ವಿಜಯಪುರ(ಅ.3): ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹಾದ್ದೂರ್‌ ಶಾಸ್ತ್ರಿಯವರ ಜನ್ಮ ದಿನ ಅಂಗವಾಗಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಬುಧವಾರ ಬೆಳಗ್ಗೆ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್‌ ನಿರ್ಮೂಲನಾ ವಿಜಯಪುರ ಸ್ವಚ್ಛತಾ ಕಾರ್ಯದಲ್ಲಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಅವರು ಸ್ವತಃ ಕಸ ಹಾಗೂ ಪ್ಲಾಸ್ಟಿಕ್‌ ಸಂಗ್ರಹಿಸುವುದರ ಮೂಲಕ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ನಗರದ ಗಾಂಧಿಚೌಕ್‌ನಿಂದ ಜೈನ್‌ ಮಂದಿರ ರಸ್ತೆ, ಕಿರಾಣಾ ಬಜಾರ್‌, ನಾಲಬಂದ್‌ ಚೌಕ್‌ ಸೇರಿದಂತೆ ವಿವಿಧ ವೃತ್ತಗಳಿಗೆ ತೆರಳಿ ಕೊನೆಗೆ ನೆಹರು ಮಾರುಕಟ್ಟೆ ತರಕಾರಿ ಬಜಾರ್‌ಗೆ ಆಗಮಿಸಿ ಅಲ್ಲಿನ ಬೀದಿ ಬದಿಯ ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್‌ ಬಳಸದಂತೆ ಎಚ್ಚರಿಕೆ ನೀಡಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಪ್ಲಾಸ್ಟಿಕ್‌ ಆರೋಗ್ಯಕ್ಕೆ ತುಂಬ ಅಪಾಯಕಾರಿ. ಇದು ಕೊಳೆಯದ ವಸ್ತು ಆಗಿದ್ದರಿಂದ ಇದರ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಆದ್ದರಿಂದ ಬೀದಿ ಬದಿಯ ವ್ಯಾಪಾರಸ್ಥರು ಸೇರಿದಂತೆ ಕಿರಾಣಿ ಅಂಗಡಿ, ಹೋಟೆಲ್‌, ಬೇಕರಿ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಳಸದಂತೆ ಸೂಚನೆ ನೀಡಿದರು.

ಜಿಲ್ಲೆಯಾದ್ಯಂತ ಪ್ಲಾಸ್ಟಿಕ್‌ ಬಳಕೆಗೆ ನಿಷೇಧ ಹೇರಿದ್ದು, ಕಾನೂನು ಉಲ್ಲಂಘಿಸಿ ಪ್ಲಾಸ್ಟಿಕ್‌ ಬಳಕೆಗೆ ಮುಂದಾದರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.  ಇದೇ ಸಂದರ್ಭದಲ್ಲಿ ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿಯೂ ಕೂಡ ಸ್ವಚ್ಛತಾ ಕಾರ್ಯಕ್ರಮವು ವಿಭಾಗೀಯ ನಿಯಂತ್ರಣಾಧಿಕಾರಿ ಗಂಗಾಧರ ಮುಂದಾಳತ್ವದಲ್ಲಿ ಜರುಗಿತು. 

ಗಾಂಧೀಜಿ ಪ್ರತಿಮೆಗೆ ಪುಷ್ಪಾರ್ಪಣೆ

ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಹಾಗೂ ಲಾಲ್‌ಬಹಾದ್ದೂರ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಬುಧವಾರ ಬೆಳಗ್ಗೆ 8.30ಕ್ಕೆ ನಗರದ ಗಾಂಧಿ ಚೌಕ್‌ನಲ್ಲಿರುವ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಕಾರ್ಯಕ್ರಮ ನೆರವೇರಿಸಲಾಯಿತು.

ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಕಾಸ ಸುರಳಕರ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನೇಮಗೌಡ, ಅಪರ ಜಿಲ್ಲಾಧಿಕಾರಿ ಎಚ್‌.ಪ್ರಸನ್ನ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಔದ್ರಾಮ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್‌, ಆಹಾರ ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ರಿಯಾಜ ಫಾರೂಕಿ, ಎಸ್‌.ಸಿ.ರಾಠೋಡ, ನಾಗೇಶ ಡೋಣು, ಗಿರೀಶ ಕುಲಕರ್ಣಿ, ಭೀಮರಾಯ ಜಿಗಜಿಣಗಿ, ಭಾರತಿ ಟಂಕಸಾಲಿ, ಮಲ್ಲಿಕಾರ್ಜುನ ಬಟಗಿ, ಮಳಸಿದ್ದ ನಾಯ್ಕೋಡಿ, ಈರಣ್ಣ ಹಿಪ್ಪರಗಿ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗೌರವ ಸೂಚಕವಾಗಿ ಭಾರತ ಸೇವಾದಳದ ಸರ್ವಧರ್ಮ ಪ್ರಾರ್ಥನೆ ಹಾಗೂ ಗಾಂಧಿ ಭಕ್ತಿಗೀತೆ ಹಾಡಿ ಗೌರವ ಸಲ್ಲಿಸಲಾಯಿತು.