ಮೈಸೂರು (ಫೆ.22):  ಕರ್ನಾಟಕ ರಾಜ್ಯ ಜಾತಿಯ ರಾಜ್ಯ ಆಗಬಾರದು. ಭಾಷೆಯ ರಾಜ್ಯ ಆಗಬೇಕು. ಇದು ನಮ್ಮ ಸಿದ್ಧಾಂತವಾಗಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್‌ ಅವರು ಮೈಸೂರಿನ ಜಯಚಾಮರಾಜ (ಹಾರ್ಡಿಂಜ್‌) ವೃತ್ತದಲ್ಲಿ ಭಾನುವಾರ ಪ್ರತಿಭಟಿಸಿದರು.

ಈ ವೇಳೆ ವಾಟಾಳ್‌ ನಾಗರಾಜ್‌ ಮಾತನಾಡಿ, ಮೀಸಲಾತಿಗಾಗಿ ಆಗ್ರಹಿಸಿ ಮಠಾಧಿಪತಿಗಳು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಖಂಡನಿಯ. ಮಠಾಧಿಪತಿಗಳು ಬೀದಿಗಳಿಯಲು ಮಾಯಾವಿ ಯಡಿಯೂರಪ್ಪ ಕಾರಣ. ಮಠಾಧೀಶರು ಬಸವಣ್ಣನ ತತ್ವ ಒಪ್ಪಿದ್ರೆ ಹೋರಾಟ ನಡೆಸಬೇಡಿ, ಈ ಹೋರಾಟಗಳಿಂದ ನಿಮ್ಮ ಶಕ್ತಿಗೆ ಕುಂದಾಗುತ್ತೆ. ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ರಾಜ್ಯ. ಜಾತಿ ಬಿಟ್ಟು ಕನ್ನಡ ನಾಡಿಗಾಗಿ, ಭಾಷಾ ಚಳವಳಿಗೆ ಬನ್ನಿ. ಮಠಾಧೀಶರು ಹೀಗಾದರೇ ಚುನಾವಣೆಗೆ ಬರಬಹುದು. ಸಂಸತ್‌, ಅಸೆಂಬ್ಲಿ ಪ್ರವೇಶ ಮಾಡ್ತಾರೆ ಎಂದು ಕಿಡಿಕಾರಿದರು.

'ಪ್ರೇಮಿಗಳ ದಿನಕ್ಕೆ ಸರ್ಕಾರಿ ರಜೆ : ಪ್ರೇಮ ವಿವಾಹಕ್ಕೆ 5 ಲಕ್ಷ ರು.' ..

ರಾಜ್ಯದಲ್ಲಿ ಯಡಿಯೂರಪ್ಪ ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ಯಡಿಯೂರಪ್ಪ ಕೆಲವರನ್ನು ಪಾದಯಾತ್ರೆ ಮಾಡಿ, ಮೆರವಣಿಗೆ ಮಾಡಿ ಅಂತ ಹೇಳುತ್ತಾರೆ. ಒಂದು ಕ್ಷಣ ಅವರು ಅಧಿಕಾರದಲ್ಲಿ ಇರಲು ಯೋಗ್ಯತೆ ಇಲ್ಲ. ಈ ಕೂಡಲೇ ಅವರು ರಾಜೀನಾಮೆ ನೀಡಬೇಕು. ನೀವು ಒಂದು ಕಡೆ, ನಿಮ್ಮ ಮಗ ಒಂದು ಕಡೆ ರಾಜ್ಯ ಹಾಳು ಮಾಡುತ್ತಾ ಇದ್ದೀರಿ. ಜಾತಿ ರಾಜಕಾರಣ ಬಿಡಿ, ಭಾಷೆ ರಾಜಕಾರಣ ಮಾಡಿ ಎಂದು ಅವರು ಆಗ್ರಹಿಸಿದರು.

ಸಿದ್ದರಾಮಯ್ಯ ಒಬ್ಬ ಪ್ರಬುದ್ದ ರಾಜಕಾರಣಿ. ಆದರೆ, ರಾಮ ಮಂದಿರ ದೇಣಿಗೆ ಸಂಗ್ರಹ ವಿಚಾರದಲ್ಲಿ ಈ ಹಂತಕ್ಕೆ ಇಳಿಯಬಾರದು. ವಾಟಾಳ್‌ ಹತ್ತಿರ ದುಡ್ಡಿಲ್ಲ ಅಂತ ನನ್ನ ಬಳಿ ಕೇಳಿಲ್ಲ. ನಮ್ಮ ಶಾಸಕರು, ಸಂಸದರಿಗೆ ರಾಜ್ಯ ಬೇಕಿಲ್ಲ. ರಾತ್ರೋರಾತ್ರಿ ತೈಲ ಬೆಲೆ ಏರಿಕೆಯಿಂದ ಬಡವರ ಬೆನ್ನು ಮೂಳೆ ಮುರಿದಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಬಡವರನ್ನ ತುಳಿದು ನಾಶ ಮಾಡುತ್ತಿವೆ ಎಂದು ಕಿಡಿಕಾರಿದ ಅವರು, ಸಿದ್ದರಾಮಯ್ಯ ಆಗಲಿ, ಜೆಡಿಎಸ್‌, ಬಿಜೆಪಿ ಆಗಲಿ ಜಾತಿ ಹೆಸರಲ್ಲಿ ರಾಜಕಾರಣ ಬೇಡ. ಭಾಷಾ ರಾಜಕಾರಣಕ್ಕೆ ಬನ್ನಿ ಎಂದು ಕರೆ ನೀಡಿದರು.

ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ವಿರುದ್ಧ ಕಿಡಿಕಾರಿದ ಅವರು, ಬಾಂಬೆ ಅರ್ಧ ನಮಗೆ ಸೇರಬೇಕು. ಸೊಲ್ಲಾಪುರ ನಮಗೆ ಸೇರಬೇಕು. ಹೀಗಾಗಿ ಬೆಳಗಾವಿ ಗಡಿ, ಕಾರವಾರ ಆಗಲಿ, ಸೊಲ್ಲಾಪುರ, ಬೀದರ್‌ ಆಗಲಿ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಕನ್ನಡಪರ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ ಮೊದಲಾದವರು ಇದ್ದರು.