ಬೆಂಗಳೂರು(ಅ.14): ಪೂರೈಕೆ ಕೊರತೆಯಾಗಿ ನವರಾತ್ರಿ ಹಬ್ಬಕ್ಕೂ ಮುನ್ನವೇ ಗಗನಕ್ಕೇರಿದ್ದ ದಿನನಿತ್ಯ ಬಳಕೆಯ ತರಕಾರಿ, ಸೊಪ್ಪಿನ ಬೆಲೆ ಸಗಟು ಮಾರುಕಟ್ಟೆಯಲ್ಲಿ ಕಡಿಮೆಯಾಗಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಜನರನ್ನು ತಲ್ಲಣಗೊಳಿಸಿದೆ.

ಕಳೆದ ಒಂದು ತಿಂಗಳಿನಿಂದ ತರಕಾರಿಗಳ ಬೆಲೆ ದಿನದಿಂದ ದಿನಕ್ಕೆ ಏರುಗತಿಯಲ್ಲೇ ಸಾಗುತ್ತಿದೆ. ನವರಾತ್ರಿ ಸಮಯದಲ್ಲಿ ತರಕಾರಿ ಬೆಲೆ ಏರಿಕೆ ಸಾಮಾನ್ಯ. ಆದರೆ, ಈ ಬಾರಿ ಒಂದು ತಿಂಗಳಿಗೆ ಮುನ್ನವೇ ದರ ಹೆಚ್ಚಳಗೊಂಡಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಇದೀಗ ತರಕಾರಿ ಸಾಕಷ್ಟು ಪೂರೈಕೆಯಾಗುತ್ತಿದ್ದರೂ ಚಿಲ್ಲರೆ ವ್ಯಾಪಾರಿಗಳು ಮಾತ್ರ ಬೆಲೆ ಇಳಿಸದಿರುವುದು ಜನರನ್ನು ಸಂಕಷ್ಟಕ್ಕೆ ತಳ್ಳಿದೆ.

ಎಲ್ಲೆಡೆ ಹೆಚ್ಚು ಮಳೆ ಸುರಿಯುತ್ತಿರುವ ಪರಿಣಾಮ ಊಟಿ ಕ್ಯಾರೆಟ್‌ ಇಳುವರಿ ಕುಸಿದಿದೆ. ನಿತ್ಯ ದಾಸನಪುರ ಉಪ ಮಾರುಕಟ್ಟೆಗೆ 5-6 ಲೋಡ್‌ ಬರುತ್ತಿದ್ದ ಊಟಿ ಕ್ಯಾರೆಟ್‌ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಲಾಸಿಪಾಳ್ಯ ಸಗಟು ಮಾರುಕಟ್ಟೆಗೆ 2ರಿಂದ 3 ಲೋಡ್‌ ಊಟಿ, 5 ಲೋಡ್‌ ನಾಟಿ ಕ್ಯಾರೆಟ್‌ ಬರುತ್ತಿದೆ. ಹೀಗಾಗಿ ಪೂರೈಕೆ ಕೊರತೆಯಿಂದ ಊಟಿ ಕ್ಯಾರೆಟ್‌ ದರ ದಾಖಲೆ ಮಟ್ಟಕ್ಕೆ ತಲುಪಿದೆ. ಸಗಟು ಮಾರುಕಟ್ಟೆಯಲ್ಲಿ ಊಟಿ ಕ್ಯಾರೆಟ್‌ಗೆ ಕೆ.ಜಿ. .70ರಿಂದ 90 ರವರೆಗೆ ಬೆಲೆ ಇದೆ. ಇನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ 1 ಕೆ.ಜಿ. ಊಟಿ ಕ್ಯಾರೆಟ್‌ ದರ .150 ಇದ್ದರೆ, ಹಾಪ್‌ಕಾಮ್ಸ್‌ನಲ್ಲಿ 135 ನಿಗದಿಯಾಗಿದೆ.

