ರಾಮನಗರ [ಡಿ.27]:  ಜಿಲ್ಲೆಯ ಕನಕಪುರ ತಾಲೂಕಿನ ಚೀಲೂರು ಗ್ರಾಪಂ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಬಿ.ಆರ್‌. ರುದ್ರೇಶ್‌ ಅವರು ಪ್ರಥಮ ಪ್ರಯತ್ನದಲ್ಲಿಯೇ ಕೆಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರಸ್ತುತ ಮರಳವಾಡಿ ಹೋಬಳಿಯ ಚೀಲೂರು ಗ್ರಾಪಂ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಆರ್‌.ರುದ್ರೇಶ್‌ ತಮ್ಮ ಸಾಧನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ರುದ್ರೇಶ್‌ ಇದಕ್ಕೂ ಮುನ್ನ ಭಾರತೀಯ ಸೇನೆಯಲ್ಲಿ 16 ವರ್ಷಗಳ ಕಾಲ ಸೈನಿಕರಾಗಿ ಸೇವೆ ಸಲ್ಲಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ ತಾಲೂಕು ಅಂಜನಾಪುರದ ರಾಮಯ್ಯ- ವೆಂಕಟಲಕ್ಷ್ಮಮ್ಮ ಅವರ ಪುತ್ರರಾದ ರುದ್ರೇಶ್‌ ಅಂಜನಾಪುರದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರು ನಗರ ಜಿಲ್ಲೆ ಸಾರಕ್ಕಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ ಬೆಂಗಳೂರಿನ ಜಯನಗರದ ವಿಜಯ ಸಂಜೆ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣವನ್ನು ಪೂರೈಸಿದ್ದಾರೆ.

ಇದೀಗ ಪ್ರಥಮ ಪ್ರಯತ್ನದಲ್ಲಿಯೇ ಕೆಎಎಸ್‌ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ರುದ್ರೇಶ್‌ ವಾಣಿಜ್ಯ ಇಲಾಖೆಯಲ್ಲಿ ಸಹಾಯಕ ಕಮಿಷರ್‌ ಮತ್ತು ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ತಾಲ್ಲೂಕು ಅಧಿಕಾರಿಯಾಗಿ ನಿಯೋಜಿತರಾಗಿದ್ದಾರೆ.

ಕಾಂಗ್ರೆಸಲ್ಲಿ ಐದೇ ನಿಮಿಷದಲ್ಲಿ ಟೋಪಿ ತೆಗೆದುಬಿಡ್ತಾರೆ: ಡಿಕೆಶಿ...

ಅಭಿನಂದನೆ: ಕೆಎಎಸ್‌ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆ ಅಲಂಕರಿಸುತ್ತಿರುವ ಬಿ.ಆರ್‌.ರುದ್ರೇಶ್‌ ಅವರನ್ನು ಕಂದಾಯ ಇಲಾಖೆಯ ನೌಕರರ ಸಂಘದ ರಾಮನಗರ ಜಿಲ್ಲಾಧ್ಯಕ್ಷ ರಮೇಶ್‌, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಮೋಹನ್‌, ಮಾಗಡಿ ತಾಲೂಕು ಅಧ್ಯಕ್ಷ ವೆಂಕಟೇಶ್‌, ಕನಕಪುರ ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್‌, ಪದಾಧಿಕಾರಿಗಳಾದ ರಾಜಶೇಖರ್‌, ಶಿವಕುಮಾರ್‌, ಪ್ರವೀಣ್‌, ಸಿದ್ದೇಗೌಡ, ಶಿವು, ರವಿ, ವೀರೇಶ್‌ ಕುಮಾರ್‌ ಮತ್ತಿತರರು ಅಭಿನಂದಿಸಿದ್ದಾರೆ.

ಕೆಎಎಸ್‌ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಲು ಸಾಕಷ್ಟುಅಧ್ಯಯನ ಹಾಗೂ ಆಳವಾದ ಅರಿವು ಅಗತ್ಯ. ಈ ದಿಕ್ಕಿನಲ್ಲಿ ಸತತ ಪರಿಶ್ರಮ ಹಾಗೂ ನಿರಂತರ ಪ್ರಯತ್ನದ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೂಡ ನನ್ನ ಕೈ ಹಿಡಿಯಿತು. ನನ್ನ ಈ ಸಾ​ಧನೆಯ ಹಿಂದೆ ನನ್ನ ಕುಟುಂಬದ ಎಲ್ಲ ಸದಸ್ಯರು, ಹಿತೈಷಿಗಳು, ವಿಶೇಷವಾಗಿ ಸ್ನೇಹಿತರು ಮತ್ತು ಸಹೋದ್ಯೋಗಿಗಳು ಬೆಂಬಲವಾಗಿ ನಿಂತು ಎಲ್ಲ ಸಂದರ್ದಲ್ಲಿಯೂ ನನಗೆ ಉತ್ತೇಜನ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಬಯಸುತ್ತೇನೆ.

-ಬಿ.ಆರ್‌.ರುದ್ರೇಶ್‌, ಕೆಎಎಸ್‌ ಅಧಿಕಾರಿ