Asianet Suvarna News Asianet Suvarna News

ರಾಣಿಬೆನ್ನೂರು: 7 ತಿಂಗಳಾದರೂ ಕಸ ಸಂಗ್ರಹಿಸದ ವಾಹನಗಳು!

ಹಾವೇರಿ ಜಿಲ್ಲೆಯ ರಾಣಿಬೆನ್ನೂರು ನಗರಸಭೆಯಲ್ಲಿ 19 ವಾಹನ ಖರೀದಿದರೂ ಸಾರ್ವಜನಿಕ ಸೇವೆಗಿಲ್ಲ| ಚಾಲಕರು ಹಾಗೂ ಸಹಾಯಕರು ನೇಮಕಾತಿಯ ಕುರಿತು ಗೊಂದಲ| ರಾಜ್ಯದ ಎಲ್ಲೆಡೆ ಮೂಲದಲ್ಲಿಯೇ ಕಸವನ್ನು ಪ್ರತ್ಯೇಕಿಸಿ ಸಂಗ್ರಹಿಸಲು ಅನುಕೂಲವಾಗುವಂತೆ ವಾಹನಗಳ ವ್ಯವಸ್ಥೆ|  

Vehicles Did Not Collect Garbage for Last 7 Months in Ranibennur in  Haveri Districtgg
Author
Bengaluru, First Published Sep 16, 2020, 12:39 PM IST

ಸಂತೋಷ ಮಹಾಂತಶೆಟ್ಟರ

ರಾಣಿಬೆನ್ನೂರು(ಸೆ.16): ನಗರದಲ್ಲಿ ಪ್ರತಿದಿನ ಸಂಗ್ರಹವಾಗುವ ಕಸವನ್ನು ಮೂಲದಲ್ಲಿಯೇ ಒಣ ಮತ್ತು ಹಸಿ ಕಸವೆಂದು ವಿಂಗಡಿಸಿ ಸಂಗ್ರಹಿಸಲು ಅನುಕೂಲವಾಗುವ ಉದ್ದೇಶದಿಂದ ಆ ರೀತಿಯ ವ್ಯವಸ್ಥೆ ಇರುವ 19 ವಾಹನಗಳನ್ನು ನಗರಸಭೆ ಖರೀದಿಸಿದೆ. ಆದರೆ ವಾಹನಗಳನ್ನು ಖರೀದಿಸಿ 7 ತಿಂಗಳು ಕಳೆದರೂ ಕಸ ಸಂಗ್ರಹಣಾ ಕೆಲಸಕ್ಕೆ ಬಳಕೆ ಮಾಡದೇ ನಗರಸಭೆ ಆವರಣದಲ್ಲಿ ನಿಂತಿವೆ.

ಇದುವರೆಗೂ ಕಸವನ್ನು ಪ್ರತ್ಯೇಕಿಸಿ ನೀಡುವಂತೆ ಜನರಿಗೆ ಧ್ವನಿವರ್ಧಕದ ಮೂಲಕ ತಿಳಿವಳಿಕೆ ನೀಡಲಾಗುತ್ತಿತ್ತು. ಆದರೆ ಜನರು ಪ್ರತ್ಯೇಕಿಸಿ ನೀಡಿದರೂ ಅದನ್ನು ಸಂಗ್ರಹಿಸಲು ವಾಹನದಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಸ್ಥಳೀಯ ನಗರಸಭೆ ಸೇರಿದಂತೆ ರಾಜ್ಯದ ಎಲ್ಲೆಡೆ ಮೂಲದಲ್ಲಿಯೇ ಕಸವನ್ನು ಪ್ರತ್ಯೇಕಿಸಿ ಸಂಗ್ರಹಿಸಲು ಅನುಕೂಲವಾಗುವಂತೆ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಎರಡು ಭಾಗಗಳಿದ್ದು, ಒಂದರಲ್ಲಿ ಒಣ ಕಸವನ್ನು ಮತ್ತೊಂದರಲ್ಲಿ ಹಸಿ ಕಸವನ್ನು ಸಂಗ್ರಹಿಸಲಾಗುತ್ತದೆ. ಸ್ಥಳೀಯ ನಗರಸಭೆಯಲ್ಲಿ ‘ಸ್ವಚ್ಛ ಭಾರತ’ ಮಿಷನ್‌ ಯೋಜನೆಯಡಿ ಈ ರೀತಿಯ 19 ಹೊಸ ವಾಹನಗಳನ್ನು ಖರೀದಿಸಲಾಗಿದೆ.

