂಬಾಣೆ ಬಳಿಯ ಐವತ್ತೋಕ್ಲು ಗ್ರಾಮದ ಕೆ.ರವಿ ಮುತ್ತಪ್ಪ ಇವರು ರಾಯಬಾರಿಯಾಗಿ ಆಯ್ಕೆಯಾಗಿದ್ದು, ಇವರನ್ನು ಸ್ವೀಪ್ ಸಮಿತಿ ವತಿಯಿಂದ ಶಾಲೂ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು.
ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಏ.07): ಕೊಡಗು ಜಿಲ್ಲಾ ಮತದಾರರ ಜಾಗೃತಿ ಸಮಿತಿ ಮತ್ತು ಜಿಲ್ಲಾಡಳಿತವು ಈ ಬಾರಿ ಮತದಾರ ಜಾಗೃತಿ ರಾಯಭಾರಿಗಳನ್ನಾಗಿ ಜನಸಾಮಾನ್ಯರನ್ನೇ ಆಯ್ಕೆ ಮಾಡುವ ಮೂಲಕ ಗಮನ ಸೆಳೆದಿದೆ. ಮೇಕೇರಿ ಗ್ರಾಮದ ಎಸ್.ಕೆ.ಈಶ್ವರಿ, ಹೊಸಕೋಟೆ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರಾದ ಬಸವರಾಜ ಬಡಿಗೇರ್ ಹಾಗೂ ಚೇರಂಬಾಣೆ ಬಳಿಯ ಐವತ್ತೋಕ್ಲು ಗ್ರಾಮದ ಕೆ.ರವಿ ಮುತ್ತಪ್ಪ ಇವರು ರಾಯಬಾರಿಯಾಗಿ ಆಯ್ಕೆಯಾಗಿದ್ದು, ಇವರನ್ನು ಸ್ವೀಪ್ ಸಮಿತಿ ವತಿಯಿಂದ ಶಾಲೂ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸ್ವೀಪ್ ಸಮಿತಿಯಿಂದ ಹೊರತಂದಿರುವ ಬಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಮೇಕೇರಿಯ ವಿಶೇಷ ಚೇತನ ಮಹಿಳೆ ಮೇಕೇರಿ ಗ್ರಾಮದ ಈಶ್ವರಿ, ಕುಶಾಲನಗರದ ಶಿಕ್ಷಕ ಬಸವರಾಜ ಬಡಿಗೇರ್, ಗೃಹರಕ್ಷಕ ದಳದ ಸಿಬ್ಬಂದಿ ರವಿಮುತ್ತಪ್ಪ ಅವರನ್ನು ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭೆಯ ಮತದಾರರ ಜಾಗೃತಿ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಮೇಕೇರಿ ಗ್ರಾಮದಲ್ಲಿ ನೆಲಸಿರುವ ಎಸ್.ಕೆ.ಈಶ್ವರಿ ಬಾಲ್ಯದಲ್ಲಿಯೇ ವಿಶೇಷಚೇತನರಾಗಿದ್ದು ಛಲಬಿಡದೇ ಹಂತಹಂತವಾಗಿ ಸಾಧನೆಯ ಹಾದಿಯಲ್ಲಿ ಸಾಗಿ 35 ರೀತಿಯ ಕರಕುಶಲ ಕಾರ್ಯಗಳಲ್ಲಿ ಪರಿಣತಿ ಹೊಂದಿದ್ದಾರೆ. ದೈಹಿಕವಾಗಿ ಅದೆಷ್ಟು ಕಷ್ಟಗಳಿದ್ದರೂ ಅವನ್ನೆಲ್ಲ ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಈಶ್ವರಿ ತಮ್ಮ ಸಾಧನೆಗಳ ಮೂಲಕ ಸಮಾಜದಲ್ಲಿ ಮಾದರಿ ಮಹಿಳೆ ಎನಿಕೊಂಡಿದ್ದಾರೆ.
