ಅದ್ಭುತ ಕ್ಷಣಗಳ ಚಕ್ ಅಂತ ಸೆರೆ ಹಿಡಿಯೋ ಮಾಯಗಾರ ವಿವೇಕ್ ಗೌಡ
ಆಸಕ್ತಿಯೆಂಬ ಕಿಚ್ಚಿಗೆ ಅವಕಾಶಗಳ ಇಂಧನ ಪ್ರತಿಭೆಯನ್ನು ಪ್ರಕಾಶಮಾನವಾಗಿಸುತ್ತದೆ. ಬಳಸಿಕೊಳ್ಳುವ ಛಾತಿ ಇರಬೇಕಷ್ಟೇ. ಇದಕ್ಕೆ ಉದಾಹರಣೆ ಎಂಬಂತಿದ್ದಾರೆ ಯುವ ಛಾಯಾ ಗ್ರಾಹಕ ವಿವೇಕ್ ಗೌಡ.
- ಸುಕನ್ಯಾ ಎನ್. ಆರ್, ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು ಪುತ್ತೂರು
ಸಾಮಾನ್ಯವಾಗಿ ನಾವು ದಿನನಿತ್ಯ ನೋಡುವ ದೃಶ್ಯಗಳಲ್ಲೇ ವಿಭಿನ್ನ ದೃಷ್ಟಿಕೋನವನ್ನು ಗ್ರಹಿಸುವ ಚಾತುರ್ಯತೆ ಹೊಂದಿರುವ ವಿವೇಕ್, ಸ್ಟ್ರೀಟ್ ಫೋಟೊಗ್ರಫಿ ಮೂಲಕ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದ್ದಾರೆ. ಸಾವಿರ ಭಾವನೆಗಳನ್ನು ಹೊರಚೆಲ್ಲುವ ಅದ್ಭುತ ಕಲೆ ಇರುವ ಬೀದಿ ಚಿತ್ರಣ ನೂರಾರು ಕಥೆ ಹೇಳುತ್ತ ನೋಡುಗರ ಮನಸೆಳೆಯುತ್ತದೆ. ವಿವೇಕ್ ತೆಗೆದ ಹಲವಾರು ಚಿತ್ರ ಕಥೆಗಳ ಸರಮಾಲೆಯನ್ನೇ ಬಿಗಿಯುತ್ತದೆ.
ತಂದೆಯೊಡನೆ ಕೈಹಿಡಿದು ದಾರಿಯಲಿ ಹೋಗುತ್ತಿದ್ದ ಮಗುವೊಂದು ಅಲ್ಲಿಯೇ ಇದ್ದ ಬಿಕ್ಷಕನ ನೋಡಿ ಮುಗ್ಧ ಮನಸ್ಸಿನಿಂದ ನಗುತ್ತದೆ. ಈ ಚಿತ್ರ ಕೊಡುವ ಸಂದೇಶ ಕಾಣದ ದೇವರಿಗೆ ಹೇಗೋ ಗೊತ್ತಿಲ್ಲ, ಆದರೆ ಕಾಣುವ ದೇವರು ಮಕ್ಕಳಿಗೆ ಎಲ್ಲರೂ ಹೇಗಿದ್ದರೂ ಒಂದೇ ಎಂಬ ನಿಷ್ಕಲ್ಮಶವಾದ ವಿಷಯ ತಿಳಿಸುತ್ತದೆ. ಹೀಗೆ ಅನೇಕ ಚಿತ್ರ ದ ಹಿಂದೆ ಅರ್ಥಪೂರ್ಣವಾದ ಸಂದೇಶ ಒಳಗೊಂಡಿದೆ
ಆಗಸ್ಟ್ 19 ವಿಶ್ವ ಛಾಯಾಚಿತ್ರಗಾರ ದಿನಾಚರಣೆಯ ಪ್ರಯುಕ್ತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಛಾಯಾಚಿತ್ರ ಸ್ಪರ್ಧೆ 2021 ರ 'ರೂರರ್ ಲೈಫ್' ಹಾಗೂ 'ಸ್ಟ್ರೀಟ್ ಫೋಟೋಗ್ರಫಿ'ಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತಾರೆ.
