ಘಟನಾ ಸ್ಥಳದ ಸುತ್ತಮುತ್ತ ಕ್ಯಾಮರಾ ಟ್ರ್ಯಾಪ್‌ಗಳ ಅಳ​ವ​ಡಿಕೆ| ಗ್ರಾಮಸ್ಥರಿಗೆ ಚಿರತೆ ಭೀತಿ| ಕರಡಿ, ಚಿರತೆ, ದಾಳಿಯಿಂದ ಬೇಸತ್ತಿರುವ ಜನರು ಗ್ರಾಮದ ಹೊರಗೆ ಒಬ್ಬೊಬ್ಬರೇ ಹೋಗಲು ಭಯಪಡುತ್ತಿದ್ದಾರೆ| ಹೊಲಗಳಿಗೆ ಹೋಗುವವರು ತಮ್ಮ ಜೀವಗಳನ್ನು ಕೈಯಲ್ಲಿ ಹಿಡಿದುಕೊಂಡು ಭಯದಲ್ಲೇ ಹೋಗುವಂತಹ ಪರಿಸ್ಥಿತಿ ಬಂದಿದೆ|

ಎಂ.ಅ​ಫ್ರೋಜ್‌ ಖಾನ್

ರಾಮ​ನ​ಗ​ರ(ಮೇ.18): ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಯಾವ ಭಾಗದಲ್ಲಿ ನೋಡಿದರೂ ಚಿರತೆ ದಾಳಿಯ ಮಾತುಗಳೇ ಕೇಳಿಬರುತ್ತಿವೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಚಿರತೆಗಳ ಸಂತಾನ ಹೆಚ್ಚಾಗಿದೆ. ಆಹಾರ ಅರಸಿ ನಾಡಿ​ನತ್ತ ಬಂದು ದಾಳಿ ಮಾಡು​ತ್ತಿ​ರುವ ಚಿರ​ತೆ​ಗಳು ನರ​ಭ​ಕ್ಷಕ ಆಗು​ತ್ತಿವೆ.

ಜಿಲ್ಲೆಯ ನಾಲ್ಕು ತಾಲೂಕುಗಳ​ಲ್ಲಿಯೂ ಚಿರತೆಗಳು ದಾಳಿ ಇಡುತ್ತಲೇ ಇವೆ. ಕುರಿ, ಮೇಕೆ, ದನ ಮೇಯಿಸುವವರನ್ನು ಕಾಡುತ್ತಲೇ ಇವೆ. ಬಹಳಷ್ಟು ಸಲ ಅವರ ಕಣ್ಣಿಗೂ ಬಿದ್ದಿವೆ. ಕುರಿ, ಮೇಕೆಗಳನ್ನು ಹೊತ್ತೊಯ್ದಿವೆ. ನಾಯಿಗಳನ್ನು ತಿಂದು ಹಾಕಿವೆ. ಮನು​ಷ್ಯರ ಮೇಲೆ ದಾಳಿ ನಡೆಸಿ ಗಾಯ​ಗೊ​ಳಿ​ಸು​ತ್ತಿದ್ದ ಚಿರ​ತೆ​ಗಳು ಇದೀಗ ಬಲಿ ಪಡೆ​ಯು​ತ್ತಿ​ವೆ.

ರಾಮನಗರ: ಮಲಗಿದ್ದ ಮಗು ಹೊತ್ತೊಯ್ದು ತಿಂದು ಭಕ್ಷಿಸಿದ ಚಿರತೆ..!

ಗುಂಡಿಟ್ಟು ಕೊಲ್ಲಲು ಒತ್ತಾಯ:

ಮಾಗಡಿ ತಾಲೂ​ಕಿ​ನಲ್ಲಿ ಕೇವಲ ಒಂದು ವಾರದ ಅವ​ಧಿ​ಯಲ್ಲಿ ಚಿರತೆ ಮಗು ಹಾಗೂ ವೃದ್ಧೆ​ಯ​ನ್ನು ಭಕ್ಷಿ​ಸಿದೆ. ಇದ​ರಿಂದ ಜನರು ಆತಂಕ​ದಲ್ಲಿಯೇ ದಿನ ಕಳೆ​ಯು​ವಂತಾ​ಗಿದೆ. ನರ ಭಕ್ಷಕ ಚಿರತೆ ಸೆರೆಗೆ ಕೂಂಬಿಂಗ್‌ ಅಥವಾ ಗುಂಡಿಟ್ಟು ಕೊಲ್ಲಬೇ​ಕೆಂಬ ಒತ್ತಾ​ಯವೂ ಕೇಳಿ​ಬ​ರು​ತ್ತಿದೆ.

