'ಬಸವನಬಾಗೇವಾಡಿಯನ್ನೂ ಜಿಲ್ಲಾ ಕೇಂದ್ರ ಮಾಡಿ'
ಬ.ಬಾಗೇವಾಡಿ ಜಿಲ್ಲಾ ಕೇಂದ್ರ ಮಾಡಲು ಒತ್ತಾಯಿಸಿದ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ| ಜಿಲ್ಲೆ ಹದಿಮೂರು ತಾಲೂಕು ಒಳಗೊಂಡಿದ್ದು, ಕೆಲ ತಾಲೂಕು ಕೇಂದ್ರಗಳಿಗೆ ಜಿಲ್ಲಾ ಕೇಂದ್ರವು ದೂರವಾಗಿದೆ| ಈ ಹಿನ್ನೆಲೆ ಜನರ ಸಮಯ, ಹಣ ಎರಡೂ ವ್ಯರ್ಥವಾಗುವುದರಿಂದ ಬಸವನಬಾಗೇವಾಡಿಗೆ ನಿಡಗುಂದಿ, ಕೊಲ್ಹಾರ, ತಾಳಿಕೋಟಿ ಸೇರಿದಂತೆ ಆರು ತಾಲೂಕು ಸೇರಿಸಿ ಬಸವನಬಾಗೇವಾಡಿಯನ್ನೇ ನೂತನ ಜಿಲ್ಲಾ ಕೇಂದ್ರವನ್ನಾಗಿ ರಾಜ್ಯ ಸರ್ಕಾರ ರಚನೆ ಮಾಡಬೇಕು|
ಬಸವನಬಾಗೇವಾಡಿ(ಅ.3): ಜಿಲ್ಲೆ ಹದಿಮೂರು ತಾಲೂಕು ಒಳಗೊಂಡಿದ್ದು, ಕೆಲ ತಾಲೂಕು ಕೇಂದ್ರಗಳಿಗೆ ಜಿಲ್ಲಾ ಕೇಂದ್ರವು ದೂರವಾಗಲಿರುವ ಹಿನ್ನೆಲೆ ಜನರ ಸಮಯ, ಹಣ ಎರಡೂ ವ್ಯರ್ಥವಾಗುವುದರಿಂದ ಬಸವನಬಾಗೇವಾಡಿಗೆ ನಿಡಗುಂದಿ, ಕೊಲ್ಹಾರ, ತಾಳಿಕೋಟಿ ಸೇರಿದಂತೆ ಆರು ತಾಲೂಕು ಸೇರಿಸಿ ಬಸವನಬಾಗೇವಾಡಿಯನ್ನೇ ನೂತನ ಜಿಲ್ಲಾ ಕೇಂದ್ರವನ್ನಾಗಿ ರಾಜ್ಯ ಸರ್ಕಾರ ರಚನೆ ಮಾಡಬೇಕು ಎಂದು ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ 1997ರಲ್ಲಿ ಮಾಜಿ ಸಿಎಂ ದಿ.ಜೆ.ಎಚ್. ಪಟೇಲ್ ಅವರು ರಾಜ್ಯದಲ್ಲಿ ಜನರ ಅನುಕೂಲಕ್ಕಾಗಿ ಏಳು ನೂತನ ಜಿಲ್ಲೆಗಳನ್ನು ರಚನೆ ಮಾಡಿದ್ದು ಇತಿಹಾಸ. ಇದೇ ಸಂದರ್ಭದಲ್ಲಿ ಅಖಂಡ ವಿಜಯಪುರ ಜಿಲ್ಲೆಯನ್ನು ಬಾಗಲಕೋಟೆ, ವಿಜಯಪುರ ಎಂದು ಪ್ರತ್ಯೇಕ ಜಿಲ್ಲೆಗಳಾಗಿ ರಚನೆಗೊಂಡವು. ಇದೀಗ ರಾಜ್ಯ ಬಿಜೆಪಿ ಸರ್ಕಾರದ ಮುಂದೆ ಚಿಕ್ಕೋಡಿ, ವಿಜಯನಗರ ನೂತನ ಜಿಲ್ಲೆಗಳನ್ನು ಮಾಡುವ ಪ್ರಸ್ತಾವನೆ ಇದೆ. ಬಸವನಬಾಗೇವಾಡಿಯೂ ಜಿಲ್ಲಾ ಕೇಂದ್ರವಾಗಬೇಕೆಂದು ಇಲ್ಲಿನ ವಿವಿಧ ಸಂಘಟನೆಗಳ ಬಹುದಿನಗಳ ಬೇಡಿಕೆಯಾಗಿದೆ. ಅದರಂತೆ ಸಿಎಂ ಬಿ.