ಗಗನಕ್ಕೇರಿದ ತರಕಾರಿ ಬೆಲೆ ಏರಿಕೆ: ಕಂಗಾಲಾದ ಜನತೆ

ಸದ್ಯ ರಾಜ್ಯದಲ್ಲಿ ಕ್ಯಾರೆಟ್‌ ಬೆಳೆ ಬಂದಿದೆ. ದಾವಣಗೆರೆ, ಚಿತ್ರದುರ್ಗ ಭಾಗದಿಂದ ನಾಟಿ ಕ್ಯಾರೆಟ್‌ ಬರುತ್ತಿದೆ. ಸ್ಥಳೀಯವಾಗಿ ಬೆಳೆ ಬಂದಿರುವುದರಿಂದ ಮುಂಬರುವ ದಿನಗಳಲ್ಲಿ ಕ್ಯಾರೆಟ್‌ ಬೆಲೆ ಕಡಿಮೆಯಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ಸಗಟು ಮಾರುಕಟ್ಟೆಯಲ್ಲಿ ಕ್ಯಾರೆಟ್‌ .40 ಕೆ.ಜಿ, ನವಿಲುಕೋಸು ಗುಣಮಟ್ಟದ್ದು 50 ಕೆ.ಜಿ.ಗೆ 400-500 (1 ಕೆ.ಜಿ. .10), ಸೌತೆಕಾಯಿ ಒಂದು ಚೀಲಕ್ಕೆ 100, ಹಸಿಮೆಣಸಿನಕಾಯಿ ಕೆ.ಜಿ. 40, ಶುಂಠಿ 60 ಕೆ.ಜಿ.ಗೆ 600-800 (ಕೆ.ಜಿ. .10-15), ಟೊಮಟೋ 14 ಕೆ.ಜಿ. ಬಾಕ್ಸ್‌ಗೆ 200, ಬೀನ್ಸ್‌, ಬೆಂಡೆಕಾಯಿ ಸೇರಿದಂತೆ ಇತರೆ ವಿವಿಧ ತರಕಾರಿಗಳ ಸಗಟು ದರ ಕೆ.ಜಿ.ಗೆ 15-30ರ ಆಸುಪಾಸಿನಲ್ಲಿವೆ. ಇನ್ನು ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಇಳಿಕೆಯಾಗಲಿದೆ ಎಂದು ಯಶವಂತಪುರ-ದಾಸನಪುರ ಮಾರುಕಟ್ಟೆಯ ಮುನೀಂದ್ರ ತಿಳಿಸಿದರು.

ಹಾಪ್‌ಕಾಮ್ಸ್‌ನಲ್ಲಿ ಸೊಪ್ಪು, ತರಕಾರಿ ದರ

ತರಕಾರಿ ದರ

ಊಟಿ ಕ್ಯಾರೆಟ್‌ 135
ನಾಟಿ ಕ್ಯಾರೆಟ್‌ 98
ಬೀಟ್‌ರೂಟ್‌ 58
ಹಾಗಲಕಾಯಿ 48
ಸೋರೆಕಾಯಿ 48
ಸೀಮೆಬದನೆಕಾಯಿ 26
ಸೌತೆಕಾಯಿ 17
ಗೋರಿಕಾಯಿ ಗೊಂಚಲು 75
ದಪ್ಪಮೆಣಸಿನಕಾಯಿ 58
ಬಜ್ಜಿ ಮೆಣಸಿನಕಾಯಿ 53
ಎಲೆಕೋಸು 59
ಹಾರಿಕಾಟ್‌ ಬಿಸ್ಸ್‌ 48
ಡಬಲ್‌ ಬೀಸ್ಸ್‌ 94
ಬೆಂಡೆಕಾಯಿ 52
ಬಟಾಣಿ (ನಾಟಿ) 235
ಹೀರೇಕಾಯಿ 60
ಪಡವಲಕಾಯಿ 36
ಹುರಳೀಕಾಯಿ 36
ಟೊಮೆಟೋ 32
ಈರುಳ್ಳಿ 65
ಮೆಂತ್ಯ ಸೊಪ್ಪು 95
ಆ್ಯಪಲ್‌ ಡೆಲೀಷಿಯಸ್‌ 132
ಪಚ್ಚಬಾಳೆ 24
ಚಂದ್ರಬಾಳೆ 70
ನೇಂದ್ರಬಾಳೆ 60
ಅನಾನಸ್‌ 48