ಮನುಷ್ಯರ ರಕ್ತದ ರುಚಿಯನ್ನು ಕಂಡಿರುವ ಚಿರತೆ, ಇದುವರೆಗೆ ಇಬ್ಬರನ್ನು ಬಲಿತೆಗೆದುಕೊಂಡಿದೆ. ಚಿರತೆ ದಾಳಿ ನಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ನಿರಂತರವಾಗಿ ಅರಣ್ಯ ಇಲಾಖೆಗೆ ಮನವಿಗಳ ಮೇಲೆ ಮನವಿ ಸಲ್ಲಿಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಗ್ರಾಮಸ್ಥರ ಪ್ರತಿಭಟನೆ ಮತ್ತು ಒತ್ತಡ ಹೆಚ್ಚಾದಾಗ ಬೋನಿಟ್ಟು ಹಿಡಿದು ಅರಣ್ಯಕ್ಕೆ ಬಿಡುವ ಒಂದೆರಡು ಪ್ರಕರಣಗಳನ್ನು ಬಿಟ್ಟರೆ ಉಳಿದಂತೆ ಏನೂ ಆಗಿಲ್ಲ. ಕರಡಿ, ಚಿರತೆ, ದಾಳಿಯಿಂದ ಬೇಸತ್ತಿರುವ ಜನರು ಗ್ರಾಮದ ಹೊರಗೆ ಒಬ್ಬೊಬ್ಬರೇ ಹೋಗಲು ಭಯಪಡುತ್ತಿದ್ದಾರೆ. ಹೊಲಗಳಿಗೆ ಹೋಗುವವರು ತಮ್ಮ ಜೀವಗಳನ್ನು ಕೈಯಲ್ಲಿ ಹಿಡಿದುಕೊಂಡು ಭಯದಲ್ಲೇ ಹೋಗುವಂತಹ ಪರಿಸ್ಥಿತಿ ಬಂದಿದೆ. ಕುರಿ, ಮೇಕೆ ಮೇಯಿಸುವವರು ಅರಣ್ಯದ ಅಂಚಿಗೆ ಹೋಗಲು ಹೆದರಿಕೊಳ್ಳುತ್ತಿದ್ದಾರೆ. ಅದು ಒಬ್ಬಂಟಿಯಾಗಿ ಹೋಗುವುದು ಹೇಗೆ ಎಂದು ಚಿಂತಾಕ್ರಾಂತರಾಗಿದ್ದಾರೆ.

ಕ್ಯಾಮರಾ ಟ್ರ್ಯಾಪ್‌ ಅಳ​ವ​ಡಿಕೆ

ನರ​ಭ​ಕ್ಷಕ ಚಿರ​ತೆ​ಯನ್ನು ಸೆರೆಹಿಡಿಯಲು ಮಾನವ-ಪ್ರಾಣ ಹಾನಿ ಘಟನೆ ನಡೆದ ಸ್ಥಳದ ಸುತ್ತಮುತ್ತ ಅರಣ್ಯ ಇಲಾಖೆ ಕ್ಯಾಮರಾ ಟ್ರ್ಯಾಪ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದರಿ ಪ್ರದೇಶದಲ್ಲಿ ಬೋನುಗಳನ್ನು ಇರಿಸಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಇಲಾಖಾ ಕ್ಷೇತ್ರಾಧಿಕಾರಿಗಳು ಹಲಗು-ರಾತ್ರಿ ಈಗಾಗಲೇ ಗಸ್ತು, ಪಹರೆ ತಿರುಗುವಂತೆ ಸೂಚಿಸಲಾಗಿದೆ. ಚಿರತೆ ಹಾವಳಿ ತಡೆಗಟ್ಟಲು ರಚಿಸಲಾಗಿರುವ ವನ್ಯಪ್ರಾಣಿ ಹಿಮ್ಮೆಟ್ಟಿಸುವ ತಂಡ ಕಾರ್ಯಾಚರಣೆ ತೀವ್ರ ಪ್ರಗತಿಯಲ್ಲಿದೆ. ಹೀಗಾಗಿ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ವನ್ಯಜೀವಿ ಪರಿಪಾಲಕರು ಕೋರಿದ್ದಾರೆ.

ಮಾಗಡಿ ತಾಲೂಕು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಚಿರತೆಗಳ ಹಾವಳಿ ಹೆಚ್ಚಾಗಿದೆ. ಕಳೆದವಾರ ಮಗುವನ್ನು ಕೊಂದಿರುವ ಹಾಗೂ ವೃದ್ಧೆಯನ್ನು ಕೊಂದಿರುವ ಚಿರತೆಯನ್ನು ಗುಂಡಿಕ್ಕಿ ಸಾಯಿಸಲು ಪ್ರಾಣಿದಯಾ ಸಂಘದವರು ಬಿಡುತ್ತಿಲ್ಲ. ಅದರೂ ಸಹ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಸಚಿ​ವರು ಅಧಿ​ಕಾ​ರಿ​ಗ​ಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡ್ದಿದಾರೆ ಎಂದು ಮಾಗಡಿ ಶಾಸ​ಕ ಎ.ಮಂಜು​ನಾಥ್‌ ಅವರು ಹೇಳಿದ್ದಾರೆ.

ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಸರ್ಕಾರ ಗುಂಡಿಕ್ಕಲು ಆದೇಶ ನೀಡಬೇಕು. ಇಲ್ಲದಿದ್ದರೆ, ಜನಗಳು ತಮ್ಮಲ್ಲಿರುವ ಬಂದೂಕಿನಿಂದ ಚಿರತೆಯನ್ನು ಸಾಯಿಸುತ್ತಾರೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಚಿರತೆಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನೆಲ​ಮಂಗಲ ಶಾಸ​ಕ ಶ್ರೀನಿ​ವಾ​ಸ​ಮೂರ್ತಿ ಅವರು ತಿಳಿಸಿದ್ದಾರೆ.