ಎಸ್.ಯಡಿಯೂರಪ್ಪನವರು ಈ ಭಾಗದ ಜನರ ಬೇಡಿಕೆಯನ್ನು ಗಮನಿಸಿ ಬಸವನಬಾಗೇವಾಡಿಯನ್ನು ನೂತನ ಜಿಲ್ಲೆಯನ್ನಾಗಿ ರಚನೆ ಮಾಡಬೇಕು ಎಂದು ಆಗ್ರಹಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಗಾಗಲೇ ಬಸವನಬಾಗೇವಾಡಿಯಲ್ಲಿ ಹೆಸ್ಕಾಂ ಇಲಾಖೆಯ ಉಪವಿಭಾಗೀಯ ಕಚೇರಿ, ಪೊಲೀಸ್ ಇಲಾಖೆಯ ಉಪವಿಭಾಗ ಕಚೇರಿ ಸೇರಿದಂತೆ ಅನೇಕ ಇಲಾಖೆಯ ಕಚೇರಿಗಳಿವೆ. ಇದರ ಸುತ್ತಮುತ್ತಲಿನ ಅನೇಕ ತಾಲೂಕುಗಳಿಗೆ ಇದು ಮಧ್ಯವರ್ತಿ ಸ್ಥಳವಾಗಿದೆ. ಇದರಿಂದಾಗಿ ಈ ತಾಲೂಕಿನ ಜನರು ತಮ್ಮ ಕೆಲಸಗಳಿಗೆ ಬರಲು ತುಂಬಾ ಅನುಕೂಲವಾಗಲಿದೆ. ಪಟ್ಟಣದಲ್ಲಿ ಈಗಾಗಲೇ ಸಾಕಷ್ಟುಅಭಿವೃದ್ಧಿ ಆಗಿದೆ. ಜಿಲ್ಲಾ ಕೇಂದ್ರವಾದರೆ ಇನ್ನಷ್ಟುಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ ಎಂದರು.
ತಾಲೂಕಿನ ಕೂಡಗಿ ಎನ್‌ಟಿಪಿಸಿ ಉಷ್ಣ ಸ್ಥಾವರ ನಿರ್ಮಾಣಕ್ಕೆ, ಆಲಮಟ್ಟಿ ಜಲಾಶಯಕ್ಕೆ ರೈತರ ತ್ಯಾಗ ಮರೆಯುವಂತಿಲ್ಲ. ಬಸವನಬಾಗೇವಾಡಿಯು ಬಸವೇಶ್ವರರ ಜನ್ಮಸ್ಥಳವಾಗಿರುವುದರಿಂದ ಇದನ್ನು ಸರ್ಕಾರ ನೂತನ ಜಿಲ್ಲೆಯನ್ನಾಗಿ ರಚಿಸಬೇಕೆಂದು ಮನವಿ ಮಾಡಿಕೊಂಡರು.
5ರಂದು ಸಿಎಂಗೆ ಮನವಿ
ದಸರಾ ಹಬ್ಬದ ನಂತರ ಇಲ್ಲಿನ ವಿವಿಧ ಪಕ್ಷದ ಮುಖಂಡರನ್ನು, ವಿವಿಧ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ಮಾಡಿ ಮುಂದಿನ ಹೋರಾಟದ ಕುರಿತು ರೂಪುರೇಷೆ ರೂಪಿಸಲಾಗುವುದು. ಅ.5ರಂದು ಆಲಮಟ್ಟಿಗೆ ಬಾಗಿನ ಅರ್ಪಿಸಲು ಆಗಮಿಸುತ್ತಿರುವ ಸಿಎಂ ಯಡಿಯೂರಪ್ಪಗೆ ಈ ಕುರಿತು ಮನವಿ ಸಲ್ಲಿಸಲಾಗುವುದು. ಇದೇ ಸಂದರ್ಭದಲ್ಲಿ ಬಸವನಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಬೇಕೆಂದು ಸಹ ಮನವಿ ಸಲ್ಲಿಸಲಾಗುವುದು ಎಂದರು.