ಎಫ್.ಐ.ಪಿ, ಗೋಲ್ಡ್, ಸಿ.ಎಸ್.ಸಿ.ಪಿ ಗೋಲ್ಡ್, ಗೋಲ್ಡ್ ಮೆಡಲ್, ಎಫ್.ಐ.ಏ. ಪಿ ಗೋಲ್ಡ್, ಬಿ.ಐ.ಎಸ್. ರಿಬ್ಬನ್, ಎಫ್.ಐ.ಎಸ್. ಅವಾರ್ಡ್, ಜಿ.ಪಿ.ಯು ಗೋಲ್ಡ್, ಕ್ಲಬ್ ಗೋಲ್ಡ್, ಬೆಸ್ಟ್ ಎಂಟ್ರೇಂಟ್ ಎಂ.ಎನ್.ಸಿ, ಬೆಟರ್ ಫೋಟೋಗ್ರಫಿ ವೆಡ್ಡಿಂಗ್, ಫೋಟೋಗ್ರಾಫರ್ ಆಫ್ ದಿ ಇಯರ್ ಟಾಪ್ 30, ಫೆಡೆರೇಷನ್ ಆಫ್ ಇಂಡಿಯನ್ ಫೋಟೋಗ್ರಾಫಿಯಿಂದ ಏ.ಎಫ್.ಐ.ಪಿ ಡಿಸ್ಟಿಂಕ್ಷನ್ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ
ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ವಿವೇಕ್ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರತಿಷ್ಠಿತ ಫೆಡರೇಷನ್ ಆಫ್ ಇಂಡಿಯಾ ಫೋಟೊಗ್ರಫಿಯಲ್ಲಿ 'ಫೋಟೊಗ್ರಫಿ ಆಫ್ ಇಯರ್ 2020' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಫ್ರಾನ್ಸ್ , ಇಟಲಿ, ಅಮೇರಿಕಾ, ಕೋಲ್ಕತಾ, ದೆಹಲಿ, ಆಗ್ರ, ಪಂಜಾಬ್, ಹೈದರಾಬಾದ್, ಆಳ್ವಾಸ್ ನುಡಿಸಿರಿ ಸೇರಿದಂತೆ ಹಲವು ಕಡೆಗಳಲ್ಲಿ ವಿವೇಕ್ ತೆಗೆದ ಚಿತ್ರಗಳು ಪ್ರದರ್ಶನಗೊಂಡಿವೆ. ಇತ್ತೀಚೆಗೆ ಮಂಗಳೂರಿನಲ್ಲಿ ಪ್ರದರ್ಶನ ಕಂಡಿದೆ. ಫೋಟೊಗ್ರಫಿಯು ಅನೇಕ ಜ್ಞಾನದ ಜೊತೆಗೆ ಅನುಭವ, ಜನರ ಜೀವನ, ಆಹಾರ, ಉಡುಪು, ಸಂಸ್ಕೃತಿಗಳ ಬಗ್ಗೆ ಅರಿಯುವಂತೆ ಮಾಡುತ್ತದೆ. ಇದರಿಂದ ಮನುಷ್ಯನನ್ನ ಚಿತ್ರದ ಮೂಲಕ ಬಂಧಿಸಬಹುದು ಎಂಬುದು ವಿವೇಕ್ ಅವರ ಮನದ ಮಾತು.
ಸಕಲೇಸಪುರದ ಅತ್ತಿಹಳ್ಳಿ ಗ್ರಾಮದ ಕೃಷಿ ಕುಟುಂಬದ ಮಲ್ಲೇಶ್ ಮತ್ತು ಸುಶೀಲ ದಂಪತಿಗಳ ಏಕೈಕ ಪುತ್ರ ವಿವೇಕ್ ಗೌಡ. ಶನಿವಾರ ಸಂತೆಯ ಸೇಕ್ರೆಡ್ ಹಾರ್ಟ್ ವಿದ್ಯಾರ್ಥಿಯಾಗಿರುವ ವಿವೇಕ್, ಉಜಿರೆಯ ಎಸ್‌ಡಿಎಂನಲ್ಲಿ ಬಿಸಿಎ ಪೂರ್ಣಗೊಳಿಸಿದ್ದಾರೆ.
ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಹವಾಸದಿಂದ ಛಾಯಾಗ್ರಹಣದ ಕಡೆಗೆ ಆಕರ್ಷಿಸಿತರಾದ ವಿವೇಕ್, ಫೋಟೋ ಜರ್ನಲಿಸ್ಟ್ ಇರ್ಷಾದ್ ಎಂ ವೇಣೂರು ಅವರ ಪ್ರೋತ್ಸಾಹವನ್ನು ಸ್ಮರಿಸುತ್ತಾರೆ.ಕಾಲೇಜು ದಿನಗಳಲ್ಲೇ ಛಾಯಾಗ್ರಹಣದ ಜೊತೆಗೆ ಸಿನಿಮಾ ಆಟೋಗ್ರಾಫ್ರರ್ , ವಿಡಿಯೋ ಎಡಿಟಿಂಗ್‌ನಲ್ಲೂ ಪ್ರಾವಿಣ್ಯತೆ ಸಾಧಿಸಿದರು. ಸಂಕಲನಕಾರರಾಗಿಯೂ ಗುರುತಿಸಿಕೊಂಡಿದ್ದಾರೆ.
ಮನಸ್ಸಿಗೆ ಹತ್ತಿರವಾದ ಚಿತ್ರ
ಬಿಕ್ಷುಕ ತನ್ನ ತಟ್ಟೆಯಲ್ಲಿದ್ದ ಊಟವನ್ನ ಪಕ್ಕದಲ್ಲಿದ್ದ ಶ್ವಾನಕ್ಕೆ ಕೊಡುತ್ತಿರುವ ಫೋಟೊ ನನಗೆ ಆಪ್ತವೆನಿಸಿತು. ಕೇಳಿ ತಿನ್ನುವ ವ್ಯಕ್ತಿ ಹಂಚಿ ತಿನ್ನುವುದು ಮಾನವೀಯ ಸಂಬಂಧ. ಹಾಗಾಗಿ ಆ ಚಿತ್ರವು ಮನಸ್ಸಿಗೆ ಹತ್ತಿರವಾಯಿತು ಎನ್ನುತ್ತಾರೆ ವಿವೇಕ್ ಗೌಡ.