ಮತ್ತೊಂದು ಚುನಾವಣೆ: ಗರಿಗೆದರಿದ ರಾಜಕೀಯ ಚಟುವಟಿಕೆ
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಘೋಷಣೆ ಹಿನ್ನೆಲೆ| ಮೂರು ಪಕ್ಷಗಳಲ್ಲಿ ಚಟುವಟಿಕೆ ಚುರುಕು| ಪ್ರಚಾರದಲ್ಲಿ ಮುಂದೆ ಇರುತ್ತಿದ್ದ ಬಿಜೆಪಿ, ಪಶ್ಚಿಮ ಪದವೀಧರ ಕ್ಷೇತ್ರದ ವಿಷಯದಲ್ಲಿ ಹಿಂದುಳಿದಿದೆ| ಉಳಿದೆರಡು ಪಕ್ಷಗಳಿಂದ ಅಭ್ಯರ್ಥಿಗಳ ಘೋಷಣೆ|
ಶಿವಾನಂದ ಗೊಂಬಿ
ಹುಬ್ಬಳ್ಳಿ(ಸೆ.30): ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಕೊನೆಗೂ ಘೋಷಣೆಯಾಗಿದೆ. ಅಕ್ಟೋಬರ್ 28ಕ್ಕೆ ಚುನಾವಣೆ ನಡೆಯಲಿದೆ. ಇದರಿಂದ ಎಲ್ಲ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿದೆ. ಆದರೆ ಪ್ರತಿ ಚುನಾವಣೆಯಲ್ಲೂ ಅಭ್ಯರ್ಥಿ ಘೋಷಣೆ, ಪ್ರಚಾರದಲ್ಲಿ ಮುಂದೆ ಇರುತ್ತಿದ್ದ ಬಿಜೆಪಿ, ಪಶ್ಚಿಮ ಪದವೀಧರ ಕ್ಷೇತ್ರದ ವಿಷಯದಲ್ಲಿ ಹಿಂದುಳಿದಿದೆ. ಉಳಿದೆರಡು ಪಕ್ಷಗಳು ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿವೆ. ಅವರು ಕೂಡ ಪ್ರಚಾರಕ್ಕೂ ಚಾಲನೆ ನೀಡಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಆರು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಧಾರವಾಡ, ಹಾವೇರಿ, ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗಳನ್ನೊಳಗೊಂಡ ಕ್ಷೇತ್ರವಿದು. ಹಾಗೆ ನೋಡಿದರೆ ಈ ಚುನಾವಣೆಯೂ ಜೂನ್ ತಿಂಗಳಲ್ಲೇ ನಡೆಯಬೇಕಿತ್ತು. ಆದರೆ ಕೊರೋನಾ ಹಾವಳಿಯಿಂದ ಚುನಾವಣೆ ನಡೆಯಲಿಲ್ಲ. ಇನ್ನು ಲಾಕ್‌ಡೌನ್ ಮುಂಚೆ ಕೊಂಚ ಈ ಚುನಾವಣೆ ಬಗ್ಗೆ ತಲೆಕೆಡಿಸಿಕೊಂಡು ಸಭೆ ನಡೆಸಿದ್ದ ಬಿಜೆಪಿ ಲಾಕ್‌ಡೌನ್ ಬಳಿಕ ಸುಮ್ಮನೆ ಕುಳಿತುಬಿಟ್ಟಿತ್ತು.
ಪಕ್ಷದಲ್ಲಿ ನಿಕಟಪೂರ್ವ ಸದಸ್ಯ ಎಸ್.ವಿ. ಸಂಕನೂರ ಮತ್ತು ಲಿಂಗರಾಜ ಪಾಟೀಲ, ಮೋಹನ ಲಿಂಬಿಕಾಯಿ, ಭೋಜರಾಜ ಕರೂದಿ ಸೇರಿದಂತೆ ಹಲವರ ಹೆಸರು ಟಿಕೆಟ್‌ಗಾಗಿ ಕೇಳಿ ಬಂದಿತ್ತು. ಆದರೆ ಸಂಕನೂರ ಅವರನ್ನೇ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು ಎಂಬ ಬೇಡಿಕೆ ಒಂದು ಗುಂಪು ಮಾಡಿತ್ತು. ಮುಖಂಡರ ಅಭಿಪ್ರಾಯ ಪಡೆದಿರುವ ಪಕ್ಷದ ವರಿಷ್ಠರು, ಕಾರ್ಯಕರ್ತರ ಸಮೀಕ್ಷೆ ನಡೆಸಿದ್ದುಂಟು. ಆದರೆ ಟಿಕೆಟ್ ಮಾತ್ರ ಘೋಷಣೆ ಮಾಡಿಲ್ಲ. ಇದು ಆಕಾಂಕ್ಷಿಗಳಲ್ಲಿ ಗೊಂದಲವನ್ನುಂಟು ಮಾಡಿದೆ. ಯಾರಿಗೆ ಟಿಕೆಟ್ ಎಂಬ ಗೊಂದಲ ಬಗೆಹರಿದರೆ ಚುನಾವಣೆ ಸಿದ್ಧತೆಯನ್ನು ಸಲೀಸಾಗಿ ಮಾಡಿಕೊಳ್ಳಬಹುದು ಎಂದು ಅಭಿಪ್ರಾಯಪಡುವ ಕಾರ್ಯಕರ್ತರು, ಸಂಕನೂರ ನಿಕಟಪೂರ್ವ ಸದಸ್ಯರಾಗಿರುವ ಕಾರಣ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ ಎಂದೂ ಹೇಳುತ್ತಾರೆ.
