ಸವದತ್ತಿ(ಮಾ.18): ಚೀನಾದಲ್ಲಿ ಉದ್ಯೋಗ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮರಳಿ ಗ್ರಾಮಕ್ಕೆ ಆಗಮಿಸಿದ್ದರಿಂದ ಗ್ರಾಮಸ್ಥರೆಲ್ಲರೂ ಆತನನ್ನು ಸಂಶಯಾಸ್ಪದವಾಗಿ ನೋಡುವ ಮೂಲಕ ಅವರಿಗೆ ಕೊರೋನಾ ವೈರಸ್ ತಾಕಿದೆ ಎಂದು ತಮ್ಮ ಹತ್ತಿರಕ್ಕೆ ಬಿಟ್ಟು ಕೊಳ್ಳದೆ ದೂರವಿಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿ ನಡೆದಿದೆ. 

ಚೀನಾದಲ್ಲಿ ಉದ್ಯೋಗ ಮಾಡುತ್ತಿದ್ದ ಮುನವಳ್ಳಿ ಗ್ರಾಮದ 32ರ ಹರೆಯದ ವ್ಯಕ್ತಿಯೊಬ್ಬರು ಮಾ.14ರಂದು ಸ್ವದೇಶಕ್ಕೆ ಮರಳಿದ್ದಾರೆ. ಮೊದಲು ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮಕ್ಕೆ ಆಗಮಿಸಿ ನಂತರ ಅದೇ ದಿನ ಸ್ವಗ್ರಾಮ ಸವದತ್ತಿ ತಾಲೂಕಿನ ಮುನವಳ್ಳಿಗೆ ಬಂದಿದ್ದಾರೆ. ಈ ವ್ಯಕ್ತಿ ಚೀನಾದಿಂದ ಆಗಮಿಸಿದ್ದಾನೆ ಎಂಬ ಮಾಹಿತಿ ಹರಡುತ್ತಿದ್ದಂತೆ ಗ್ರಾಮಸ್ಥರು ತಮಗೆಲ್ಲಿ ಕೊರೋನಾ ವೈರಸ್ ಅಂಟಿಕೊಳ್ಳುವುದೋ ಎಂಬ ಭಯದಿಂದ ದೂರ ಸರಿದು ಆರೋಗ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. 

ಟ್ರಕ್‌ ಹರಿದು ಸ್ಥಳದಲ್ಲೇ ಮೂವರ ಸಾವು: ಭಾರಿ ಅನುಹುತ ತಪ್ಪಿಸಿದ ಕೊರೋನಾ ವೈರಸ್‌!

ಕೊರೋನಾ ವೈರಸ್ ತಮಗೆ ಇಲ್ಲ ಎಂದು ಆ ವ್ಯಕ್ತಿ ಖಚಿತಪಡಿಸಿದರೂ ಜನರು ನಂಬುವ ಸ್ಥಿತಿಯಲ್ಲಿ ಇಲ್ಲದಾಗಿದ್ದರಿಂದ ಆರೋಗ್ಯ ಇಲಾಖೆಯವರು ಮತ್ತೊಮ್ಮೆ ಅವರನ್ನು ಪರೀಕ್ಷೆ ನಡೆಸಿ ಸೋಂಕು ಇಲ್ಲದಿರುವುದನ್ನು ಖಚಿತಪಡಿಸಿದ್ದಾರೆ. ಚೀನಾದಿಂದ ಮುನವಳ್ಳಿಗೆ ಆಗಮಿಸಿದ್ದ ವ್ಯಕ್ತಿಯ ಮನೆಗೆ ಧಾವಿಸಿದ ಆರೋಗ್ಯಾಧಿಕಾರಿಗಳು, ವ್ಯಕ್ತಿಯನ್ನು ಸಂಪೂರ್ಣವಾಗಿ ತಪಾಸಣೆ ಮಾಡಿ ಸೋಂಕು ಇಲ್ಲ ಎಂಬುದನ್ನು ದೃಢಪಡಿಸಿದ ಮೇಲೂ ಅಲ್ಲಿನ ಜನರ ನಡವಳಿಕೆ ಗಮನಿಸಿದ ಆರೋಗ್ಯಾಧಿಕಾರಿಗಳು ವ್ಯಕ್ತಿಯನ್ನು ಸವದತ್ತಿಯ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಮತ್ತೊಮ್ಮೆ ಪರೀಕ್ಷೆ ನಡೆಸಿದ್ದಾರೆ. 

ವ್ಯಕ್ತಿಯ ಜೊತೆಗೆ ಅವನ ತಂದೆ ತಾಯಿಯನ್ನು ಪರೀಕ್ಷೆ ಮಾಡಿ ಅವರಲ್ಲಿ ಕೊರೋನಾ ಸೋಂಕು ಇಲ್ಲದಿರುವುದನ್ನು ದೃಢಪಡಿಸಿದ್ದಾರೆ. ನಂತರ ಆ ವ್ಯಕ್ತಿಯನ್ನು ಅವರ ತೋಟದ ಮನೆಗೆ ಕಳಿಸಿಕೊಡಲಾಗಿದ್ದು, ಅಲ್ಲಿ ಅವರಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಾಯ್ದುಕೊಳ್ಳುವಂತೆ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. 

ಸ್ಪೇನ್‌ನ 21ರ ಫುಟ್ಬಾಲ್‌ ಕೋಚ್‌ ಬಲಿ ಪಡೆದ ಕೊರೋನಾ ವೈರಸ್..!

ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಕುರಿತು ವರದಿಯನ್ನು ತಹಸೀಲ್ದಾರರಿಗೆ ಒಪ್ಪಿಸಿದ್ದು, ಸಾರ್ವಜನಿಕರ ಹಿತದೃಷ್ಠಿಯಿಂದ ವ್ಯಕ್ತಿಯನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸಲಾಗಿದೆ. ಆ ವ್ಯಕ್ತಿ ಮತ್ತು ಅವರ ಸಂಬಂಧಿಕರಲ್ಲಿ ಕೊರೋನಾ ವೈರಸ್ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಾಗಿದ್ದು, ಅವರನ್ನು ಅವರ ತೋಟದ ಮನೆಗೆ ಕಳುಹಿಸಿಕೊಟ್ಟು ಅಲ್ಲಿ ಪ್ರತ್ಯೇಕ ವ್ಯವಸ್ಥೆ ಕೈಗೊಳ್ಳಲು ಸೂಚಿಸಲಾಗಿದೆ ಎಂದು ವರದಿಯಲ್ಲಿ ಹೇಳಿದ್ದಾರೆ.