ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ(ಮಾ.18): ತನ್ನ ನಿದ್ರೆಭಂಗ ಮಾಡುವವರಿಗೆ ಕಾಣುವಂತೆ ಇಂಥದೊಂದು ಎಚ್ಚರಿಕೆಯ ಸಂದೇಶ ಬರೆದ ಹಾಳೆಯ ಹೊದ್ದು ಮಲಗುತ್ತಿದ್ದ ಕನ್ನಡ ನಾಡು ನುಡಿಯ ಚೌಕಿದಾರ ಇದೀಗ ಚಿರನಿದ್ರೆಗೆ ಜಾರಿದ್ದಾರೆ. ಅವರು ನೀಡಿದ ಎಚ್ಚರಿಕೆ ಮಾತ್ರ ನಾಡಿನ ಜನತೆಯ ಕಣ್ಣ ಮುಂದಿದೆ! 

'ಪಾಪುಗೆ ರಾಜ್ಯ ಸರ್ಕಾರ ಅಪಚಾರ: ಯಡಿಯೂರಪ್ಪ ರಾಜ್ಯದ ಜನತೆಯ ಕ್ಷಮೆ ಕೋರಬೇಕು'

ಡಾ.ಪಾಟೀಲ ಪುಟ್ಟಪ್ಪ ರಾತ್ರಿಹೊತ್ತು ಪ್ರೆಸ್ಸಿನಲ್ಲಿ ಇಂಥದ್ದೊಂದು ಎಚ್ಚರಿಕೆ ಸಂದೇಶ ಬರೆದ ಹಾಳೆಯನ್ನು ಹೊದ್ದು ನೆಲದ ಮೇಲೆ ಮಲಗುತ್ತಿದ್ದರು ಎನ್ನುವುದು ಊಹೆಗೆ ನಿಲುಕದ ಸತ್ಯ. 1950ರಲ್ಲಿ ಹುಬ್ಬಳ್ಳಿಯಿಂದ ಹೊರಡುತ್ತಿದ್ದ ‘ನವಯುಗ’ ಪತ್ರಿಕೆಯ ಸಂಪಾದಕರಾಗಿದ್ದಾಗ ಬೆಳಗ್ಗೆ 10 ಗಂಟೆಯ ಸುಮಾರಿಗೆ ಕಚೇರಿಗೆ ಹೋಗುತ್ತಿದ್ದರು. ಮಧ್ಯಾಹ್ನ ಊಟಕ್ಕೆ ಬಂದರೆ ಬಂದರು, ಇಲ್ಲದಿದ್ದರೆ ಇಲ್ಲ. ಸಂಜೆ ಚುರುಮುರಿ, ಮಿರ್ಚಿ

ಭಜ್ಜಿಯೇ ಹೊಟ್ಟೆಗೆ ಆಧಾರ! 

ಬರೆಯುವುದು, ಗ್ಯಾಲಿ ತಿದ್ದುವುದು, ಪುಟ ಕಟ್ಟಿಸುವುದು, ನ್ಯೂಸ್‌ಪ್ರಿಂಟ್‌ ಕಟ್‌ ಮಾಡಿಸುವುದು, ಕೊನೆಗೆ ಪತ್ರಿಕೆ ಪ್ರಿಂಟ್‌ ಮಾಡಿಸಿ, ಬಂಡಲ್‌ ಕಟ್ಟಿಸಿ ಆಯಾ ಊರಿಗೆ ಕಳಿಸುವ ಹೊತ್ತಿಗೆ ನಡುರಾತ್ರಿ 2 ಗಂಟೆ ಸರಿಯುತ್ತಿತ್ತು. ಆ ಅಪರಾತ್ರಿಯಲ್ಲಿ ಮನೆಗೆ ಹೋಗುವುದು ಕಷ್ಟವಾಗುತ್ತಿದ್ದರಿಂದ ಅಲ್ಲೇ ನೆಲದ ಮೇಲೆಯೇ ಹಾಳೆಗಳ ಮಧ್ಯೆ ಮಲಗುತ್ತಿದ್ದರು. ಉಪಯೋಗಕ್ಕೆ ಬಾರದ ಒಂದು ದೊಡ್ಡ ಹಾಳೆಯಲ್ಲಿ ದೊಡ್ಡದೊಡ್ಡ ಅಕ್ಷರಗಳಲ್ಲಿ ‘ನನ್ನನ್ನು ಎಬ್ಬಿಸಬೇಡಿ, ಎಚ್ಚರ!’ 
ಎಂದು ಬರೆದು ಅದನ್ನು ಎದೆ ಮತ್ತು ಮುಖದ ಮೇಲೆ ಹೊದ್ದು ನಿದ್ರೆಗೆ ಜಾರುತ್ತಿದ್ದರು. ಇಡೀ ದಿನ ದುಡಿಮೆಯಿಂದ ದಣಿದ ದೇಹ ಸೊಳ್ಳೆ, ತಿಗಣೆಗಳನ್ನು ಲೆಕ್ಕಿಸದೇ ಗಾಢವಾಗಿ ನಿದ್ರಿಸುತ್ತಿತ್ತು. ಈ ಎಚ್ಚರಿಕೆಯ ಹಕೀಕತ್ತು ಗೊತ್ತಿದ್ದ ಪ್ರೆಸ್ಸಿನ ಕಸಗುಡಿಸುವವರೂ ಬೆಳಗ್ಗೆ ಇವರನ್ನು ಎಬ್ಬಿಸುವ ಧೈರ್ಯ ಮಾಡುತ್ತಿರಲಿಲ್ಲ.