ಸಂದೀಪ್‌ ವಾಗ್ಲೆ

ಮಂಗಳೂರು[ಆ.18]: ಇಲ್ಲಿ ಶತಮಾನಗಳಿಂದ 40ಕ್ಕೂ ಅಧಿಕ ಆದಿವಾಸಿ ಕುಟುಂಬಗಳು ವಿದ್ಯುತ್‌ ಸಂಪರ್ಕವೇ ಇಲ್ಲದೆ ಕಗ್ಗತ್ತಲಲ್ಲಿ ಮುಳುಗಿದ್ದವು. ದಶಕಗಳ ಹೋರಾಟದ ಬಳಿಕ ಈ ವರ್ಷ ಜೂನ್‌ ತಿಂಗಳಲ್ಲಷ್ಟೇ ಅವರ ಮನೆಗಳಲ್ಲಿ ದೀಪ ಬೆಳಗಿತ್ತು. ಅದಾಗಿ ಎರಡೇ ತಿಂಗಳೊಳಗೆ ಬರ ಸಿಡಿಲಿನಂತೆ ಬಂದ ಮಹಾ ಪ್ರವಾಹಕ್ಕೆ ಹೊಚ್ಚ ಹೊಸ ವಿದ್ಯುತ್‌ ಕಂಬಗಳೇ ಮುರಿದುಬಿದ್ದು ಈ ‘ಕನಸಿನ ದೀಪ’ ಆರಿಬಿಟ್ಟಿದೆ.

ಚಾರ್ಮಾಡಿ ಘಾಟಿಯ 9ನೇ ತಿರುವಿನಿಂದ 10 ಕಿ.ಮೀ. ದೂರದಲ್ಲಿ ಪಶ್ಚಿಮ ಘಟ್ಟದೊಳಗಿನ ದಕ್ಷಿಣ ಕನ್ನಡದ ಕಟ್ಟಕಡೆಯ ಕುಗ್ರಾಮ ಬಾಂಜಾರುಮಲೆ ನಿವಾಸಿಗಳ ವಿಶಿಷ್ಟಸಂಕಷ್ಟವಿದು. ವಿದ್ಯುತ್‌ ಬಂದು ‘ಉಜ್ವಲ’ ಬದುಕಿನ ಕತೆ ಆರಂಭವಾಯಿತು ಎನ್ನುವಷ್ಟರಲ್ಲೇ ಈ ಕಾಡುಮಕ್ಕಳ ಕನಸನ್ನು ಪ್ರಕೃತಿಯೇ ಕಸಿದುಕೊಂಡಿದೆ.

ಆ.9ರಂದು ನೇತ್ರಾವತಿಯ ಉಪನದಿ ಅಣಿಯೂರು ಹೊಳೆ ಪ್ರವಾಹದಿಂದ ಬಾಂಜಾರುಮಲೆ ಸಂಪರ್ಕಿಸುವ ವಿದ್ಯುತ್‌ ಕಂಬಗಳು ಬಹುತೇಕ ಧರಾಶಾಹಿಯಾಗಿ ಹೇಳಹೆಸರಿಲ್ಲದಂತಾಗಿವೆ. ವಿದ್ಯುತ್‌ ಇಲ್ಲಿಗೆ ಬಂದದ್ದೇ ಬಲುಕಷ್ಟದ ಹೋರಾಟದಿಂದ, ಇನ್ನು ಮರುಜೋಡಣೆಗೆ ಇನ್ನೆಷ್ಟುಕಾಲ ಬೇಕೋ ಎನ್ನುವ ಆತಂಕ ಈ ಆದಿವಾಸಿಗಳನ್ನು ಕಾಡುತ್ತಿದೆ.

ಬೆಳಕು ಕಂಡು ಎರಡು ತಿಂಗಳೂ ಆಗಿರಲಿಲ್ಲ:

ಈ ಕುಟುಂಬಗಳಿಗೆ ಚಿಮಣಿ ದೀಪವೇ ಬದುಕಿನ ದೀಪವಾಗಿತ್ತು. ಪಶ್ಚಿಮ ಘಟ್ಟದಲ್ಲಿ ಸಂಜೆಯಾದಂತೆ ಸೀಳಿ ಕವಿಯುವ ಕಾರ್ಗತ್ತಲಲ್ಲಿ ಈ ಆದಿವಾಸಿಗಳು ಒಂದಿಲ್ಲೊಂದು ಭಯದಿಂದಲೇ ಬದುಕುತ್ತಿದ್ದರು. ವಿದ್ಯುತ್‌ ಸಂಪರ್ಕ ಬೇಕೆಂದು ಹೋರಾಟ ಮಾಡಿದರೂ ಖಾಸಗಿ ಎಸ್ಟೇಟುಗಳು ಅದಕ್ಕೆ ಅಡ್ಡಿಯಾಗಿದ್ದವು. ಕೊನೆಗೆ ಅಂಬಟೆಮಲೆ ಎಸ್ಟೇಟ್‌ ಕಡೆಯಿಂದ ಈ ವರ್ಷ 1.20 ಕೋಟಿ ವೆಚ್ಚದಲ್ಲಿ ವಿದ್ಯುತ್‌ ಜೋಡಣೆಯಾಗಿ ಜೂನ್‌ ತಿಂಗಳಲ್ಲಷ್ಟೇ ಕಾಮಗಾರಿ ಅಂತ್ಯಗೊಂಡು ಕತ್ತಲ ಗುಡಿಸಲುಗಳು ಬೆಳಕು ಕಂಡಿದ್ದವು.

