ಬೆಂಗಳೂರು [ಆ.21]:  ಕ​ಬ್ಬನ್‌ ಉ​ದ್ಯಾ​ನ​ದಲ್ಲಿ ವಾಹನಗಳ ಸಂಚಾರದಿಂದ ಹೆ​ಚ್ಚು​ತ್ತಿ​ರುವ ವಾ​ಯು​ಮಾ​ಲಿನ್ಯ ನಿ​ಯಂತ್ರಿ​ಸಲು ಪ್ರತಿ ತಿಂಗ​ಳ ನಾ​ಲ್ಕನೇ ಶ​ನಿ​ವಾ​ರ ಉ​ದ್ಯಾ​ನ​ದಲ್ಲಿ ವಾ​ಹನ ಸಂಚಾರ ನಿ​ಷೇಧಿ​​​ಸಲು ರಾಜ್ಯ ತೋ​ಟ​ಗಾ​ರಿಕೆ ಇ​ಲಾಖೆ ಚಿಂತನೆ ನ​ಡೆ​ಸಿ​ದೆ.

ಕಳೆದ ಮೂರು ವರ್ಷಗಳ ಹಿಂದೆ ಪ್ರತಿ ಭಾನುವಾರ ಮತ್ತು ಎರಡನೇ ಶನಿವಾರ ಕಬ್ಬನ್‌ ಪಾರ್ಕ್ಗೆ ವಾಹನಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ನಾಲ್ಕನೇ ಶನಿವಾರ ಸಹ ವಾಹನ ಸಂಚಾರ ನಿಷೇಧ ಮಾಡಲು ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ ನಾಲ್ಕನೇ ಶನಿವಾರವೂ ಸರ್ಕಾರಿ ರಜೆಯನ್ನಾಗಿ ಘೋಷಿಸಿದ ಪರಿಣಾಮ ಉದ್ಯಾನಕ್ಕೆ ಬರುವವರ ಸಂಖ್ಯೆಯೂ ಹೆಚ್ಚಾಗಿದ್ದು, ಹಿರಿಯ ನಾಗರಿಕರಿಗೆ ವಾಹನಗಳ ನಡುವೆ ರಸ್ತೆ ದಾಟುವುದು ಕಷ್ಟಸಾಧ್ಯವಾಗುತ್ತಿದೆ. ಆದ್ದರಿಂದ ನಾಲ್ಕನೇ ಶನಿವಾರವೂ ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಲಾಲ್‌ಬಾಗ್‌ ಮಾದರಿಯಲ್ಲಿ ಕಬ್ಬನ್‌ ಉದ್ಯಾನವನದಲ್ಲಿಯೂ ನಾಲ್ಕನೇ ಶನಿವಾರ ವಾಹನ ಸಂಚಾರಕ್ಕೆ ನಿಷೇಧ ಹೇರಬೇಕು ಎಂಬುದು ಇಲಾಖೆಯ ಉದ್ದೇಶವಾಗಿದೆ. ಆದರೆ, ತಕ್ಷಣ ಅದು ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಂಪೂರ್ಣ ವಾಹನ ಸಂಚಾರ ನಿಷೇಧ ಹೇರುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತೋಟಗಾರಿಕೆ ಇಲಾಖೆಯ ಪ್ರಭಾರಿ ಕಾರ್ಯದರ್ಶಿಯಾಗಿರುವ ರಾಜೇಂದ್ರಕುಮಾರ್‌ ಕಠಾರಿಯಾ ಅವರು ಸ್ವಾತಂತ್ರ್ಯ ದಿನಾಚರಣೆ ದಿನದಂದು ಕಬ್ಬನ್‌ ಉದ್ಯಾನವನಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ವಾಹನ ದಟ್ಟಣೆ ಗಮನಿಸಿದ್ದರು. ಅಲ್ಲದೆ, ಉದ್ಯಾನದಲ್ಲಿ ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆ ಪರಿಶೀಲಿಸಿ ನಾಲ್ಕನೇ ಶನಿವಾರವೂ ವಾಹನ ಸಂಚಾರ ನಿಷೇಧಕ್ಕೆ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

 ಎಲ್ಲ ಪ್ರವೇಶ ದ್ವಾರಗಳೂ ಬಂದ್‌

ಈಗಾಗಲೇ ಬಾಲಭವನದ ದ್ವಾರವನ್ನು ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಸರ್ಕಾರದಿಂದ ಆದೇಶ ಬಂದಲ್ಲಿ ಮುಂದಿನ ದಿನಗಳಲ್ಲಿ ಹಡ್ಸನ್‌ ವೃತ್ತದ ದ್ವಾರ, ಪ್ರೆಸ್‌ಕ್ಲಬ್‌ ದ್ವಾರ, ಎಂ.ಎಸ್‌.ಬಿಲ್ಡಿಂಗ್‌ ದ್ವಾರ, ಹೈಕೋರ್ಟ್‌ ದ್ವಾರ ಹಾಗೂ ಕೆ.ಆರ್‌.ವೃತ್ತ ದ್ವಾರ ಸೇರಿ ಆರು ಪ್ರವೇಶ ದ್ವಾರಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗುವುದು. ಅಲ್ಲದೆ, ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕರಿಗೆ ಮಾಹಿತಿ ಫಲಕ ಅಳವಡಿಸಲಾಗುವುದು ಎಂದು ಅವರು ಹೇಳಿದರು.

ಪ್ರತಿ ತಿಂಗಳ ನಾಲ್ಕನೇ ಶನಿವಾರ ಕಬ್ಬನ್‌ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಬೇಕು ಎಂದು ಕಳೆದ ಆರು ತಿಂಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೀಗ ಮತ್ತೊಂದು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂಬಂಧ ಸರ್ಕಾರ ಮತ್ತು ಪೊಲೀಸ್‌ ಇಲಾಖೆಯಿಂದ ಸಕಾರಾತ್ಮಕವಾಗಿ ಪ್ರತಿಕ್ರಿಯೆ ಲಭ್ಯವಾಗಿದೆ.

-ಜಿ.ಕುಸುಮಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ(ಕಬ್ಬನ್‌ ಪಾರ್ಕ್).