ಉಚಿತ ಪಡಿತರ ಉತ್ಪಾದನಾ ವಲಯಕ್ಕೆ ಹೊಡೆತ|ಆಕ್ಸಿಜನ್‌ ಕೊರತೆಗೆ ಕೃತಕ ಅಭಾವ ಸೃಷ್ಟಿಕಾರಣ| . ಸರಕು-ಸಾಗಣೆ ಕ್ಷೇತ್ರದ ಮೇಲೂ ವ್ಯತಿರಿಕ್ತ ಪರಿಣಾಮ| ಪ್ರಧಾನಿ ಮೋದಿ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಕೊರೋನಾ ನಿಯಂತ್ರಣಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ: ಸಂಕೇಶ್ವರ| 

ಹುಬ್ಬಳ್ಳಿ(ಏ.26): ಉಚಿತ ಪಡಿತರ ಘೋಷಣೆಯಿಂದಾಗಿ ಕಾರ್ಮಿಕರು ಕೆಲಸಕ್ಕೆ ಬಾರದೆ ಉತ್ಪಾದನಾ ವಲಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಉದ್ಯಮಿ ವಿಜಯ ಸಂಕೇಶ್ವರ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಲಾಕ್‌ಡೌನ್‌ ವೇಳೆಯೂ ಕೇಂದ್ರ ಸರ್ಕಾರ ಮೂರು ತಿಂಗಳು ಉಚಿತ ಪಡಿತರ ನೀಡಿತು. ಈ ಬಾರಿಯೂ 80 ಕೋಟಿ ಜನರಿಗೆ ಉಚಿತ ಪಡಿತರ ಘೋಷಿಸಿದೆ. ಇದರಿಂದ ಉದ್ಯೋಗವಿದ್ದರೂ ಕಾರ್ಮಿಕರು ಕೆಲಸಕ್ಕೆ ಬರುವುದಿಲ್ಲ ಎಂದರು. ಸಂಕಷ್ಟದ ವೇಳೆ ಸರ್ಕಾರ ನೆರವುಬೇಕು. ಆದರೆ, ಈ ವೇಳೆ ಕಾರ್ಮಿಕರಿಗೆ ಸಾಕಷ್ಟು ಕೆಲಸ ಇದೆ. ಇಂತಹ ಸಂದರ್ಭದಲ್ಲಿ ಪುಕ್ಕಟೆಯಾಗಿ ಸೌಲಭ್ಯಗಳನ್ನು ನೀಡುವುದು ಸರಿಯಲ್ಲ. ಇದರಿಂದ ಉತ್ಪಾದನಾ ವಲಯ ಕುಸಿಯುತ್ತದೆ. ಸರಕು-ಸಾಗಣೆ ಕ್ಷೇತ್ರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಸೋನಾ ಮಸೂರಿ ಅಕ್ಕಿ ಲಭ್ಯ..!

ಕೃತಕ ಅಭಾವ ಸೃಷ್ಟಿಕಾರಣ:

ದೇಶದಲ್ಲಿ ಆಕ್ಸಿಜನ್‌ ಕೊರತೆಯಾಗುತ್ತಿದೆ ಎಂದರೆ ಅದಕ್ಕೆ ಕೃತಕ ಅಭಾವ ಸೃಷ್ಟಿಯೇ ಕಾರಣ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್‌ ಉತ್ಪಾದಿಸುವ ಲಿಂಡಾ ಕಂಪನಿಯ ಪ್ರಕಾರ ಶೇ.99ರಷ್ಟುಆಕ್ಸಿಜನ್‌ ಕೈಗಾರಿಕೆಗಳಿಗೆ ವ್ಯಯವಾಗುತ್ತದೆ. ಶೇ.1ರಷ್ಟು ಮಾತ್ರ ಆಸ್ಪತ್ರೆಗಳಿಗೆ ಬಳಕೆ ಆಗುತ್ತಿದೆ. ಸರ್ಕಾರ ಆಸ್ಪತ್ರೆಗಳಿಗೆ ಮಾತ್ರ ಆಕ್ಸಿಜನ್‌ ನೀಡುವಂತೆ ಸೂಚಿಸಿ ಉತ್ತಮ ಕಾರ್ಯ ಮಾಡಿದೆ. ಈ ಬಗ್ಗೆ ಇನ್ನಷ್ಟುನಿಗಾ ಅಗತ್ಯ ಎಂದರು.

ಇಂತಹ ಸಂದರ್ಭದಲ್ಲಿ ಚುನಾವಣಾ ರಾರ‍ಯಲಿ, ಕುಂಭ ಮೇಳ ಮಾಡುವುದು ಸರಿಯಲ್ಲ. ಸರ್ಕಾರವನ್ನು ದೂಷಿಸುವುದು ಸುಲಭ. ಆದರೆ ನಾವು ಎಷ್ಟು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದೇವೆ ಎನ್ನುವುದು ಮುಖ್ಯ. ಸರ್ಕಾರ ನಿರ್ಧಾರ ತೆಗೆದುಕೊಳ್ಳುವಲ್ಲಿ ಎರಡ್ಮೂರು ದಿನ ವಿಳಂಬವಾಗಿರಬಹುದು. ಕೆಲವು ಕಡೆ ಲೋಪ-ದೋಷಗಳು ಇರುತ್ತವೆ. ಕಮಿಷನ್‌ ವ್ಯವಹಾರ ಸಹ ನಡೆಯುತ್ತವೆ ಎಂದು ವಿಷಾಧಿಸಿದರು.

ಕೋವಿಡ್‌ ತಡೆಗಾಗಿ ಸರ್ಕಾರ ಸಾಕಷ್ಟು ಶ್ರಮ ವಹಿಸುತ್ತಿದೆ. ಪ್ರಧಾನಿ ಮೋದಿ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಕೊರೋನಾ ನಿಯಂತ್ರಣಕ್ಕಾಗಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈ ವೇಳೆಯೂ ಕೆಲವೆಡೆ ವೈದ್ಯರು, ಮಧ್ಯವರ್ತಿಗಳು ಅವ್ಯವಹಾರ ನಡೆಸುತ್ತ ಸರ್ಕಾರದ ಗೌರವಕ್ಕೆ ಕುಂದುಂಟು ಮಾಡುತ್ತಿದ್ದಾರೆ ಎಂದು ದೂರಿದರು.