ಹುಬ್ಬಳ್ಳಿ: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಬಿಗ್ ಫೈಟ್!
ಆದರೆ ಬಿಜೆಪಿ ಹೈಕಮಾಂಡ್ ಹೆಚ್ಚಾಗಿ ಅಚ್ಚರಿ ಕೊಡುವುದೇ ಜಾಸ್ತಿ. ಹಾಲಿ ಸದಸ್ಯ, ಮಾಜಿ ಸದಸ್ಯ ಎಂಬುದನ್ನೆಲ್ಲ ನೋಡದೇ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ಘೋಷಣೆ ಮಾಡಿದಂತೆ ಇಲ್ಲೂ ಯಾರ ಸ್ಮೃತಿಪಟಲದಲ್ಲಿ ಇಲ್ಲದವರ ಹೆಸರು ಘೋಷಿಸಿ ಇವರೇ ನಮ್ಮ ಅಭ್ಯರ್ಥಿ ಎನ್ನುವುದನ್ನು ತಳ್ಳಿಹಾಕುವಂತಿಲ್ಲ ಎಂಬ ಮಾತು ಬಿಜೆಪಿ ವಲಯದಲ್ಲೇ ಕೇಳಿಬರುತ್ತಿದೆ. ಆದರೂ ಸಂಕನೂರ ಅವರು ತಮಗೆ ಟಿಕೆಟ್ ಸಿಗಲಿದೆ ಎಂಬ ಭರವಸೆ ಮೇರೆಗೆ ಪ್ರಚಾರದಲ್ಲಿ ತೊಡಗಿದ್ದಾರೆ.
ಕಾಂಗ್ರೆಸ್- ಜೆಡಿಎಸ್:
ಇನ್ನು ಈ ಕ್ಷೇತ್ರದಿಂದ ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ, ಮೂರು ಬಾರಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರ್.ಎಂ. ಕುಬೇರಪ್ಪ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದಾರೆ. ಹಾಗೆ ನೋಡಿದರೆ ಕುಬೇರಪ್ಪ ಬಿಜೆಪಿ ಮೂಲದವರು. ಆದರೆ ಅಲ್ಲಿ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಎಂಬ ಕಾರಣದಿಂದಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದುಂಟು. ಇದೀಗ ಕಾಂಗ್ರೆಸ್‌ನಿಂದ ಕಣಕ್ಕಿಳಿಯುತ್ತಿದ್ದಾರೆ. ಪಕ್ಷವೂ ಈಗಾಗಲೇ ಇವರ ಹೆಸರನ್ನು ಅಖೈರುಗೊಳಿಸಿ ಘೋಷಣೆಯನ್ನೂ ಮಾಡಿದೆ. ಇವರು ಕೂಡ ಪ್ರಚಾರವನ್ನೂ ಶುರು ಮಾಡಿದ್ದಾರೆ.
ಜೆಡಿಎಸ್‌ನಿಂದ ಅಣ್ಣಿಗೇರಿ ಮೂಲದ ಶಿವಶಂಕರ ಕಲ್ಲೂರ ಕಣಕ್ಕಿಳಿಯಲಿದ್ದಾರೆ. ಇವರನ್ನು ಪಕ್ಷದ ಅಭ್ಯರ್ಥಿಯೆಂದು ಈ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರೇ ಪ್ರಕಟಿಸಿದ್ದರು. ಕಲ್ಲೂರ ಕೂಡ ಪ್ರಚಾರ ಆರಂಭಿಸಿದ್ದುಂಟು.
ಒಟ್ಟಿನಲ್ಲಿ ಕೊರೋನಾಂತಕದ ನಡುವೆಯೇ ಪಶ್ಚಿವ ಪದವೀಧರ ಕ್ಷೇತ್ರದ ಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್, ಜೆಡಿಎಸ್ ಪ್ರಚಾರ ಶುರು ಹಚ್ಚಿಕೊಂಡಿವೆ. ಆದರೆ ಬಿಜೆಪಿ ಅಭ್ಯರ್ಥಿಯನ್ನೂ ಬಿಡುಗಡೆ ಮಾಡಿಲ್ಲ. ಇದರಿಂದ ಸಹಜವಾಗಿ ಪ್ರಚಾರದಲ್ಲಿ ಹಿಂದೆ ಉಳಿದಿರುವುದಂತೂ ಸತ್ಯ.
