ಹುಬ್ಬಳ್ಳಿ(ಜ.11): ಹುಬ್ಬಳ್ಳಿ-ಧಾರವಾಡ ಮಹಾನಗರದ ಮಧ್ಯೆ 2018 ರ ಅ. 2ರಿಂದ ಪ್ರಾಯೋಗಿಕವಾಗಿ ಸಂಚರಿಸುತ್ತಿರುವ ಬಿಆರ್‌ಟಿಎಸ್ ಬಸ್‌ಗಳಿಗೆ ಫೆ. 2ರಂದು ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಿಆರ್‌ಟಿಎಸ್ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೆಂಗಳೂರಿನಲ್ಲಿ ಇತ್ತೀಚಿಗೆ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ಆಹ್ವಾನ ನೀಡಿದ್ದೇವೆ. ಅದಕ್ಕೆ ಅವರು ಸ್ಪಂದಿಸಿ ಫೆ. 2ರಂದು ಮಧ್ಯಾಹ್ನ 3 ರಿಂದ 4 ರವರೆಗೆ ಸಮಯ ನೀಡಿದ್ದಾರೆ. ಈ ವೇಳೆಯೇ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಂದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಇತರ ಗಣ್ಯಮಾನ್ಯರು ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಉತ್ತಮ ಸೇವೆ: 

ಬಿಆರ್‌ಟಿಎಸ್ ಸೇವೆಯನ್ನು ಕಳೆದೊಂದು ವರ್ಷದಿಂದ ಪ್ರಾಯೋಗಿಕವಾಗಿ ಆರಂಭಿಸಿ, ಜನರಿಂದ ಮಾಹಿತಿ ಪಡೆಯಲಾಗಿದೆ. ಹಲವು ಕುಂದು ಕೊರತೆಗಳನ್ನು ನಿವಾರಿಸಲಾಗಿದೆ. 2012 ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಯೋಜನೆಗೆ ಅನುಮತಿ ನೀಡಲಾಗಿತ್ತು. ಒಟ್ಟು ₹ 970.82  ಕೋಟಿ ವೆಚ್ಚದ ಯೋಜನೆ ಇದಾಗಿದೆ. ವಿಶ್ವಬ್ಯಾಂಕ್ ಶೇ. 33ರಷ್ಟು ಹಣ ಅಂದರೆ 324.42 ಕೋಟಿ ಹಣವನ್ನು ಯೋಜನೆಗೆ ಸಾಲವಾಗಿ ನೀಡಿದೆ. ರಾಜ್ಯ ಸರ್ಕಾರ ಉಳಿದ ಹಣವನ್ನು ತನ್ನ ಬಜೆಟ್‌ನಲ್ಲಿ ನೀಡಿದೆ ಎಂದು ವಿವರಿಸಿದರು. 

178 ಕೋಟಿಯನ್ನು ಬಸ್ ಖರೀದಿಗೆ ನಿಗದಿಪಡಿಸಲಾಗಿತ್ತು. ಇದರಲ್ಲಿ ಕೇಂದ್ರ ಸರ್ಕಾರದ ಜವಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಯೋಜನೆಯಡಿ 78 ಕೋಟಿ ನೀಡಿದೆ. ಸದ್ಯ 33 ಕೋಟಿ ವೆಚ್ಚದಲ್ಲಿ 55 ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿ ಮಾಡಲಾಗಿದ್ದು ಸದ್ಯದಲ್ಲೇ ವಾಹನಗಳು ಸಂಸ್ಥೆ ಸೇರಲಿವೆ ಎಂದು ನುಡಿದರು.

ಸದ್ಯ ನಷ್ಟದಲ್ಲಿದೆ: 

ಮಹಾನಗರದ ನಡುವೆ 32 ಬಸ್ ನಿಲ್ದಾಣಗಳು, 2 ಬಸ್ ಡಿಪೋಗಳು, ಬಸ್ ಟರ್ಮಿನಲ್, ಡಿವಿಜನಲ್ ವರ್ಕ್‌ಶಾಪ್, ರಿಜಿನಲ್ ಇಂಟರ್‌ಚೇಂಜ್, ರಿಜಿನಲ್ ಟರ್ಮಿನಲ್, 6 ಪುಟ್ ಓವರ್ ಬ್ರಿಡ್ಜ್, ಕಂಟ್ರೋಲ್ ರೂಮ್, ಸಿಟಿ ಸರ್ವಿಸ್ ಡಿಪೋಗಳಿವೆ. 150 ಕಿಮೀ ಸಂಪರ್ಕ ರಸ್ತೆಗಳನ್ನು ಯೋಜನೆಯಡಿ ನಿರ್ಮಿಸಲಾಗಿದೆ. ಸದ್ಯ 100 ಬಸ್ ಮಹಾನಗರದ ಮಧ್ಯ ಕಾರ್ಯಾಚರಣೆ ನಡೆಸುತ್ತಿವೆ. 