ಸೇತುವೆ ಸಂಪರ್ಕ ಕಡಿತ:

ಒಂದೆಡೆ ವಿದ್ಯುತ್‌ ಸಂಪರ್ಕ ಕಡಿತವಾಗಿ ಕತ್ತಲಬಾಳು ಮತ್ತೆ ಅನುಭವಿಸುವ ಗೋಳಾದರೆ, ಇನ್ನೊಂದೆಡೆ ಬಂಜಾರುಮಲೆಯ ಸಂಪರ್ಕ ಸೇತುವೆಯೇ ಕಡಿದುಬಿಟ್ಟಿದೆ. ಈಗ ತಾತ್ಕಾಲಿಕವಾಗಿ ನದಿಗೆ ಸಂಪರ್ಕ ಕಲ್ಪಿಸಿದ್ದಾರಷ್ಟೆ. ಮತ್ತೆ ಜೋರು ಮಳೆ ಬಂದರೆ ಅದೂ ಕೊಚ್ಚಿಕೊಂಡು ಹೋಗುವ ಭೀತಿ ಇದ್ದೇ ಇದೆ.

ಮೆಸ್ಕಾಂ ಎಂಡಿ ಭರವಸೆ:

ಈಗ ಸಮರೋಪಾದಿಯಲ್ಲಿ ದುರಸ್ತಿ ಕೆಲಸ ನಡೆಯುತ್ತಿದೆ. ದುರ್ಗಮ ಪ್ರದೇಶಗಳಲ್ಲಿ ಸಾಮಗ್ರಿ ಕೊಂಡೊಯ್ಯಲು ಕಷ್ಟಕರವಾಗಿರುವುದರಿಂದ ಸ್ವಲ್ಪ ತಡವಾದರೂ ಬಾಂಜಾರುಮಲೆ ಸೇರಿದಂತೆ ಎಲ್ಲ ಕಡೆಗಳಲ್ಲಿ ವಿದ್ಯುತ್‌ ಮರು ಸಂಪರ್ಕಿಸುತ್ತೇವೆ ಎಂದು ಮೆಸ್ಕಾಂ ಎಂಡಿ ಏನೋ ಭರವಸೆ ನೀಡಿದ್ದಾರೆ. ಅದು ಕಾರ್ಯಗತವಾಗುತ್ತದೋ ಎಂಬುದನ್ನು ಕಾದು ನೋಡಬೇಕು.

ಬೆಳ್ತಂಗಡಿಯಲ್ಲೇ ಮೆಸ್ಕಾಂಗೆ 8.68 ಕೋಟಿ ನಷ್ಟ!

ಮಹಾಪ್ರವಾಹದಿಂದ ಮೆಸ್ಕಾಂಗೆ ಬೆಳ್ತಂಗಡಿ ತಾಲೂಕೊಂದರಲ್ಲೇ .6.68 ಕೋಟಿ ನಷ್ಟಉಂಟಾಗಿದೆ. ನೂರಾರು ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದೆ. ಸುಮಾರು 200-300ರಷ್ಟುಸಿಬ್ಬಂದಿ ವಿದ್ಯುತ್‌ ಮರುಜೋಡಣೆಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದಬೆಟ್ಟು, ದಿಡುಪೆಯಲ್ಲಿ ರಿಪೇರಿ ಕಾರ್ಯ ನಡೆದು ಶೀಘ್ರ ಸಂಪರ್ಕ ಸಾಧ್ಯವಾಗುವ ನಿರೀಕ್ಷೆಯಿದೆ.

ಆದರೆ ದಾರಿಯೇ ಕಡಿದುಕೊಂಡಿರುವ ಮಕ್ಕಿ, ಪರ್ತಿ, ದೈಪಿತ್ತಿಲು, ಎಲ್ಯರಕಂಡಗಳಲ್ಲಿ ನಾಲ್ಕೈದು ಕಿ.ಮೀ. ನಡೆದುಕೊಂಡೇ ಕಂಬ ಕೊಂಡೊಯ್ಯಬೇಕಾದ ಪರಿಸ್ಥಿತಿ. ಅದೇ ರೀತಿ ಮಲವಂತಿಗೆ, ಪೆರ್ನಡ್ಕ, ನಂದಿಕಾಡು, ಸಿಂಗನಾರಿನಲ್ಲೂ ಭೂಕುಸಿತಗಳಾಗಿ ದಾರಿ ಬಂದ್‌ ಆಗಿವೆ. ಸದ್ಯಕ್ಕಂತೂ ಇಲ್ಲಿ ವಿದ್ಯುತ್‌ ಭಾಗ್ಯ ಲಭಿಸುವ ಸಾಧ್ಯತೆಯಿಲ್ಲ ಎಂದು ಸ್ಥಳೀಯ ಮುಖಂಡರಾದ ಶೇಖರ ಲಾಯಿಲ ಹೇಳುತ್ತಾರೆ.