Kodagu: ಅತ್ಯಂತ ಕಡಿಮೆ ಅಳತೆಯ ನಿವೇಶನದ ಹಕ್ಕುಪತ್ರ ವಿತರಣೆಗೆ ಜನರ ಆಕ್ರೋಶ: ಅಹೋರಾತ್ರಿ ಪ್ರತಿಭಟನೆ
ಸ್ವಂತ ಉದ್ಯೋಗವಾಗಿ ಹೊಲಿಗೆ, ಫಿನಾಯಿಲ್ ತಯಾರಿಕೆಯಲ್ಲಿ ಈಶ್ವರಿ ನಿರತರಾಗಿದ್ದಾರೆ. ಕ್ರೀಡೆಯಲ್ಲಿಯೂ ಉತ್ಸಾಹಿಯಾಗಿರುವ ಈಶ್ವರಿ ವೀಲ್ ಚೇರ್ ಓಟ, ಈಜು, ಜಾವಲಿನ್ ಎಸೆತದಲ್ಲಿ ಪಾಲ್ಗೊಂಡಿದ್ದರು. ಓದು ಬರಹವನ್ನು ಮನೆಯಲ್ಲಿದ್ದುಕೊಂಡೇ ಕಲಿತ ಈಶ್ವರಿ ಕಥೆ, ಕವನ ಬರೆಯುತ್ತಾರೆ, ನಾಟಕವನ್ನು ಕೂಡ ರಚನೆ ಮಾಡಿರುವ ಈಶ್ವರಿ ರಾಜ್ಯ ಮಟ್ಟದಲ್ಲಿ ಕಾವ್ಯ ರಚನೆಗಾಗಿ ಬಹುಮಾನ ಪಡೆದಿದ್ದಾರೆ.
ತರಕಾರಿ ಕೆತ್ತನೆ, ಹಾಡುಗಾರಿಕೆ, ಕಾವ್ಯ ವಾಚನ ಮುಂತಾದ ಸಾಂಸ್ಕøತಿಕ ಚಟುವಟಿಕೆಗಳಲ್ಲಿಯೂ ಈಶ್ವರಿ ಸಕ್ರಿಯರು. ಕಸದಿಂದ ರಸ, ಸ್ವಚ್ಚ ಭಾರತ, ಪ್ಲಾಸ್ಟಿಕ್ ಮುಕ್ತ ಕರ್ನಾಟಕ ಸಂದೇಶ ಸಾರುವ ಕೃತಿಯನ್ನು ಕೂಡ ಈಶ್ವರಿ ರೂಪಿಸಿ ಗಮನ ಸೆಳೆದಿದ್ದಾರೆ. ಕುವೆಂಪು ಕಾವ್ಯ ಪುರಸ್ಕಾರ, ಬಹುಮುಖ ಪ್ರತಿಭಾ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿ, ಸನ್ಮಾನಗಳೂ ಈಶ್ವರಿ ಅವರಿಗೆ ದೊರಕಿದೆ.