ಅದೃಷ್ಟ ಪರೀಕ್ಷೆಗೆ ಗುರಿಕಾರ ಸಿದ್ಧತೆ
ಅಖಿಲ ಭಾರತ ಶಿಕ್ಷಕರ ಫೆಡರೇಶನ್ ಉಪಾಧ್ಯಕ್ಷರೂ ಹಾಗೂ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಬಸವರಾಜ ಗುರಿಕಾರ ಕೂಡ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ತಮ್ಮ ಅದೃಷ್ಟಪರೀಕ್ಷಿಸಲಿದ್ದಾರೆ. ಶಿಕ್ಷಕರಾಗಿ ನಿವೃತ್ತಿ ಹೊಂದಿರುವ ಗುರಿಕಾರ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡವರು. ಪದವೀಧರರು ಹಾಗೂ ಶಿಕ್ಷಕ ಸಮುದಾಯಕ್ಕೆ ಹತ್ತಿರವಾಗಿದ್ದಾರೆ. ಈ ಸಲ ಬಿಜೆಪಿಯಿಂದ ಟಿಕೆಟ್ ಪಡೆಯಲು ಪ್ರಯತ್ನಿಸಿದ್ದುಂಟು. ಆದರೆ ಅಲ್ಲೇ ಆಕಾಂಕ್ಷಿಗಳು ಜಾಸ್ತಿ ಇರುವ ಕಾರಣ ಹಾಗೂ ಹಾಲಿ ಸದಸ್ಯ ಸಂಕನೂರಗೆ ಟಿಕೆಟ್ ಎಂಬ ಮಾತು ಕೇಳಿಬಂದಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ರಾಜಕೀಯ ಪಕ್ಷಗಳಿಗೆ ಸಡ್ಡು ಹೊಡೆಯಲಿದ್ದಾರೆ. ಚುನಾವಣೆಗೆ ಸಂಬಂಧಪಟ್ಟಂತೆ ಗುರಿಕಾರ ಕೂಡ ಈಗಾಗಲೇ ತಯಾರಿ ನಡೆಸಿದ್ದುಂಟು.
ಕಾಂಗ್ರೆಸ್ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿ ಈಗಾಗಲೇ ಆರು ತಿಂಗಳೇ ಆಗಿದೆ. ಅದಕ್ಕೆ ತಕ್ಕಂತೆ ಚುನಾವಣೆ ಪ್ರಚಾರ ನಡೆಸುತ್ತಿದ್ದೇನೆ. ಈ ಸಲ ನನ್ನ ಗೆಲುವು ಖಚಿತ. ನಾಲ್ಕು ಜಿಲ್ಲೆಗಳಲ್ಲೂ ಒಂದೆರಡು ಸುತ್ತು ಪ್ರಚಾರವನ್ನೂ ಮುಗಿಸಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಆರ್.ಎಂ. ಕುಬೇರಪ್ಪ ಅವರು ತಿಳಿಸಿದ್ದಾರೆ.
ನಮ್ಮ ಪಕ್ಷ ಇನ್ನೂ ಅಭ್ಯರ್ಥಿ ಹೆಸರನ್ನು ಘೋಷಿಸಿಲ್ಲ. ಆದರೆ ಹಾಲಿ ಸದಸ್ಯ ನಾನೇ ಆಗಿರುವುದರಿಂದ ನನ್ನನ್ನೇ ಅಭ್ಯರ್ಥಿಯನ್ನಾಗಿ ಮಾಡಲಿದೆ ಎಂಬ ವಿಶ್ವಾಸವಿದೆ. ಇದರೊಂದಿಗೆ ಪ್ರಚಾರ ನಡೆಸುವಂತೆ ವರಿಷ್ಠರು ತಿಳಿಸಿರುವುದರಿಂದ ಪ್ರಚಾರವನ್ನೂ ಪ್ರಾರಂಭಿಸಿದ್ದೇನೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ವಿ. ಸಂಕನೂರ ಅವರು ತಿಳಿಸಿದ್ದಾರೆ.
ನಾನೂ ಪ್ರಚಾರ ನಡೆಸುತ್ತಿದ್ದೇನೆ. ಯುವ ಸಮೂಹ ಈ ಸಲ ತಮ್ಮನ್ನು ಬೆಂಬಲಿಸುತ್ತದೆ ಎಂಬ ವಿಶ್ವಾಸವಿದೆ. ನಮ್ಮ ಪಕ್ಷದ ವರಿಷ್ಟರಾದ ಎಚ್.ಡಿ. ದೇವೇಗೌಡರು, ಕುಮಾರಸ್ವಾಮಿ, ಬಸವರಾಜ ಹೊರಟ್ಟಿಸೇರಿದಂತೆ ಮತ್ತಿತರರ ಸಹಕಾರ, ಮಾರ್ಗದರ್ಶನದಿಂದ ಪ್ರಚಾರ ನಡೆಸುತ್ತಿದ್ದೇನೆ ಎಂದು ಜೆಡಿಎಸ್ ಅಭ್ಯರ್ಥಿ ಶಿವಶಂಕರ ಕಲ್ಲೂರ ಹೇಳಿದ್ದಾರೆ.