ಇಂಡಿ ಜಿಲ್ಲೆ ರಚನೆಗೆ ಆಗ್ರಹಿಸಿ ಸಿಎಂಗೆ ಪತ್ರ
ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕಿಸಿ ಇಂಡಿ ಪಟ್ಟಣವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ಇಂಡಿ ತಾಲೂಕು ಕೇಂದ್ರವಾಗಿದ್ದು, ಗಡಿಭಾಗದಲ್ಲಿರುವ ಇಂಡಿ ಪಟ್ಟಣವು ಸುಮಾರು 50 ಸಾವಿರ ಜನಸಂಖ್ಯೆ ಹೊಂದಿ ಜಿಲ್ಲೆಯಲ್ಲಿಯೇ 2ನೇ ದೊಡ್ಡ ಪಟ್ಟಣವಾಗಿದೆ. ಜಿಲ್ಲೆಯಲ್ಲಿ ಒಟ್ಟು 12 ಕಂದಾಯ ತಾಲೂಕುಗಳಿದ್ದು, ಭೌಗೋಳಿಕವಾಗಿ ಅತ್ಯಂತ ದೊಡ್ಡ ಜಿಲ್ಲೆಯಾಗಿರುತ್ತದೆ. ಚಡಚಣ, ಇಂಡಿ, ಆಲಮೇಲ, ಸಿಂದಗಿ, ದೇವರ ಹಿಪ್ಪರಗಿ ತಾಲೂಕುಗಳ ಸಾರ್ವಜನಿಕರು ದೂರದ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಗೆ ಕಾರ್ಯನಿಮಿತ್ಯ ಸಂಚರಿಸುವುದು ಕಷ್ಟಕರವಾಗುತ್ತಿದೆ ಹಾಗೂ ದೊಡ್ಡ ಜಿಲ್ಲೆಯಾಗಿರುವುದರಿಂದ ಅಭಿವೃದ್ದಿ ಕಾರ್ಯ ಕೈಗೊಳ್ಳಲು ಹಿನ್ನಡೆಯಾಗಿರುತ್ತದೆ ಎಂದು ಸಿಎಂ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ತಾವು ನೀಡಿದ ಹೇಳಿಕೆಯಂತೆ ಸುಗಮ ಆಡಳಿತಕ್ಕಾಗಿ ಅಭಿವೃದ್ಧಿಯ ಹಿತದೃಷ್ಠಿಯಿಂದ ದೊಡ್ಡ ಜಿಲ್ಲೆಗಳನ್ನು ಪ್ರತ್ಯೇಕಿಸಿ ಹೊಸದಾಗಿ ಜಿಲ್ಲೆಗಳ ರಚನೆ ಮಾಡುವುದು ಅತೀ ಅವಶ್ಯಕವಾಗಿರುತ್ತದೆ ಎಂದು ಹೇಳಿದ್ದು, ಹಾಗೆಯೇ ಸಾರ್ವಜನಿಕರ ಹಾಗೂ ಆಡಳಿತದ ಹಿತದೃಷ್ಠಿಯಿಂದ ಹೊಸದಾಗಿ ಜಿಲ್ಲಾ ಕೇಂದ್ರಗಳನ್ನು ನಿರ್ಮಾಣ ಮಾಡುವಾಗ (ಹೊಸದಾಗಿ ಜಿಲ್ಲೆ ರಚನೆ ಮಾಡುವಾಗ) ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣವು ಅತ್ಯಂತ ದೊಡ್ಡ ಪಟ್ಟಣವಾಗಿದ್ದು, ಪೊಲೀಸ್ ಉಪವಿಭಾಗ, ಕಂದಾಯ ಉಪವಿಭಾಗ, ಕೃಷಿ ನಿರ್ದೇಶಕರು-2, ಹೆಸ್ಕಾಂ ವಿಭಾಗ, ಕೆಬಿಜೆಎನ್‌ಎಲ್ ವಿಭಾಗ ಹಾಗೂ ಉಪವಿಭಾಗಗಳು ಸೇರಿದಂತೆ ಮೊದಲಾದ ಜಿಲ್ಲಾ ಕೇಂದ್ರಕ್ಕೆ ಅರ್ಹತೆಯುಳ್ಳ ಎಲ್ಲ ಸೌಲಭ್ಯಗಳನ್ನು ಹೊಂದಿದ್ದು, ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಕೇಂದ್ರ ಸ್ಥಳವಾಗಿರುತ್ತದೆ.
ಹೀಗಾಗಿ ಸಾರ್ವಜನಿಕರು ಹಾಗೂ ಸುಗಮ ಆಡಳಿತ ಹಿತದೃಷ್ಠಿಯಿಂದ ಭೀಮಾನದಿ ತೀರದ ವ್ಯಾಪ್ತಿಯಲ್ಲಿ ಇರುವ ಚಡಚಣ, ಇಂಡಿ, ಆಲಮೇಲ, ಸಿಂದಗಿ, ದೇವರ ಹಿಪ್ಪರಗಿ ತಾಲೂಕುಗಳನ್ನು ವಿಜಯಪುರ ಜಿಲ್ಲೆಯಿಂದ ಪ್ರತ್ಯೇಕಿಸಿ ಇಂಡಿ ಪಟ್ಟಣವನ್ನು ಇಂಡಿ ಜಿಲ್ಲಾ ಕೇಂದ್ರವನ್ನಾಗಿ ಹೊಸದಾಗಿ ಘೋಷಣೆ ಮಾಡಬೇಕು ಎಂದು ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.