ಬಸವರಾಜ ಬಡಿಗೇರ್ ಅವರು ಮೂಲತಃ ಪಟ್ಟದಕಲ್ಲು ಗ್ರಾಮದವರಾಗಿದ್ದು, ಚಿತ್ರಕಲಾ ಶಿಕ್ಷಕರಾಗಿ 16 ವರ್ಷಗಳಿಂದ ಕೊಡಗು ಜಿಲ್ಲೆಯ 7 ನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಕವ್ಯಕ್ತಿ ಚಿತ್ರಕಲೆಗೆ ಹೆಸರಾಗಿರುವ ಬಸವರಾಜ ಬಡಿಗೇರ್ ಪಟ್ಟದಕಲ್ಲು ಉತ್ಸವ, ಬಾದಾಮಿ ಉತ್ಸವ ಸೇರಿದಂತೆ ರಾಜ್ಯದ ಅನೇಕ ಕಡೆ ತಮ್ಮ ಚಿತ್ರಕಲೆಗಳ ಪ್ರದರ್ಶನ ನೀಡಿದ್ದಾರೆ. ತಾಲ್ಲೂಕು ಮಟ್ಟದ ಅತ್ಯುತ್ತಮ ಚಿತ್ರಕಲಾ ಶಿಕ್ಷಕ ಪ್ರಶಸ್ತಿ, ಶಿಕ್ಷಕರ ಸಹಪಠ್ಯ ಚಟುವಟಿಕೆಗಾಗಿ ರಾಜ್ಯ ಮಟ್ಟದ ಪ್ರಥಮ ಬಹುಮಾನ ದೊರಕಿದೆ. ಖಾಸಗಿ ವಾಹಿನಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸರಿಗಮ ಲಿಟಲ್ ಚಾಂಪಿಯನ್ ನಲ್ಲಿ ಬಸವರಾಜ ಬಡಿಗೇರ್ ಅವರ ಪುತ್ರಿ ಪ್ರಗತಿ ಬಡಿಗೇರ್ ವಿಜೇತೆಯಾಗಿದ್ದರು. ಈ ಸಂದರ್ಭ ಬಸವರಾಜ ಬಡಿಗೇರ್ ಕೂಡ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ಹಾಡಿನ ಮೂಲಕ ಗಮನ ಸೆಳೆದಿದ್ದರು. ಬಡಿಗೇರ್ ಅವರ ಪತ್ನಿ ಚಂದ್ರಕಲಾ ಬಡಿಗೇರ್ ಪುತ್ರಿಯರಾದ ಪ್ರಗತಿ ಬಡಿಗೇರ್, ಪ್ರತಿಕ್ಷಾ ಬಡಿಗೇರ್, ತ್ರಿವೇಣಿ ಬಡಿಗೇರ್ ಕೂಡ ಹಾಡುಗಾರರಾಗಿರುವುದು ಈ ಕುಟುಂಬವನ್ನೇ ಗಾಯಕರ ಕುಟುಂಬ ಎಂಬ ಹಿರಿಮೆಗೆ ಪಾತ್ರವಾಗಿದೆ.
ಕೊಡಗು ಜಿಲ್ಲಾ ಗೃಹರಕ್ಷಕ ದಳದಲ್ಲಿ ಕಳೆದ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಚೇರಂಬಾಣೆ ಬಳಿಯ ಐವತ್ತೋಕ್ಲು ಗ್ರಾಮದ ಕೆ.ರವಿಮುತ್ತಪ್ಪ ಅವರು ಪ್ರಸ್ತುತ ಮಡಿಕೇರಿ ಕಾರಾಗೃಹದಲ್ಲಿ ಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ವಾರ್ಥ ರಹಿತ ಸಮಾಜ ಸೇವೆ ಮಾಡುತ್ತಿರುವ ಮುತ್ತಪ್ಪ, ಕಣ್ಣೀರ ಕಡಲಲ್ಲಿ ಮುಳುಗಿದ್ದ ಅನೇಕ ಕುಟುಂಬಗಳ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಸಕಾಲದಲ್ಲಿ ನೆರವು ನೀಡಿದ್ದಾರೆ. ಕೊಡಗು ಜಿಲ್ಲೆಯ ನದಿ, ಕೆರೆ, ತೊರೆಯಲ್ಲಿ ಯಾರೇ ಜಾರಿಬಿದ್ದು ಸಾವನ್ನಪ್ಪಿದ ಸಂದರ್ಭ ನೀರಿನಾಳದಿಂದ ಮೃತದೇಹಗಳನ್ನು ಮೇಲೆತ್ತುವಲ್ಲಿ ರವಿಮುತ್ತಪ್ಪ ಅವರ ಸೇವೆ ಗಮನಾರ್ಹವಾಗಿದೆ. 20 ವರ್ಷಗಳಲ್ಲಿ ಜಿಲ್ಲೆಯಾದ್ಯಂತ ನದಿ, ತೊರೆಗಳಿಂದ ರವಿಮುತ್ತಪ್ಪ 39 ಮೃತ ಶರೀರಗಳನ್ನು ಹೊರತೆಗೆದಿದ್ದಾರೆ.