ಪ್ರತಿದಿನ ಸಂಗ್ರಹವಾಗುವ ತ್ಯಾಜ್ಯ:

ನಗರದಲ್ಲಿ ಪ್ರತಿದಿನ ಸರಾಸರಿ 60 ಟನ್‌ ತ್ಯಾಜ್ಯ(ಹಸಿ ಮತ್ತು ಒಣ ಕಸ ಸೇರಿದಂತೆ) ಸಂಗ್ರಹವಾಗುತ್ತದೆ. ನಗರಸಭೆಯಲ್ಲಿ 30 ಕಾಯಂ ಹಾಗೂ 124 ನೇರ ಪಾವತಿ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಂದ ನಗರದ ಸ್ವಚ್ಛತೆ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ವಿಲೇವಾರಿ ನಿಯಮ 2016ನ್ನು ಜಾರಿಗೆ ತಂದಿದ್ದು, ಅದರ ಪ್ರಕಾರ ತ್ಯಾಜ್ಯ ಉತ್ಪತ್ತಿ ಮಾಡುವವರೇ ಅದರ ವಿಲೇವಾರಿ ಜವಾಬ್ದಾರಿ ಹೊಂದಿರುತ್ತಾರೆ. ಅದಕ್ಕಾಗಿ ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕನು ತಾನು ಉತ್ಪಾದಿಸುವ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ಪ್ರತ್ಯೇಕಿಸಿ ನಗರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡತಕ್ಕದ್ದು. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಹೊಸ ಕಾಯಿದೆ ಪ್ರಕಾರ ದಂಡ ವಿಧಿಸಬಹುದು ಮತ್ತು ತ್ಯಾಜ್ಯ ಉತ್ಪಾದಿಸುವ ಪ್ರತಿಯೊಬ್ಬರೂ ಅದರ ನಿರ್ವಹಣೆಗೆ ಸೇವಾ ಶುಲ್ಕ ಭರಿಸಬೇಕಾಗುತ್ತದೆ.

ಹಾವೇರಿ: ಲಾಕ್‌ಡೌನ್‌ನಲ್ಲಿ ಹೆಚ್ಚಿದ ಕ್ಷೀರೋತ್ಪಾದನೆ..!

ನಿಂತಲ್ಲೇ ನಿಂತ ವಾಹನಗಳು:

ಕಳೆದ ಏಳು ತಿಂಗಳಿನಿಂದ ವಾಹನಗಳು ನಿಂತಲ್ಲೇ ನಿಂತುಕೊಂಡಿವೆ. ವಾಹನಗಳ ನೋಂದಣಿಗೆ ಕೆಲವೊಂದು ತಿಂಗಳ ಕಾಲ ಕಳೆದರೆ ಸದ್ಯ ವಾಹನಗಳಿಗೆ ಚಾಲಕರು ಹಾಗೂ ಸಹಾಯಕರು ನೇಮಕಾತಿಯ ಕುರಿತು ಗೊಂದಲ ನಡೆದಿದೆ. ಹೀಗಾಗಿ ಆದಷ್ಟು ಬೇಗನೆ ವಾಹನಗಳು ಕಸ ಸಂಗ್ರಹಣೆ ಕೆಲಸಕ್ಕೆ ಓಡಾಡಬೇಕು ಎಂಬುವುದು ಸಾರ್ವಜನಿಕರ ಒತ್ತಾಯವಾಗಿದೆ.

ಈ ಬಗ್ಗೆ ಮಾತನಾಡಿದ ರಾಣಿಬೆನ್ನೂರು ನಗರಸಭೆಯ ಪೌರಾಯುಕ್ತ ಡಾ. ಮಹಾಂತೇಶ ಅವರು, ಒಣ ಹಾಗೂ ಹಸಿ ಕಸ ಸಂಗ್ರಹಣಾ ಉದ್ದೇಶದಿಂದ 19 ವಾಹನಗಳನ್ನು ಖರೀದಿಸಲಾಗಿದೆ. ಈಗಾಗಲೇ ವಾಹನಗಳ ನೋಂದಣಿ ಕಾರ್ಯ ಮುಗಿದಿದೆ. ವಾಹನಗಳಿಗೆ ಅವಶ್ಯವಿರುವ ಚಾಲಕರು ಹಾಗೂ ಸಹಾಯಕರು ನೇಮಕಾತಿಯ ಕುರಿತು ಟೆಂಡರ್‌ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ. ಆದಷ್ಟುಬೇಗ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios