ಜಗದೀಶ ವಿರಕ್ತಮಠ 

ಬೆಳಗಾವಿ(ಜ.24): ಅರ್ಹರಿಗಿಂತ ಅನರ್ಹರಿಗೆ ಸರ್ಕಾರಿ ಯೋಜನೆಗಳನ್ನು ನೀಡಿರುವುದು ಹಾಗೂ ಬಡವರ ಹೆಸರಿನಲ್ಲಿ ನಡೆದಿರುವ ಕೋಟ್ಯಂತರ ರು. ಅವ್ಯವಹಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಅಥವಾ ಜಿಪಂ ಸಿಇಒ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವುದು ಸಾಮಾನ್ಯ. ಆದರೆ ಸುಪ್ರಿಂ ಕೋರ್ಟ್‌ ನ್ಯಾಯಾಧೀಶರಿಗೆ, ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗೆ ಪತ್ರ ಬರೆಯುವ ಮೂಲಕ ಜಿಲ್ಲೆಯಲ್ಲಿನ ಆಡಳಿತ ವ್ಯವಸ್ಥೆಯ ಬಗ್ಗೆ ದೇಶದ ಪ್ರಮುಖರ ಗಮನಕ್ಕೆ ತಂದಿದ್ದಾರೆ ಇಲ್ಲಿನ ಜನರು.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೆರಹಟ್ಟಿ ಗ್ರಾಮದಲ್ಲಿ ನಡೆದಿರುವ ಕೋಟ್ಯಂತರ ರುಪಾಯಿ ಅವ್ಯವಹಾರ ತನಿಖೆ ನಡೆಸಿ ಗ್ರಾಪಂ ಸದಸ್ಯರು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಉನ್ನತ ಮಟ್ಟದ ಅಧಿಕಾರಿಗಳಿಗೆ, ಮುಖ್ಯಮಂತ್ರಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದಾರೆ. ಆದರೂ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ವಡೆರಹಟ್ಟಿ ಗ್ರಾಮದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಗ್ರಾಮದಲ್ಲಿ ನಡೆದ ಕಾಮಗಾರಿಗಳ ಎಲ್ಲ ಮಾಹಿತಿ ಪತ್ರಗಳೊಂದಿಗೆ ಜ.10ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ, ಪ್ರಧಾನಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಸೇರಿದಂತೆ ಸರ್ಕಾರದ ಪ್ರಮುಖ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಳುಹಿಸುವ ಮೂಲಕ ಜಿಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಡೆರಹಟ್ಟಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಅಧಿಕಾರಿಗಳು ಸೇರಿಕೊಂಡು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ (ನರೇಗಾ) ವಿದ್ಯಾರ್ಥಿಗಳು, ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿನ ನೌಕರರ ಹೆಸರಿನಲ್ಲಿ ನಕಲಿ ಜಾಬ್‌ ಕಾರ್ಡ್‌ಗಳನ್ನು ಸೃಷ್ಟಿಸಿ ಕೋಟ್ಯಂತರ ಅನುದಾನ ದುರುಪಯೋಗಪಡಿಸಿಕೊಂಡಿದ್ದಾರೆ. ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಗ್ರಾಮಕ್ಕೆ ಸಾವಿರ ಶೌಚಗೃಹಗಳ ಮಂಜೂರಾಗಿದ್ದವು. ಆದರೆ, ವಾಸ್ತವ್ಯದಲ್ಲಿ ಕೇವಲ 100 ಶೌಚಗೃಹಗಳನ್ನು ನಿರ್ಮಿಸಿ ಇನ್ನುಳಿದ 900 ಶೌಚಗೃಹಗಳನ್ನು ನಿರ್ಮಿಸಲಾಗಿದೆ ಎಂದು ನಕಲಿ ದಾಖಲೆ, ಛಾಯಾಚಿತ್ರಗಳನ್ನು ಸಲ್ಲಿಸಿ ಅನುದಾನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

17 ಪುಟಗಳ ವರದಿ ಸಲ್ಲಿಕೆ:

ಅವ್ಯವಹಾರ ನಡೆದಿರುವ ಬಗ್ಗೆ ದಾಖಲೆ ಸಮೇತ ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಲು ಮುಂದಾಗುತ್ತಿಲ್ಲ. ಆದ್ದರಿಂದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಆರ್ಟಿಕಲ್‌ 32ರ ಅಡಿಯ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ನ್ಯಾಯ ಕೊಡಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ಅಕ್ರಮ ಮದ್ಯದ ಅಂಗಡಿ, ಕಳಪೆ ಮಟ್ಟದ ಅಂಗನವಾಡಿ ಕಟ್ಟಡ, ಶ್ರೀಮಂತರಿಗೆ, ಗುತ್ತಿಗೆದಾರರಿಗೆ ಶೌಚಗೃಹ, ವಸತಿ ಮನೆಗಳು, ದನಗಳ ಸೆಡ್ಡು, ಪ್ರವಾಹ ಸಂತ್ರಸ್ತರ ಪರಿಹಾರದಲ್ಲಿ ಗೋಲ್‌ಮಾಲ್‌, ಅನರ್ಹರಿಗೆ ಪಿಂಚಣಿ ಸೇರಿದಂತೆ ಸುಮಾರು 10 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದ್ದು, ಸೂಕ್ತ ತನಿಖೆಗೆ ನಡೆಸಬೇಕು ಎಂದು ಸುಮಾರು 17 ಪುಟಗಳ ಸಮಗ್ರ ವರದಿಯನ್ನು ಕಳುಹಿಸಿದ್ದಾರೆ.

ಈಗಾಗಲೇ ಗ್ರಾಮದಲ್ಲಿ ವಾಸಿಸಲು ಎರಡೆರಡು ಸ್ವಂತ ಮನೆಗಳನ್ನು ಹೊಂದಿರುವ ಮತ್ತು ಅರ್ಥಿಕವಾಗಿ ಸಬಲರಾಗಿರುವವರಿಗೆ ಗ್ರಾಪಂ ಸದಸ್ಯರು, ಅಧಿಕಾರಿಗಳು ಪ್ರಧಾನ ಮಂತ್ರಿ ಅವಾಸ್‌ ಯೋಜನೆಯಡಿ ಮನೆಗಳನ್ನು ಹಂಚಿಕೆ ಮಾಡಿದ್ದಾರೆ. ಎಸ್‌ಸಿ, ಎಸ್‌ಟಿ ಸಮುದಾಯ ಬಡ ಕುಟುಂಬಗಳಿಗೆ ನೀಡಬೇಕಾಗಿದ್ದ ಮನೆಗಳನ್ನು ಸಾಮಾನ್ಯ ವರ್ಗದ ಶ್ರೀಮಂತರ ಪಾಲಾಗಿವೆ ಎಂದೂ ದೂರಿದ್ದಾರೆ.