ಸೋಮರಡ್ಡಿ ಅಳವಂಡಿ

ಕೊಪ್ಪಳ(ಏ.12): ಜಿಲ್ಲೆಯಲ್ಲಿ ವಿದೇಶಿಯರ ಅಡ್ಡೆ ಎಂದೇ ಹೆಸರಾಗಿದ್ದ ವಿರೂಪಾಪುರಗಡ್ಡೆಯನ್ನು ಕೆಲವೇ ದಿನಗಳ ಹಿಂದೆ ತೆರವು ಮಾಡಿದ್ದೇ ಕೊಪ್ಪಳ ಜಿಲ್ಲೆಗೆ ಈಗ ಅನುಕೂಲವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ವಿರೂಪಾಪುರಗಡ್ಡೆ ಸದಾ ವಿದೇಶಿಯರಿಂದಲೇ ಗಿಜಿಗುಡುತ್ತಿತ್ತು. ಅದರಲ್ಲೂ ಇತ್ತೀಚೆಗೆ ವಿದೇಶಿಯರ ಜೊತೆ ದಿಲ್ಲಿ, ಮುಂಬೈ, ಕೋಲ್ಕತಾ, ಹೈದ್ರಾಬಾದ್‌ ಸೇರಿದಂತೆ ಹೊರ ರಾಜ್ಯಗಳ ಪ್ರವಾಸಿಗರು ಸಹ ಬಂದು ಠಿಕಾಣಿ ಹೂಡುತ್ತಿದ್ದರು. ಇದೊಂದು ವಿದೇಶಿ ತಾಣದಂತೆ ಗೋಚರವಾಗುತ್ತಿತ್ತು. ಅಕ್ರಮ ಚಟುವಟಿಕೆ, ಅನೈತಿಕತೆಯ ತಾಣವಾಗಿತ್ತು. ಅಲ್ಲಿಯ ಅಕ್ರಮ ಚಟುವಟಿಕೆ ಮತ್ತು ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸುನೀಲಕುಮಾರ ಕಠಿಣ ತೀರ್ಮಾನ ಕೈಗೊಂಡು ಇಲ್ಲಿಯ ರೆಸಾರ್ಟ್‌ ತೆರವಿಗೆ ಸುಪ್ರೀಂ ಕೋರ್ಟ್‌ವರೆಗೂ ಹೋರಾಟ ಮಾಡಿ ಯಶಸ್ವಿಯಾದರು.

ಮಿನಿ ಗೋವಾ ಖ್ಯಾತಿಯ ವಿರೂಪಾಪುರಗಡ್ಡೆಯಲ್ಲಿನ ರೆಸಾರ್ಟ್‌ಗಳೆಲ್ಲ ನೆಲಸಮ!

ಫೆಬ್ರವರಿ ತಿಂಗಳಲ್ಲಿ ಈ ರೆಸಾರ್ಟ್‌ಗಳು ತೆರವುಗೊಂಡಿದ್ದರಿಂದ ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಯ ಜನರು ಶಾಂತಿಯಿಂದ ಬದಕುತ್ತಿದ್ದಾರೆ. ವಿದೇಶಿಯರು ಜಿಲ್ಲೆಗೆ ಬರುವುದು ಸಹ ತಪ್ಪಿದೆ. ಇದರಿಂದ ಕೊರೋನಾ ಮಹಾಮಾರಿ ಜಿಲ್ಲೆಗೆ ಎಂಟ್ರಿ ಆಗುವುದು ಸಹ ಅಸಾಧ್ಯವಾಗಿದೆ.

ಸಾಮಾನ್ಯವಾಗಿ ಕೊರೋನಾ ಹರಡುತ್ತಿರುವುದೇ ವಿದೇಶದಿಂದ ಬಂದಿರುವುದರಿಂದ, ಹೀಗಾಗಿ, ವಿರುಪಾಪುರಗಡ್ಡೆ ಇಲ್ಲದಿರುವುದರಿಂದಲೇ ಇಂಥದ್ದೊಂದು ಗಂಡಾತರದಿಂದ ಪಾರಾಗುವುದಕ್ಕೆ ಕಾರಣವಾಗಿರಬಹುದು ಎಂದೇ ಹೇಳಲಾಗುತ್ತಿದೆ.

ವಿದೇಶಿಯರ ಸ್ವರ್ಗವೀಗ ಭಣ..ಭಣ...: ವಿರೂಪಾಪುರ ಗಡ್ಡೆ ಇನ್ನು ನೆನಪು ಮಾತ್ರ!

ನಿಯಂತ್ರಣ ಕಷ್ಟವಾಗುತ್ತಿತ್ತು:

ಹಾಗೊಂದು ವೇಳೆ ವಿರುಪಾಪುರಗಡ್ಡೆ ಇದ್ದಿದ್ದರೆ, ಅನೇಕ ವಿದೇಶಿಯರು ಇಲ್ಲಿಯೇ ಠಿಕಾಣಿ ಹೂಡುತ್ತಿದ್ದರು. ಇದರಿಂದ ನಿಯಂತ್ರಣವೇ ಬಹುದೊಡ್ಡ ಸವಾಲಾಗುತ್ತಿತ್ತು. ಅವರು ಕೇವಲ ಪ್ರವಾಸಿಗರಾಗಿ ಇರುತ್ತಿರಲಿಲ್ಲ. ಸ್ಥಳೀಯ ಜನರ ಜೊತೆಗೆ, ಇತರ ಪ್ರದೇಶಗಳಿಗೆ ಸದಾ ಭೇಟಿ ನೀಡುತ್ತಿದ್ದರು. ಹೀಗಾಗಿ ತೀವ್ರ ಸಮಸ್ಯೆಯಾಗುತ್ತಿತ್ತು ಎಂದೇ ಹೇಳಲಾಗುತ್ತದೆ. ಏನೇ ಆಗಲಿ, ವಿದೇಶಿಯರು ತಂಗುವ ವಿರುಪಾಪುರಗಡ್ಡೆಯನ್ನು ತೆರವು ಮಾಡಿದ್ದೇ ಈಗ ಬಹಳ ಅನುಕೂಲವಾಯಿತು ಎಂದೇ ಹೇಳಲಾಗುತ್ತದೆ.