ಹಳಿಯಿಂದ ಕಿಡಿ ಹಾರಿ ರೈಲು ಎಂಜಿನ್‌ಗೆ ಬೆಂಕಿ!
ಹಳಿಯಿಂದ ಕಿಡಿ ಹಾರಿ ರೈಲು ಎಂಜಿನ್‌ಗೆ ಬೆಂಕಿ| ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ದುರಂತ
ವಿಜಯಪುರ[ಸೆ.13]: ರೈಲೊಂದರ ಎಂಜಿನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರಿ ದುರಂತ ತಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಬಳಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಗದಗ- ಸೊಲ್ಲಾಪುರ ಪ್ಯಾಸೆಂಜರ್ (ಸಂಖ್ಯೆ 71304) ರೈಲು ಬೆಳಗ್ಗೆ 7.54ಕ್ಕೆ ಇಂಡಿ ತಾಲೂಕಿನ ಲಚ್ಯಾಣದಿಂದ 2 ಕಿ.ಮೀ. ಕ್ರಮಿಸುತ್ತಿದ್ದಂತೆಯೇ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ತಕ್ಷಣ ರೈಲನ್ನು ನಿಲ್ಲಿಸಿ, ಇತರೆ ಸಿಬ್ಬಂದಿಗೆ ವಿಷಯ ತಿಳಿಸಿ ಬೆಂಕಿ ನಂದಿಸಿದ್ದಾರೆ. ಇದರಿಂದ ಒಂದೂವರೆ ತಾಸು ಲಚ್ಯಾಣದಲ್ಲಿಯೇ ಪ್ಯಾಸೆಂಜರ್ ರೈಲು ನಿಂತಿತು.
ಸೊಲ್ಲಾಪುರದಿಂದ ವಿಜಯಪುರಕ್ಕೆ ಬರುತ್ತಿದ್ದ ಬಸವ ಎಕ್ಸ್‌ಪ್ರೆಸ್ ರೈಲನ್ನು ತಡವಲಗಾದಲ್ಲಿಯೇ ನಿಲ್ಲಿಸಿ ಅದರ ಎಂಜಿನ್ ಅನ್ನು ತಂದು ಪ್ಯಾಸೆಂಜರ್ ರೈಲಿಗೆ ಜೋಡಿಸಿ ಸೊಲ್ಲಾಪುರಕ್ಕೆ ಕಳುಹಿಸಲಾಯಿತು. ಹಳಿ ಕ್ರಾಸಿಂಗ್ ಮಾಡುವಾಗ ಹಳಿಯಿಂದ ಶಾಖ ಉತ್ಪತ್ತಿಯಾಗಿ ಕಿಡಿ ಹಾರಿದೆ. ಆಗ ಎಂಜಿನ್‌ನಲ್ಲಿ ಕಿಡಿ ಕಾಣಿಸಿಕೊಂಡಿದೆ. ಇದು ಸಣ್ಣ ಘಟನೆ. ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ವಿಜಯಪುರ ರೈಲ್ವೆ ಪೊಲೀಸ್ ಮೂಲಗಳು ತಿಳಿಸಿವೆ.