ಪ್ರತಿದಿನ 10.41 ಲಕ್ಷ ಆದಾಯವಾಗುತ್ತಿದೆ. ಪ್ರತಿದಿನ ಸುಮಾರು 1ಲಕ್ಷ ಪ್ರಯಾಣಿಕರು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಬಸ್ ಕಾರ್ಯಾಚರಣೆಗೆ ಪ್ರತಿದಿನ 17.85 ಲಕ್ಷ ವ್ಯಯವಾಗುತ್ತಿದೆ. ಪ್ರತಿ ತಿಂಗಳು ಬಿಆರ್‌ಟಿಸ್ ಯೋಜನೆಗೆ 5 ಕೋಟಿ ವೆಚ್ಚವಾಗುತ್ತಿದ್ದು, 3 ಕೋಟಿ ಆದಾಯ ಬರುತ್ತಿದೆ. 2 ಕೋಟಿ ನಷ್ಟ ಸಂಭವಿಸುತ್ತಿದೆ. ರಾಜ್ಯದಲ್ಲಿ ಉತ್ತಮ ಸಾರಿಗೆ ಸೇವೆಯನ್ನು ಬಿಆರ್ ಟಿಎಸ್ ಮೂಲಕ ಜನರಿಗೆ ನೀಡಲಾಗುತ್ತಿದೆ. 

ಬಿಎಂಟಿಸಿ ನಗರ ಸಾರಿಗೆಯಲ್ಲಿ ಎಸಿ ಬಸ್‌ಗಳಲ್ಲಿ ಪ್ರತಿ ಕಿ.ಮೀ.ಗೆ 3.72 ದರ ವಿಧಿಸಲಾಗುತ್ತಿದೆ. ಬಿಆರ್ ಟಿಎಸ್‌ನಲ್ಲಿ ಪ್ರತಿ ಕಿ.ಮೀ. 1.18 ದರ ನಿಗದಿ ಮಾಡಲಾಗಿದೆ. ಅತಿ ಕಡಿಮೆ ದರದಲ್ಲಿ ಜನರಿಗೆ ಉತ್ತಮ ಸಾರಿಗೆ ಸೇವೆ ಲಭಿಸುತ್ತಿದೆ. ಸಾರ್ವಜನಿಕ ಸಾರಿಗೆ ಸಂಸ್ಥೆಗಳನ್ನು ಯಾವುದೇ ನಷ್ಟ ಹಾಗೂ ಲಾಭಗಳಿಲ್ಲದೆ ನಡೆಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. 

6.50 ಕೋಟಿಯನ್ನು ನವಲೂರು ಬ್ರಿಡ್ಜ್ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿ ಅಭಿಪ್ರಾಯ ಪಡೆದು ಬ್ರಿಡ್ಜ್ ನಿರ್ಮಿಸಲಾಗುವುದು. ಧಾರವಾಡ ಟೋಲ್‌ನಾಕಾ ಬಳಿ ಮಳೆಗಾಲದಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿ ಸಂಚಾರಕ್ಕೆ ತೊಂದರೆ ಉಂಟಾಗುವುದು. ಇದನ್ನು ಸರಿಪಡಿಸಿ ನಾಲಾ ನಿರ್ಮಿಸಲು ಪಾಲಿಕೆ 1.30 ಕೋಟಿಯನ್ನು ಸಂಸ್ಥೆಯಿಂದ ನೀಡಲಾಗಿದೆ ಎಂದು ಹೇಳಿದರು. 

ಗೋಷ್ಠಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಶಾಸಕರಾದ ಬಸವರಾಜ ಹೊರಟ್ಟಿ, ಸಿ.ಎಂ. ನಿಂಬಣ್ಣವರ, ಪ್ರಸಾದ ಅಬ್ಬಯ್ಯ, ಬಿಆರ್ ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಸೇರಿದಂತೆ ಹಲವರಿದ್ದರು.