ನೀರಿನಾಳಕ್ಕೆ ಮುಳುಗಿ ಅಲ್ಲಿ ಕಲ್ಲುಬಂಡೆ, ಮರಗಳ ಮಧ್ಯೆ ಸಿಲುಕಿಕೊಂಡಿರುವ ಮೃತ ದೇಹಗಳನ್ನು ಹೊರತೆಗೆಯುವ ಸಾಹಸದ ವೃತ್ತಿಯಲ್ಲಿ ಮುತ್ತಪ್ಪ ತೃಪ್ತಿ ಕಂಡಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ನಿಂದ ಜೀವರಕ್ಷಕ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮುತ್ತಪ್ಪ ಅವರನ್ನು ಗೌರವಿಸಿ ಸನ್ಮಾನಿಸಿವೆ.
ಮೃತದೇಹಗಳನ್ನು ನೀರಿನಾಳದಿಂದ ಹೊರ ತೆಗೆಯುವ ಸವಾಲಿನ ಕೆಲಸದಲ್ಲಿ ತೃಪ್ತಿ ಕಂಡುಕೊಂಡಿದ್ದೇನೆ. ಇದಕ್ಕಾಗಿ ಹಣ ಪಡೆಯದೇ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಮುತ್ತಪ್ಪ ಹೇಳುತ್ತಾರೆ. ಬಹಳ ದೊಡ್ಡ ಮೀಸೆಯನ್ನು ಹೊಂದಿರುವ ರವಿ ಮುತ್ತಪ್ಪ ಇದೇ ಕಾರಣಕ್ಕೂ ಆಕರ್ಷಣೆ ಗಳಿಸಿ ಮೀಸೆ ಮುತ್ತಪ್ಪ ಎಂದೂ ಆತ್ಮೀಯರಿಂದ ಹೇಳಿಸಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಕಾರಾಗೃಹ ಅಧೀಕ್ಷಕರು ಮೀಸೆ ನಿರ್ವಹಣೆಗಾಗಿಯೇ ಮುತ್ತಪ್ಪ ಅವರಿಗೆ ಶಾಂಪು ಖರೀದಿಗೆ ದಿನಕ್ಕೆ 10 ರೂ ನೀಡುತ್ತಿದ್ದರು.
ಕೊಡಗಿನ ಹಾಲಿ ಶಾಸಕರಿಗೆ ಟಿಕೆಟ್ ಕೊಡುವುದಕ್ಕೆ ಕಾರ್ಯಕರ್ತರ ತೀವ್ರ ವಿರೋಧ!
ಈ ಮೂವರ ಕೌಶಲ್ಯಯುತ ಸಾಧನೆ ಗುರುತಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ಮತ್ತು ತಂಡವು ಮತದಾರರ ಜಾಗೃತಿ ಅಭಿಯಾನದ ರಾಯಭಾರಿಗಳನ್ನಾಗಿ ಇವರನ್ನು ಆಯ್ಕೆ ಮಾಡಿದ್ದಾರೆ. ಮೇ, 10 ರಂದು ಕೊಡಗು ಜಿಲ್ಲೆಯ ಮತಗಟ್ಟೆಗಳಿಗೆ ಪ್ರತೀಯೋರ್ವ ಮತದಾರರೂ ತೆರಳಿ ತಪ್ಪದೇ ತಮ್ಮ ಹಕ್ಕು ಚಲಾಯಿಸಿ, ಮತ ಚಲಾವಣೆ ಪ್ರತೀ ಪ್ರಜೆಯ ಹಕ್ಕಾಗಿದ್ದು ಈ ಹಕ್ಕನ್ನು ತಪ್ಪದೇ, ನಿರ್ಭೀತಿಯಿಂದ ಚಲಾಯಿಸಿ ಎಂಬ ಸಂದೇಶವನ್ನು ಈ ಮೂವರು ರಾಯಭಾರಿಗಳು ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಾದ್ಯಂತ ಸಾರಲಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.